×
Ad

ಬಾರದ ಅಚ್ಛೇದಿನ್, ಹೆಚ್ಚಿದ ಉದ್ವಿಗ್ನತೆಯಿಂದ ಕುಂದಿದ ಮೋದಿ ಪ್ರಭಾವ : ವಾಶಿಂಗ್ಟನ್ ಟೈಮ್ಸ್ ವರದಿ

Update: 2016-02-09 19:22 IST

ಹೊಸದಿಲ್ಲಿ , ಫೆ. ೯ : ೨೦೧೪ ರಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸುವ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವ ಭರವಸೆ ನೀಡಿ , ಒಬಾಮ ರೀತಿಯ ಚುನಾವಣಾ ಪ್ರಚಾರದ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫ಼ಲವಾಗಿದೆ ಎಂದು ಅಮೇರಿಕಾದ ದಿ ವಾಶಿಂಗ್ಟನ್ ಟೈಮ್ಸ್ ತನ್ನ ವಿಶೇಷ ವರದಿಯಲ್ಲಿ ತಿಳಿಸಿದೆ. 

ಜೊತೆಗೆ ಮೋದಿಯವರ ಹಿಂದುತ್ವವಾದಿ ನಿಲುವಿನಿಂದ ದೇಶದಲ್ಲಿ ಮತೀಯ ಉದ್ವಿಗ್ನತೆಯ ವಾತಾವರಣ ನಿರ್ಮಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಕುಂದು ತಂದಿದೆ ಎಂದೂ ಅದು ಹೇಳಿದೆ. 

ಇತ್ತೀಚಿನ ಎಬಿಪಿ ನೀಲ್ಸನ್ ಸಮೀಕ್ಷೆಯ ಪ್ರಕಾರ ೫೪% ಜನ ಮೋದಿಯ ಆಡಳಿತ ಪರವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ೪೭% ಮಂದಿ ಆಡಳಿತ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ. ಮೋದಿ ಅಧಿಕಾರಕ್ಕೆ ಬಂಡ ಮೇಲೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದು ಇದೇ ಮೊದಲು ಎಂದು ಸಮೀಕ್ಷೆ ಹೇಳಿದೆ. ಮೋದಿ ತನ್ನ " ಅಚ್ಛೇ ದಿನ್ " ಭರವಸೆಯನ್ನೂ ಈಡೇರಿಸಿಲ್ಲ ಎಂದು ಇವರು ದೂರಿದ್ದಾರೆ. 42% ಜನ ಮೋದಿ ಅಧಿಕಾರಕ್ಕೆ ಬಂಡ ಮೇಲೆ ನಮ್ಮ ಜೀವನ ಸುಧಾರಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಭೂ ಸ್ವಾಧೀನ ಹಾಗು ತೆರಿಗೆ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರುವ ನಿರೀಕ್ಷೆ ಮೂಡಿಸಿದ್ದ ಮಸೂದೆಗಳನ್ನು ಜಾರಿಗೆ ತರಲು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮೋದಿ ಸರಕಾರ ವಿಫ಼ಲವಾಗಿದೆ. ಈ ಪ್ರಮುಖ ಮಸೂದೆಗಳು ಬಾರದೆ ವಿದೇಶಿ ಹಾಗು ಸ್ವದೇಶೀ ಹೂಡಿಕೆದಾರರು ದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಮೂಲಭೂತ ಸೌಲಭ್ಯ ಸುಧಾರಿಸಲು ಖರ್ಚು ಮಾಡುವ ಸರಕಾರದ ಸಾಮರ್ಥ್ಯ ಕುಂದಿದೆ ಎಂದೂ ವಾಶಿಂಗ್ಟನ್ ಟೈಮ್ಸ್ ಹೇಳಿದೆ. 

ವರದಿಯಲ್ಲಿ ಪ್ರಧಾನಿ ಮೋದಿಯವರು ಆರೆಸ್ಸೆಸ್ ಹಾಗು ಇತರ ಹಿಂದುತ್ವ ಸಂಘಟನೆಗಳ ಪ್ರಚೋದನಕಾರಿ ಚಟುವಟಿಕೆಗಳಿಗೆ ಮೌನದ ಮೂಲಕ ಪರೋಕ್ಷ ಸಮ್ಮತಿ ನೀಡುತ್ತಿದ್ದಾರೆ. ಇಂತಹ ಮತಾಂಧ ಸಂಘಟನೆಗಳಿಗೆ ರಾಜಕೀಯ ಲಾಭ ಸಿಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಬೆಂಬಲ ನೀಡುತ್ತಿದೆ.  ಇದರಿಂದ ದೇಶದ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಿದೆ. ದೇಶದಲ್ಲಿ ಮತೀಯ ಉದ್ವಿಗ್ನತೆ ಬೆಳೆಯಲು ಪ್ರಧಾನಿ ನೇರ ಕಾರಣ ಅಲ್ಲ. ಆದರೆ ಈ ಬೆಳವಣಿಗೆಯ ಬಗ್ಗೆ ಅವರು ಮೌನ ವಹಿಸಿರುವುದು ಸಮಸ್ಯೆಯ ಮೂಲವಾಗಿದ್ದು ಇದಕ್ಕೆ ಬಿಜೆಪಿ ದೊಡ್ಡ ಬೆಲೆ ತೆರುತ್ತದೆ. ಈ ಪರೋಕ್ಷ ಬೆಂಬಲದಿಂದ ಅದು ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಂತೆ. ಇದು ಪ್ರಧಾನಿಯ ಅಭಿವೃದ್ಧಿ ಚಿಂತನೆಗೆ ಪೂರಕವಾಗಿಲ್ಲ  ಎಂದು ವಿವಿಧ ರಾಜಕೀಯ ವಿಶ್ಲೇಷಕರನ್ನು ಉಲ್ಲೇಖಿಸಿ ವರದಿ ಹೇಳಿದೆ. 

ಪತ್ರಿಕೆ ಬಿಜೆಪಿ , ಕಾಂಗ್ರೆಸ್ ಸಹಿತ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಚಿಂತಕರು , ವಿಶ್ಲೇಷಕರುಗಳೊಂದಿಗೆ ಮಾತನಾಡಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News