ಉತ್ತರ ಪ್ರದೇಶ: ಒಂದನೆ ತರಗತಿ ಬಾಲಕಿಯ ಅತ್ಯಾಚಾರ!
ಉತ್ತರ ಪ್ರದೇಶದಲ್ಲಿ ಲೈಂಗಿಕ ಅಪರಾಧಗಳು ನಿರಂತರ ಹೆಚ್ಚಳವಾಗುತ್ತಿವೆ. ಒಂದನೆ ತರಗತಿಯಲ್ಲಿ ಕಲಿಯುವ ಪುಟ್ಟ ಬಾಲಕಿಯೊಬ್ಬಳನ್ನು ಅತ್ಯಾಚಾರ ನಡೆಸಲಾದ ಘಟನೆ ಇದೀಗ ವರದಿಯಾಗಿದೆ. ಅಖಿಲೇಶ್ ಯಾದವ್‌ರ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಇಂತಹ ಘಟನೆಗಳು ಕಾರಣವಾಗುತ್ತಿವೆ. ಶಾಮ್ಲಿ ಕಾಂದ್ಲಾದಲ್ಲಿ ತಾನು ಕಲಿಯುತ್ತಿದ್ದ ಶಾಲೆಯಿಂದ ಹಿಂದಿರುಗುತ್ತಿದ್ದ ಅಮಾಯ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಯುವಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕಾಂದ್ಲಾ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಹುಡುಕುತ್ತಿದ್ದಾರೆ.
ಆತ ಪರಾರಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ ಶಾಲೆಯಿಂದ ಮರಳುತ್ತಿದ್ದಾಗ ಅವನು ಈ ದುಷ್ಕರ್ಮವೆಸಗಿದ್ದಾನೆ. ಹುಡುಗಿ ಹೆಚ್ಚು ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಹುಡುಕಾಡಿದಾಗ ನಿರ್ಜನ ಸ್ಥಳವೊಂದರಲ್ಲಿ ಅಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ನೋಡಿದ ಗ್ರಾಮಸ್ಥರು ಮನೆಯವರಿಗೆ ವಿಷಯ ತಿಳಿಸಿದ್ದರು. ಗ್ರಾಮದ ಖಾಸಗಿ ವೈದ್ಯನೊಬ್ಬನಲ್ಲಿ ಬಾಲಕಿಗೆ ಚಿಕಿತ್ಸೆ ಮಾಡಿಸಿ ಅವಳಿಗೆ ಪ್ರಜ್ಞೆ ಬಂದಾಗ ತನ್ನಮೇಲೆ ಸಾಗರ್ ಎಂಬಾತ ಅತ್ಯಾಚಾರ ನಡೆಸಿರುವುದನ್ನು ತಿಳಿಸಿದ್ದಾಳೆ. ಮನೆಯವರು ಪೊಲೀಸರಿಗೆ ದೂರು ನೀಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಠಾಣಾಧಿಕಾರಿ ನರೇಶ್ ಯಾದವ್ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.