ಜಯಲಲಿತಾರ ತ.ನಾಡಿನಲ್ಲೀಗ ಉಚಿತ ‘‘ಅಮ್ಮಾ ಕುಡಿಯುವ ನೀರು’’
ಚೆನ್ನೈ,ಫೆ.13: ಅಮ್ಮಾ ಕ್ಯಾಂಟೀನ್,ಅಮ್ಮಾ ಮಿನರಲ್ ವಾಟರ್ ಇತ್ಯಾದಿ ಜನಪ್ರಿಯ ಯೋಜನೆಗಳಿಂದ ಖ್ಯಾತಿ ಗಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬಡವರು ಮತ್ತು ದುರ್ಬಲ ವರ್ಗಗಳಿಗೆ ಉಚಿತ ಖನಿಜಯುಕ್ತ ನೀರನ್ನು ಒದಗಿಸಲು ‘‘ಅಮ್ಮಾ ಕುಡಿಯುವ ನೀರಿನ ಯೋಜನೆ’’ಗೆ ಶನಿವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರತಿ ಕುಟುಂಬವು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಮೂಲಕ ಪ್ರತಿ ದಿನ 20 ಲೀಟರ್ ಕುಡಿಯುವ ನೀರನ್ನು ಉಚಿತವಾಗಿ ಪಡೆಯಲಿದೆ.
ಕಳೆದ 56 ತಿಂಗಳುಗಳಲ್ಲಿ ಸರಕಾರವು 7,324.34 ಕೋ.ರೂ.ವೆಚ್ಚದಲ್ಲಿ ವಿವಿಧ ಕುಡಿಯುವ ನೀರಿನ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು,ವಸತಿ ಬಡಾವಣೆಗಳಿಗೆ ಖನಿಜಯುಕ್ತ ನೀರು ದೊರೆಯುವಂತಾಗಲು 6,602.78 ಕೋ.ರೂ.ಒಟ್ಟು ವೆಚ್ಚದಲ್ಲಿ 69 ಹೊಸ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಜಯಲಲಿತಾ ಈ ಸಂದರ್ಭದಲ್ಲಿ ತಿಳಿಸಿದರು.
ಮೊದಲ ಹಂತದಲ್ಲಿ ಬಡವರು ಮತ್ತು ದುರ್ಬಲ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ 100 ಸ್ಥಳಗಳಲ್ಲಿ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಲಾಗಿದೆ.