×
Ad

ಸವಾಲುಗಳನ್ನು ಇಷ್ಟಪಡುತ್ತಿದ್ದ ಹುತಾತ್ಮ ಯೋಧ ಹನುಮಂತಪ್ಪ

Update: 2016-02-11 20:48 IST

ಹೊಸದಿಲ್ಲಿ,ಫೆ.11: ಆತ ಸಾವೇ ಎದುರಾದರೂ ಒಂದಿನಿತೂ ಅಳುಕದೆ ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮನೋಸ್ಥೈರ್ಯ ಹೊದಿದ್ದ. ಆತ ಕರ್ನಾಟಕದ ಗಂಡುಸೀಮೆಯ ಮಣ್ಣಿನ ಮಗ, ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಟನ್‌ಗಟ್ಟಲೆ ಹಿಮದ ರಾಶಿಯ ಅಡಿಯಲ್ಲಿ ಆರು ದಿನಗಳ ಕಾಲ ಸಿಲುಕಿಯೂ ಜೀವಂತ ಹೊರಬಂದಿದ್ದನಾದರೂ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಮೂರು ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಾವಿನ ಮಡಿಲು ಸೇರಿದ ಹನುಮಂತಪ್ಪ ಕೊಪ್ಪದ. ಇನ್ನೂ 33ರ ಹರೆಯದ,ಅತ್ಯುತ್ತಮ ದೇಹದಾರ್ಢ್ಯ ಹೊಂದಿದ್ದ ಹನುಮಂತಪ್ಪ ಒಂದಕ್ಕಿಂತ ಹೆಚ್ಚು ಬಾರಿ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಣೆಗೆ ಸ್ವಯಂ ಇಚ್ಛೆಯಿಂದಲೇ ತೆರಳಿದ್ದ ಧೀರನಾಗಿದ್ದ. ಸೇನೆಯಲ್ಲಿ ತನ್ನ 13 ವರ್ಷಗಳ ಸೇವಾವಧಿಯಲ್ಲಿ 10 ವರ್ಷಗಳನ್ನು ಆತ ಇಂತಹ ದುರ್ಗಮ ಪ್ರದೇಶಗಳಲ್ಲಿಯೇ ಕಳೆದಿದ್ದ. ವೈಯಕ್ತಿಕವಾಗಿ ಹೇಳುವದಾದರೆ ಸದಾ ಹಸನ್ಮುಖಿಯಾಗಿದ್ದ ಆತ ತನ್ನ ಸೇನಾ ಸಹೋದ್ಯೋಗಿಗಳು ಮತ್ತು ತನ್ನ ಕೈಕೆಳಗಿನವರೊಂದಿಗೆ ಸೌಹಾರ್ದ ಸಂಬಂಧಗಳನ್ನು ಹೊಂದಿದ್ದ.


ಧಾರವಾಡ ಜಿಲ್ಲೆಯ ಬೆಟದೂರಿನ ಹನುಮಂತಪ್ಪ 2002,ಅ.25ರಂದು ಮದ್ರಾಸ್ ರೆಜಿಮೆಂಟ್‌ನ 19ನೇ ಬಟಾಲಿಯನ್‌ನಲ್ಲಿ ಯೋಧನಾಗಿ ತನ್ನ ರಾಷ್ಟ್ರರಕ್ಷಣೆ ಕೈಂಕರ್ಯಕ್ಕೆ ನಾಂದಿ ಹಾಡಿದ್ದ. 2003-2006ರ ಅವಧಿಯಲ್ಲಿ ಜಮ್ಮು-ಕಾಶ್ಮೀರದ ಮಾಹೋರ್‌ನಲ್ಲಿ ನಿಯೋಜಿಸಲ್ಪಟ್ಟಿದ್ದ ಹನುಮಂತಪ್ಪ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ.


 2008-2010ರ ಅವಧಿಯಲ್ಲಿ ಮತ್ತೊಮ್ಮೆ ತಾನೇ ಇಷ್ಟಪಟ್ಟು ಜಮ್ಮು-ಕಾಶ್ಮೀರದಲ್ಲಿ 54 ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದ ಆತ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದ. ಸ್ವಂತ ಇಚ್ಛೆಯಿಂದಲೇ 2010-2012ರ ಅವಧಿಯಲ್ಲಿ ಈಶಾನ್ಯ ಭಾರತದಲ್ಲಿ ಸೇವೆಗೆ ತೆರಳಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಎನ್‌ಡಿಎಫ್‌ಬಿ ಮತ್ತು ಉಲ್ಫಾ ವಿರುದ್ಧದ ಯಶಸ್ವಿ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ.
2015,ಆಗಸ್ಟ್‌ನಿಂದ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತಪ್ಪನನ್ನು ಮೈನಸ್ 40 ಡಿ.ಸೆ.ಗಿಂತಲೂ ಕಡಿಮೆ ಉಷ್ಣಾಂಶವಿರುವ, ಮೈಯನ್ನು ಹೆಪ್ಪುಗಟ್ಟಿಸುವ ಗಂಟೆಗೆ 100 ಕಿ.ಮೀ.ಗೂ ಅಧಿಕ ವೇಗದಲ್ಲಿ ಹಿಮಮಾರುತ ಬೀಸುವ ವಿಶ್ವದ ಅತ್ಯಂತ ಎತ್ತರದ ಸೇನಾನೆಲೆಗಳಲ್ಲೊಂದರಲ್ಲಿ ನಿಯೋಜಿಸಲಾಗಿತ್ತು.


ಫೆ.3ರಂದು ಹಿಮಪಾತಕ್ಕೆ ತಮ್ಮ ಶಿಬಿರ ತುತ್ತಾದಾಗ ಹನುಮಂತಪ್ಪ ತನ್ನ ತಂಡದ ಸದಸ್ಯರೊಂದಿಗೆ ವಿಶ್ವದಲ್ಲಿಯೇ ಅತ್ಯಂತ ಎತ್ತರದ,ಖಾಯಂ ಕಾವಲಿರುವ ಸೇನೆಯ ಸೋನಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸಿಯಾಚಿನ್ ಗ್ಲೇಸಿಯರ್‌ನಲ್ಲಿಯ ಯೋಧರಿಗೆ ಅಗತ್ಯ ಸಾಮಗ್ರಿಗಳನ್ನು ಹೊತ್ತು ತರುವ ಹೆಲಿಕಾಪ್ಟರ್‌ಗಳಿಗಾಗಿ ನಿರ್ಮಾಣಗೊಂಡಿರುವ ಹೆಲಿಪ್ಯಾಡ್‌ನ್ನು ಈ ತಂಡ ನಿರ್ವಹಿಸುತ್ತಿತ್ತು. ಓರ್ವ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಒಂಭತ್ತು ಯೋಧರು ಜೀವಂತ ಹಿಮಸಮಾಧಿಯಾಗಿದ್ದರೆ, ಹನುಮಂತಪ್ಪ ಕೆಲವು ದಿನಗಳ ಮಟ್ಟಿಗಾದರೂ ಸಾವನ್ನು ಹಿಮ್ಮೆಟ್ಟಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News