×
Ad

ಜೆಎನ್‌ಯು ವಿದ್ಯಾರ್ಥಿ ನಾಯಕನ ಸೆರೆ

Update: 2016-02-12 19:28 IST

ಹೊಸದಿಲ್ಲಿ,ಫೆ.12: ಸಂಸತ್ ದಾಳಿಯ ರೂವಾರಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಜವಾಹರಲಾಲ ನೆಹರು ವಿವಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಸಂಬಂಧಿಸಿ ದಾಖಲಾಗಿರುವ ರಾಷ್ಟ್ರದ್ರೋಹ ಮತ್ತು ಕ್ರಿಮಿನಲ್ ಒಳಸಂಚು ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹೈಯಾ ಕುಮಾರ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿರುವ ವಿದ್ಯಾರ್ಥಿ ಒಕ್ಕೂಟವು, ಪೊಲೀಸರು ಸುಳ್ಳು ಆರೋಪಗಳಲ್ಲಿ ವಿದ್ಯಾರ್ಥಿಗಳನ್ನು ಬೇಟೆಯಾಡುತ್ತಿದ್ದಾರೆ ಮತ್ತು ಆರೆಸ್ಸೆಸ್ ಜೆಎನ್‌ಯುವನ್ನು ಮುಚ್ಚಲು ಬಯಸುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ಸಂಸದ ಮಹೇಶ ಗಿರಿ ಮತ್ತು ಎಬಿವಿಪಿ ದೂರುಗಳ ಮೇರೆಗೆ ವಸಂತ ಕುಂಜ್ ಪೊಲೀಸ್ ಠಾಣೆಯಲ್ಲಿ ಗುರುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಮತ್ತು ಕ್ರಿಮಿನಲ್ ಒಳಸಂಚು ಪ್ರಕರಣ ದಾಖಲಾಗಿತ್ತು.ಮಂಗಳವಾರ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಇದಕ್ಕೂ ಮುನ್ನ ಇದೊಂದು ರಾಷ್ಟ್ರವಿರೋಧಿ ಚಟುವಟಿಕೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ದೂರು ನೀಡಿದ ಬಳಿಕ ವಿವಿ ಅಧಿಕಾರಿಗಳು ಅನುಮತಿಯನ್ನು ರದ್ದುಗೊಳಿಸಿದ್ದರೂ ಕಾರ್ಯಕ್ರಮವು ನಡೆದಿತ್ತು. ತನ್ಮಧ್ಯೆ ಕನ್ಹೈಯಾ ಕುಮಾರ ಬಂಧನವನ್ನು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟವು ಖಂಡಿಸಿದೆ.


  ಕ್ಯಾಂಪಸ್‌ನಲ್ಲಿ ಸುತ್ತುತ್ತಿರುವ ಪೊಲೀಸರು ಸುಳ್ಳು ಆರೋಪಗಳಲ್ಲಿ ವಿವೇಚನಾರಹಿತವಾಗಿ ವಿದ್ಯಾರ್ಥಿ ಕಾರ್ಯಕರ್ತರನ್ನು ಬೇಟೆಯಾಡುತ್ತಿದ್ದಾರೆ. ಜೆಎನ್‌ಯುವನ್ನು ಮುಚ್ಚಬೇಕೆಂದು ಆರೆಸ್ಸೆಸ್ ಪ್ರಚಾರ ನಡೆಸುತ್ತಿದೆ. ವಿವಿಯ ಯಾವುದೇ ವಿದ್ಯಾರ್ಥಿ ತತ್ವರಹಿತ ಘೋಷಣೆಗಳನ್ನೆಂದಿಗೂ ಕೂಗಿಲ್ಲವಾದರೂ ಮಾಧ್ಯಮಗಳು ನಮ್ಮನ್ನು ಸೈತಾನರಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿವೆ. ವಾಸ್ತವದಲ್ಲಿ ಭಾರತದ ವಿಭಜನೆ ಮತ್ತು ನಾಶಕ್ಕೆ ಕರೆ ನೀಡಿದ್ದ ಘೋಷಣೆಗಳನ್ನು ನಾವು ತಡೆದಿದ್ದೆವು. ಏಕೆಂದರೆ ಭಾರತದ ವಿಭಜನೆ ಮತ್ತು ನಾಶದ ರಾಜಕೀಯದಲ್ಲಿ ನಮಗೆ ನಂಬಿಕೆಯಿಲ್ಲ. ಜನರನ್ನು ಒಗ್ಗಟ್ಟಾಗಿಸುವಲ್ಲಿ ನಾವು ನಂಬಿಕೆಯನ್ನಿರಿಸಿದ್ದೇವೆ ಎಂದು ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.


ರೋಹಿತ ವೇಮುಲಾರಂತೆ ನಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಪೊಲೀಸರು ಬಯಸುತ್ತಿದ್ದಾರೆ. ಆದರೆ ಪ್ರತಿ ಮೃತ ರೋಹಿತ್ ವಿದ್ಯಾರ್ಥಿ ಚಳವಳಿಗಳನ್ನು ಮತ್ತು ಜನತೆಯ ಏಕತೆಯನ್ನು ಇನ್ನಷ್ಟು ತೀವ್ರಗೊಳಿಸುತ್ತಾನೆ ಎನ್ನುವುದನ್ನು ನಾವು ಪೊಲೀಸರಿಗೆ ನೆನಪಿಸಲು ಬಯಸಿದ್ದೇವೆ ಎಂದು ಅವರು ಹೇಳಿದ್ದಾರೆ.
ವಿವಿಯಲ್ಲಿ ಮತ ಪ್ರದರ್ಶನ ನಡೆಸಿದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ,ರಾಷ್ಟ್ರವಿರೋಧಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಎಚ್ಚರಿಕೆ ನೀಡಿದ್ದರು. ತಾನು ಈ ಬಗ್ಗೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News