ಫಿತೂರ್ : ಕಥೆ ಹಳೆಯದಾದರೂ ಭಾವ ನವವೀನ

Update: 2016-02-13 17:54 GMT

ಇಂಗ್ಲೀಷ್ ಸಾಹಿತ್ಯಲೋಕದ ಮಹಾನ್ ಕಥೆಗಾರ ಚಾರ್ಲ್ಸ್ ಡಿಕನ್ಸ್ ಅವರ ‘ಗ್ರೇಟ್ ಎಕ್ಸ್‌ಪೆಕ್ಟೇಶನ್ಸ್’ ಕಾದಂಬರಿ ಆಧಾರಿತ ಬಾಲಿವುಡ್ ಚಿತ್ರ ‘ಫಿತೂರ್’ ಪ್ರೇಕ್ಷಕರ ಕೆಲವು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಫಲವಾಗಿದೆಯಾದರೂ ಎಲ್ಲವನ್ನೂ ಅಲ್ಲ. ಕಾಶ್ಮೀರದ ಹಿನ್ನೆಲೆಯಲ್ಲಿ ಒಂದು ಪ್ರೇಮಕಥೆಯನ್ನು ಹೇಳಹೊರಟ ನಿರ್ದೇಶಕ ಅಭಿಷೇಕ್ ಕಪೂರ್ , ಪ್ರೇಕ್ಷಕರಿಗೆ ಒಂದು ಅಚ್ಚುಕಟ್ಟಾದ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
 ಚಂದ್ರನ ಬೆಳಕಿನಲ್ಲಿ ಹೊಳೆಯುವ ಹಿಮಾವೃತ ಕಾಶ್ಮೀರ ಕಣಿವೆ,ಮಂಜು ಕವಿದ ಮನೆಗಳು ಹಾಗೂ ಚಿನ್ನದಂತೆ ಮಿರುಗುವ ಎಲೆಗಳು ಇವೆಲ್ಲವೂ ಫಿತೂರ್ ಸೌಂದರ್ಯವನ್ನು ಹೆಚ್ಚಿಸಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಇಂತಹ ರಮ್ಯ ಪರಿಸರದ ಹಿನ್ನೆಲೆಯಲ್ಲಿ ಯುವಕ ನೂರ್ (ಆದಿತ್ಯ),ಸಿಡುಕುಸ್ವಭಾವದ ಶ್ರೀಮಂತ ಬೇಗಂ ಹಝ್ರತ್ (ಟಬು)ಳ ಪುತ್ರಿ ಫಿರ್ದೂಸ್ (ಕತ್ರಿನಾ)ಳ ಪ್ರೇಮಪಾಶಕ್ಕೆ ಬೀಳುತ್ತಾನೆ.
   ಫಿರ್ದೌಸ್ ಉನ್ನತ ಶಿಕ್ಷಣಕ್ಕಾಗಿ ದಿಲ್ಲಿಗೆ ತೆರಳುತ್ತಾಳೆ. ಅಂತೆಯೇ, ನೂರ್ ದಿಲ್ಲಿಯಲ್ಲಿ ಚಿತ್ರಕಲೆಗಾಗಿನ ಸ್ಕಾಲರ್‌ಶಿಪ್ ಗೆಲ್ಲುತ್ತಾನೆ. ಅಲ್ಲಿ ಆಕೆ ಫಿರ್ದೌಸ್‌ನನ್ನು ಮತ್ತೆ ಭೇಟಿಯಾಗುತ್ತಾಳೆ. ಹೀಗೆ ಕಾಶ್ಮೀರ ಕಣಿವೆಯಲ್ಲಿ ಮೂಡಿದ ನೂರ್-ಫಿರ್ದೌಸ್‌ರ ಪ್ರೀತಿ ದಿಲ್ಲಿಯಲ್ಲಿ ಮತ್ತೆ ಚಿಗುರೊಡೆಯುತ್ತದೆ. ಆದರೆ ಆತನ ಬದಲಿಗೆ ಫಿರ್ದೌಸ್ ಪಾಕಿಸ್ತಾನದ ರಾಜಕಾರಣಿ ಬಿಲಾಲ್‌ನನ್ನು ಮದುವೆಯಾಗಲು ನಿರ್ಧರಿಸಿದಾಗ ಚಿತ್ರ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ತನ್ನ ಪುತ್ರಿಯನ್ನು ನೂರ್ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆಂದು ತಿಳಿದ ಹೊರತಾಗಿಯೂ ಯಾಕೆ ಬೇಗಂ, ಫಿರ್ದೌಸ್‌ಳನ್ನು ಆತನಿಂದ ಬೇರ್ಪಡಿಸುತ್ತಾಳೆ?, ನೂರ್‌ನ ಚಿತ್ರಕಲೆಯು ಅಪಾರ ಮನ್ನಣೆ ಗಳಿಸುವಂತೆ ಮಾಡಿದ ನಿಗೂಢ ಪ್ರಾಯೋಜಕರು ಯಾರು?. ಈ ಎಲ್ಲಾ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಬೇಕಾದರೆ, ಫಿತೂರ್ ಚಿತ್ರವನ್ನು ತಪ್ಪದೆ ನೋಡಿ.
       
ಫಿತೂರ್ ಚಿತ್ರದಲ್ಲಿ ಕಲಾವಿದರ ನಟನೆಯು ಕೆಲವು ಭಾಗಗಳಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ. ರಫ್ ಆ್ಯಂಡ್ ಟಫ್ ವ್ಯಕ್ತಿತ್ವದ ಬೇಗಂ ಆಗಿ ಟಬು ಅಭಿನಯ ಬಹಳಸಮಯದವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ. ಒಂದು ಲೆಕ್ಕದಲ್ಲಿ ಟಬು ಅಭಿನಯವೇ ಇಡೀ ಚಿತ್ರದ ಜೀವಾಳವಾಗಿದೆ. ‘ಕೈಸಾ ಕಾಮ್‌ಝರ್ಫ್ ವಖ್ತ್ ಆಗಯಾ ಹೈ’ ಎಂದು ಆಕೆ, ನೂರ್‌ಳೆಡೆಗೆ ದುರುಗುಟ್ಟಿ ನೋಡುತ್ತಾ ಹೇಳಿದರೆ, ಮತ್ತೊಮ್ಮೆ ಆಕೆ ಪುತ್ರಿಯೆಡೆಗೆ ಪ್ರೀತಿಯಿಂದ ಮುಗುಳ್ನಗು ಬೀರುತ್ತಾಳೆ. ಹೀಗೆ ವೈವಿಧ್ಯಮಯ ವ್ಯಕ್ತಿತ್ವವನ್ನು ಟಬೂ ಅತ್ಯಂತ ಪರಿಣಾಮಕಾರಿಯಾಗಿ ತೆರೆಯ ಮೇಲೆ ಅಭಿವ್ಯಕ್ತಗೊಳಿಸಿದ್ದಾಳೆ. ಟಬು ತಾನೊಬ್ಬ ಅಪ್ಪಟ ಪ್ರತಿಭಾವಂತ ನಟಿಯೆಂಬುದನ್ನು ಪ್ರತಿ ಫ್ರೇಮ್‌ನಲ್ಲೂ ನಿರೂಪಿಸಿದ್ದಾಳೆ. ‘ಆಶಿಕಿ2’ ಖ್ಯಾತಿಯ ಆದಿತ್ಯ ರಾಯ್ ಕಪೂರ್, ಗೋಜಲಾದ ಜಗತ್ತಿನಲ್ಲಿ ದಾರಿಕಾಣದ ಅಮಾಯಕ ಪ್ರೇಮಿಯ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಕತ್ರಿನಾ ಕೈಫ್ ಚಿತ್ರದುದ್ದಕ್ಕೂ ಸುಂದರವಾಗಿ ಕಾಣುತ್ತಾರಾದರೂ, ನಟನೆ ಮಾತ್ರ ತೀರಾ ಸಪ್ಪೆಯಾಗಿದೆ. ಕಾಶ್ಮೀರಿ ಉಗ್ರಗಾಮಿಯಾಗಿ ಅಜಯ್ ದೇವಗನ್ ಅಭಿನಯ ಪರವಾಗಿಲ್ಲ. ಇದೇ ರೀತಿ, ಬಿಲಾಲ್ ಪಾತ್ರದಲ್ಲಿ ರಾಹುಲ್ ಭಟ್ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಆದಿತಿ ರಾವ್ ಹೈದರಿ ಹಾಗೂ ಲಾರಾದತ್ತಾ ತಮ್ಮ ಲವಲವಿಕೆಯ ಅಭಿನಯದಿಂದ ಗಮನಸೆಳೆಯುತ್ತಾರೆ. ಚಿತ್ರದ ಹಾಡುಗಳು ಹಾಗೂ ಸಂಗೀತದಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಯೇನೂ ಇಲ್ಲ.
