ಮನಮೋಹನ್ ಸಿಂಗ್ ಉತ್ತಮ ಹಣಕಾಸು ಸಚಿವ: ಜೇಟ್ಲಿ

Update: 2016-02-14 14:20 GMT

ಮುಂಬೈ, ಫೆ.14: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೀತಿಗಳನ್ನು ಪಾರ್ಶ್ವವಾಯುಪೀಡಿತ ಎಂದು ನಿನ್ನೆಯಷ್ಟೇ ಅಣಕಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಇದಕ್ಕೆ ಭಿನ್ನ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಆ ಕಾಂಗ್ರೆಸ್ ಮುಖಂಡ ಹಣಕಾಸು ಸಚಿವರಾಗಿ ಶ್ರೇಷ್ಠ ಕೆಲಸ ಮಾಡಿದರು. ಆದರೆ ಅವರು ಪ್ರಧಾನಿಯಾದ ಬಳಿಕ ಸುಧಾರಣಾ ಪ್ರಕ್ರಿಯೆ ಸ್ಥಗಿತಗೊಂಡಿತು ಎಂದು ಭಾನುವಾರ ಜೇಟ್ಲಿ ಹೇಳಿದ್ದಾರೆ.


ಮೇಕ್ ಇನ್ ಇಂಡಿಯಾ ಸಪ್ತಾಹ ಸಂದರ್ಭದಲ್ಲಿ ಸಿಎನ್‌ಎಸ್ ಏಷ್ಯಾ ಬ್ಯುನಿನೆಸ್ ಫೋರಂನಲ್ಲಿ ಮಾತನಾಡಿದ ಅವರು, ನ್ಯಾಯಬದ್ಧವಾಗಿ ಹೇಳಬೇಕೆಂದರೆ, ಹಣಕಾಸು ಸಚಿವರಾಗಿ ಅವರು ಸುಧಾರಣೆ ಜಾರಿಗೊಳಿಸುವ ಶ್ರೇಷ್ಠ ಕೆಲಸ ಮಾಡಿದರು. ಆ ಪ್ರಕ್ರಿಯೆ ಪ್ರಧಾನಿಯಾದ ಬಳಿಕ ನಿಂತಿತು ಎಂದು ಅಭಿಪ್ರಾಯಪಟ್ಟರು.
ಮೋದಿ ಸರ್ಕಾರ ವಿರೋಧ ಪಕ್ಷಗಳನ್ನು ತಲುಪುವ ಪ್ರಯತ್ನ ಮಾಡುತ್ತಿಲ್ಲ ಹಾಗೂ ದೇಶದ ಆರ್ಥಿಕತೆಯ ಮುನ್ನಡೆಗೆ ಸಾಕಷ್ಟು ಕಾರ್ಯ ಮಾಡುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಟೀಕಿಸಿದ್ದ ಮನಮೋಹನ ಸಿಂಗ್ ಅವರಿಗೆ ಜೇಟ್ಲೆ ಶನಿವಾರ ತಿರುಗೇಟು ನೀಡಿದ್ದರು.


ಯುಪಿಎ ಸರ್ಕಾರದಿಂದ ಎನ್‌ಡಿಎ ಸರ್ಕಾರ ವರ್ಗಾವಣೆ ಎಂದರೆ ಪಾರ್ಶ್ವವಾಯುಪೀಡಿತ ನೀತಿಯಿಂದ ಜಾಗತಿಕವಾಗಿ ಉಜ್ವಲ ಭವಿಷ್ಯದೆಡೆಗೆ ಒಯ್ಯುವ ಪ್ರಯತ್ನ ಎಂದು ಫೇಸ್‌ಬುಕ್‌ನಲ್ಲಿ ಜೇಟ್ಲೆ ಹೇಳಿಕೊಂಡಿದ್ದರು. ಕಾಂಗ್ರೆಸ್‌ನ ಜಿಎಸ್‌ಟಿ ಮಸೂದೆ ಕುರಿತ ನಿಲುವು ವಾಸ್ತವ ರಾಜಕೀಯ ಎಂದು ಟೀಕಿಸಿದ್ದರು. ಯುಪಿಎ ಸರ್ಕಾರದಂತೆ ನೀತಿಗಳು ಅಕ್ಬರ್ ರಸ್ತೆಯ 24ನೇ ಸಂಖ್ಯೆಯ ನಿವಾಸದಲ್ಲಿ ರೂಪುಗೊಳ್ಳುವ ಬದಲಾಗಿ, ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಮೋದಿಯವರ ನಿಲುವೇ ಅಂತಿಮ ಎಂದು ಜೇಟ್ಲೆ ಬಣ್ಣಿಸಿದ್ದರು.
ಮೋದಿ ಸರ್ಕಾರಕ್ಕೆ ವಿಶ್ವಾಸದ ಸಂಘರ್ಷವಿದೆ. ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯನನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ದೇಶದ ಪ್ರತಿಯೊಬ್ಬರ ಕಲ್ಯಾಣದ ಬಗೆಗೂ ಕಾಳಜಿ ಇದೆ ಎನ್ನುವುದನ್ನು ಪ್ರದರ್ಶಿಸಬೇಕು ಎಂದು ಸಿಂಗ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News