×
Ad

ಐಪಿಎಲ್ ಫಿಕ್ಸಿಂಗ್: ಪಾಕ್ ಅಂಪೈರ್ ರವೂಫ್‌ಗೆ ಬಿಸಿಸಿಐ ನಿಷೇಧ

Update: 2016-02-12 18:13 IST

ಮುಂಬೈ, ಫೆ.12: ಐಪಿಎಲ್ ಟೂರ್ನಿಯಲ್ಲಿ ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ಭಾಗಿಯಾಗಿ ಕ್ರಿಕೆಟ್‌ನ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ಪಾಕಿಸ್ತಾನದ ಕಳಂಕಿತ ಅಂಪೈರ್ ಅಸದ್ ರವೂಫ್‌ಗೆ ಬಿಸಿಸಿಐ ಐದು ವರ್ಷಗಳ ಕಾಲ ನಿಷೇಧ ಹೇರಿದೆ.

ಐಸಿಸಿ ಎಲೈಟ್ ಪ್ಯಾನಲ್‌ನಲ್ಲಿದ್ದ, ಹಲವಾರು ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ 59ರ ಹರೆಯದ ರವೂಫ್ 2013ರ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸಿದ್ದಲ್ಲದೆ, ಬುಕ್ಕಿಗಳಿಂದ ದುಬಾರಿ ಬೆಲೆಯ ಉಡುಗೊರೆಗಳನ್ನು ಸ್ವೀಕರಿಸಿದ್ದ ಆರೋಪ ಎದುರಿಸುತ್ತಿದ್ದಾರೆ.

ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ನಿರಂಜನ್ ಶಾ ಅವರಿದ್ದ ಬಿಸಿಸಿಐನ ಶಿಸ್ತು ಸಮಿತಿ ಶುಕ್ರವಾರ ಪಾಕ್ ಅಂಪೈರ್ ರವೂಫ್‌ಗೆ ನಿಷೇಧ ವಿಧಿಸುವ ತೀರ್ಮಾನ ಕೈಗೊಂಡಿದೆ.

ರವೂಫ್ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದ ತಕ್ಷಣ ಪಾಕಿಸ್ತಾನವು ಐಸಿಸಿ ಎಲೈಟ್ ಪ್ಯಾನಲ್‌ನಿಂದ ರವೂಫ್ ಹೆಸರನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಬಿಸಿಸಿಐ ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಅಸದ್ ರವೂಫ್ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸದಂತೆ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಳೆದ ತಿಂಗಳು ಹರ್ಯಾಣದ ಆಫ್-ಸ್ಪಿನ್ನರ್ ಅಜಿತ್ ಚಾಂಡಿಲಾರಿಗೆ 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಅಜೀವ ನಿಷೇಧ ವಿಧಿಸಿತ್ತು. ಮುಂಬೈ ದಾಂಡಿಗ ಹಿಕೇನ್ ಶಾ ವಿರುದ್ಧವೂ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು.

ಬಿಸಿಸಿಐಗೆ ತನ್ನನ್ನು ನಿಷೇಧಿಸುವ ಅಧಿಕಾರವಿಲ್ಲ: ರವೂಫ್

ಕರಾಚಿ, ಫೆ.12: ‘‘ತನ್ನ ವಿರುದ್ಧದ ಆರೋಪ ಸಾಬೀತುಪಡಿಸುವ ಪುರಾವೆಗಳು ಬಿಸಿಸಿಐ ಬಳಿ ಇಲ್ಲ. ಬಿಸಿಸಿಐ ಅಥವಾ ಐಪಿಎಲ್‌ಗೆ ತನ್ನ ಮೇಲೆ ನಿಷೇಧ ಹೇರುವ ಅಧಿಕಾರವಿಲ್ಲ. ಮುಂಬೈನ ನ್ಯಾಯಾಲಯ ಅಲ್ಲಿನ ಪೊಲೀಸರಿಗೆ ತನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿತ್ತು’’ಎಂದು ಕಳಂಕಿತ ಪಾಕಿಸ್ತಾನದ ಅಂಪೈರ್ ಅಸದ್ ರವೂಫ್ ಹೇಳಿದ್ದಾರೆ.

ರವೂಫ್‌ಗೆ 2013ರ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಅರೋಪದಲ್ಲಿ ಬಿಸಿಸಿಐ ಶುಕ್ರವಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ. 13 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ರವೂಫ್ ಇನ್ನು ಮುಂದೆ ಬಿಸಿಸಿಐಗೆ ಸಂಬಂಧಪಟ್ಟ ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವಂತಿಲ್ಲ.

ಬಿಸಿಸಿಐ ಹಾಗೂ ಐಪಿಎಲ್‌ನಿಂದ ನೇಮಿಲ್ಪಟ್ಟಿರುವ ತನಿಖಾ ಸಮಿತಿಯು ತಾನು ಭಾರತದಿಂದ ಐಪಿಎಲ್ ಕೆಲಸವನ್ನು ಪೂರ್ಣಗೊಳಿಸದೇ ಪಾಕ್‌ಗೆ ಮರಳಿದ್ದೆ ಎಂದು ಹೇಳಿದೆೆ. ಅದರಲ್ಲಿ ಸತ್ಯಾಂಶವಿಲ್ಲ. ನಾನು ಐಪಿಎಲ್‌ನ ಎಲ್ಲ ಕೆಲಸವನ್ನು ಮುಗಿಸಿಕೊಂಡು ತವರಿಗೆ ಮರಳಿದ್ದೆ ಎಂದು ರವೂಫ್ ಹೇಳಿದ್ದಾರೆ.

ಪೊಲೀಸರ ತನಿಖೆಯಲ್ಲಿ ತನ್ನಿಂದ ಯಾವುದೇ ತಪ್ಪು ಕಂಡುಬಂದಿಲ್ಲ. ತಿಂಗಳಿಗೆ 3 ಮಿಲಿಯನ್ ರೂಪಾಯಿ ಸಂಪಾದಿಸುತ್ತಿರುವ ತಾನು ಜೀನ್ಸ್, ಟೀ-ಶರ್ಟ್‌ನಂತಹ ಉಡುಗೊರೆ ಸ್ವೀಕರಿಸುವುದು ತಪ್ಪಲ್ಲ ಎಂದು ನ್ಯಾಯಾಲಯವೇ ಹೇಳಿರುವುದಾಗಿ ರವೂಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News