ಅನಯ್‌ಗೋಸ್ವಾಮಿ ಅವರ ಅದ್ಭುತ ಛಾಯಾಗ್ರಹಣ ಫಿತೂರ್‌ನ ಪ್ರಮುಖ ಹೈಲೈಟ್‌ಗಳಲ್ಲೊಂದಾಗಿದೆ. ಕಾಶ್ಮೀರದ ಚಿನಾರ್ ಮರಗಳ ಸಾಲುಗಳು,ಮನಸೆಳೆಯುವ ಪ್ರಾರ್ಥನಾ ಮಂದಿರಗಳ ಮಿನಾರಗಳು ಇವು ಚಿತ್ರದ ಸೊಬಗನ್ನು ಹೆಚ್ಜಿಸಿದೆ. ಆದಿಯಿಂದ ಅಂತ್ಯದವರೆಗೂ ಚಿತ್ರವೂ ಎಲ್ಲೂ ತಡವರಿಸದೆ ಚುರುಕಾಗಿ ಸಾಗಿದ್ದು ಪ್ರೇಕ್ಷಕನಿಗೆ ಬೇಸರ ಮೂಡಿಸುವುದಿಲ್ಲ. ನಿರ್ದೇಶಕ ಅಭಿಷೇಕ್ ಕಪೂರ್ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಒಂದು ಖ್ಯಾತ ಆಂಗ್ಲ ಕಾದಂಬರಿಯನ್ನು , ಕಾಶ್ಮೀರದ ಹಿನ್ನೆಲೆಯೊಂದಿಗೆ ತೆರೆಯ ಮೇಲೆ ಮೂಡಿಸಿರುವ ನಿರ್ದೇಶಕ ಅಭಿಷೇಕ್ ಕಪೂರ್‌ರ ಸಾಹಸ ಮೆಚ್ಚಲೇಬೇಕು. ಆದರೆ ಕಾದಂಬರಿಯಲ್ಲಿರುವಂತಹ ಭಾವತೀವ್ರತೆ, ಕತೆಯ ವೈಶಾಲ್ಯತೆ ಇಲ್ಲಿ ಮಿಸ್ ಆಗಿದೆ. ಕೇವಲ ಒಂದು ಪ್ರಣಯ ಕಥೆಯಾಗಿ ಫಿತೂರ್ ಗೆದ್ದಿದೆಯಾದರೂ, ಕಾದಂಬರಿಯ ಸಮಗ್ರ ಅಂತಸತ್ವವನ್ನು ತೆರೆಯ ಮೇಲೆ ಅನಾವರಣಗಗೊಳಿಸಲು ಅದಕ್ಕೆ ಸಾಧ್ಯವಿಲ್ಲ.
ಅದೇನಿದ್ದರೂ, ಪರಿಶುದ್ಧ ಪ್ರೇಮಕತೆಯನ್ನು ಇಷ್ಟಪಡುವವರಿಗೆ ಫಿತೂರ್ ಇಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News