ಮುಸ್ಲಿಂ ವಿರೋಧಿ ಬರಹ: ಅಸ್ಸಾಂ ಪೋಲಿಸ್ ಅಧಿಕಾರಿ ಅಮಾನತು

Update: 2016-02-14 05:37 GMT

ಗುವಾಹತಿ: ಮುಸಲ್ಮಾನರ ವಿರುದ್ಧ ಫೇಸ್‌ಬುಕ್‌ನಲ್ಲಿ ಬರಹ ದಾಖಲಿಸಿದ್ದಕ್ಕಾಗಿ ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ರಾಜ್ಯದಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿ ವಲಸಿಗರ ವಿವಾದವನ್ನು ತೀವ್ರವಾಗಿ ರಾಜಕೀಯಗೊಳಿಸುತ್ತಿರುವ ಸನ್ನಿವೇಶದಲ್ಲೇ ಈ ಅಮಾನತು ಆದೇಶ ಹೊರಬಿದ್ದಿದೆ.
ಅಂಗ್ಲಾಂಗ್ ಜಿಲ್ಲೆಯ ಡಿವೈಎಸ್ಪಿ ಅಂಜನ್ ಬೋರಾ ಈ ಅಮಾನತಿಗೆ ಒಳಗಾದವರು. ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಮೂಡಿಸುವ ಬರಹವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸ್ನೇಹಿತರನ್ನು ಬೋರಾ ಹೊಂದಿದ್ದು, ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಇದನ್ನು ಬೆಂಬಲಿಸಿದ್ದರು.
ಮುಸಲ್ಮಾನರ ಪ್ರಾರ್ಥನೆ ಕರೆ (ಅಝಾನ್)ಯನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ನನ್ನ ಸೇವಾವಧಿಯಲ್ಲಿ ರಾಜ್ಯದ ಕಾಂಗ್ರೆಸ್ ಮುಖಂಡ ಹಾಗೂ ಬೋಡೊಲ್ಯಾಂಡ್ ಟೆರಿಟೋರಿಯಲ್ ಅಟೊನಮಸ್ ಜಿಲ್ಲೆಯ ಮುಖಂಡ ರಫೀಕ್ ಉಲ್ ಇಸ್ಲಾಂ ಸೇರಿದಂತೆ ಹಲವು ಮಂದಿಯನ್ನು ಹತ್ಯೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರು.
ಜೈಶ್ರೀರಾಂ, ಜೈ ಹಿಂದೂಯಿಸಂ, ಜೈ ಜೈ ಶ್ರೀರಾಂ ಜೈ ಹಿಂದುಭೂಮಿ, ನಾವು ಮುಸ್ಲಿಮ್‌ಮುಕ್ತ ಹಿಂದೂಸ್ತಾನಕ್ಕೆ ಸೇರಬೇಕು ಎಂಬಿತ್ಯಾದಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು.
ಬೋರಾ ಹೇಳಿಕೆಗಳು ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳಿಗೆ ಕಾರನವಾಗಿದ್ದವು. ಅವರನ್ನು ಸೇವೆಯಿಂದ ವಜಾಗೊಳಿಸಿ, ಬಂಧಿಸುವಂತೆ ಹಲವು ಸಂಘಟನೆಗಳು ಆಗ್ರಹಿಸಿದ್ದವು. ಎಬಿಎಂಎಸ್‌ಯು ಪ್ರಚಾರ ಕಾರ್ಯದರ್ಶಿ ಕೆ. ಅಲಿ, ಬೋರಾ ವಿರುದ್ಧ ದೂರನ್ನೂ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News