ಸಾಕಷ್ಟು ಪುರಾವೆ ಆಧಾರದಲ್ಲಿ ಜೆಎನ್ಯು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು : ಆಯುಕ್ತ ಬಸ್ಸಿ
ಹೊಸದಿಲ್ಲಿ, ಫೆ.15: ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸಿದ ಆರೋಪಕ್ಕೆ ಸಂಬಂಧಿಸಿ ಸಾಕಷ್ಟು ಫೋಟೊ ಹಾಗೂ ವೀಡಿಯೊ ದಾಖಲೆಗಳ ಪುರಾವೆ ದೊರೆತ ಹಿನ್ನೆಲೆಯಲ್ಲಿ ಜವಾಹರಾಲ್ ನೆಹರೂ ವಿವಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲಾಗಿಲ್ಲ. ಯಾರ ಮೇಲೆ ಅಂತಹ ಆರೋಪಗಳಿವೆಯೋ ಅಂತವರ ಬಗ್ಗೆ ಸಾಕಷ್ಟು ಸಾಕ್ಷ್ಯಾಧರಗಳು ದೊರೆತಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳು ಮತ್ತು ಉಗ್ರ ಅಫ್ಝಲ್ ಗುರು ನಡುವಿನ ಸಂಪರ್ಕದ ಬಗ್ಗೆ ವಿಶೇಷ ತನಿಖಾ ತಂಡ ಅಥವಾ ರಾಷ್ಟ್ರೀಯ ತನಿಖಾ ದಳ (ಎನ್‌ಎಐ) ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿಲ್ಲ. ಸ್ಥಳೀಯ ಪೊಲೀಸರು ಆಸಕ್ತಿ ವಹಿಸಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನು ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಎಐ) ಒಪ್ಪಿಸುವ ಪ್ರಸ್ತಾಪ ಇಲ್ಲ. ಪೊಲೀಸರೇ ಈ ಪ್ರಕರಣದ ತನಿಖೆ ಮುಂದುವರಿಸಲಿದ್ದಾರೆಂದು ಪೊಲೀಸ್ ಆಯುಕ್ತ ಬಸ್ಸಿ ಸ್ಪಷ್ಟಪಡಿಸಿದ್ದಾರೆ.
ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವ ಘಟನೆಗಳು ನಡೆದಾಗ ಈ ವಿಚಾರವನ್ನು ನ್ಯಾಯಾಂಗದ ಗಮನ ಸೆಳೆಯಬೇಕಾಗಿರುವುದು ಎಲ್ಲರ ಕರ್ತವ್ಯ. ಎಂದು ಪೊಲೀಸ್ ಆಯುಕ್ತ ಬಸ್ಸಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ ಎಂಬ ಜೆಎನ್ಯು ಶಿಕ್ಷಕರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಬಸ್ಸಿ " ವಿದ್ಯಾರ್ಥಿಗಳು ಉಗ್ರ ಸಂಘಟನೆಯೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ಈಗ ಏನನ್ನು ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕ ಈ ವಿಚಾರ ಹೊರ ಬರಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.