ನ್ಯಾಯಾಲಯದಲ್ಲಿ ಜೆಎನ್‌ಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಹಲ್ಲೆ,ಮೂಕಪ್ರೇಕ್ಷಕರಾದ ಪೊಲೀಸರು
ಹೊಸದಿಲ್ಲಿ,ಫೆ.15: ದಿಲ್ಲಿಯ ನ್ಯಾಯಾಲಯವೊಂದರಲ್ಲಿ ಸೋಮವಾರ ಜವಾಹರಲಾಲ ನೆಹರು ವಿವಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದು,ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯಾ ಕುಮಾರ್ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸುವ ಕೆಲವೇ ಕ್ಷಣಗಳ ಮುನ್ನ ಈ ಹಿಂಸಾಚಾರ ಭುಗಿಲ್ಲೆದ್ದಿತ್ತು.
ಕಪ್ಪು ಜಾಕೆಟ್‌ಗಳನ್ನು ತೊಟ್ಟಿದ್ದ ವಕೀಲರ ಬೃಹತ್ ಗುಂಪೊಂದು ‘‘ಭಾರತ ಚಿರಾಯುವಾಗಲಿ’’ ಮತ್ತು ‘‘ಜೆಎನ್‌ಯುಗೆ ಧಿಕ್ಕಾರ’’ ಎಂಬ ಘೋಣೆಗಳ ನಡುವೆ ಜನರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ. ನಿರಂಕುಶವಾಗಿ ವರ್ತಿಸುತ್ತಿದ್ದ ಈ ಗುಂಪನ್ನು ತಡೆಯುವ ಯಾವುದೇ ಪ್ರಯತ್ನವನ್ನು ಪೊಲೀಸರು ಮಾಡಿರಲಿಲ್ಲ.
ನ್ಯಾಯಾಲಯದ ಹೊರಗೆ ಬಿಜೆಪಿ ಶಾಸಕ ಒ.ಪಿ.ಶರ್ಮಾ ಅವರೂ ಜೆಎನ್‌ಯು ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿತ್ತು.
ನನ್ನನ್ನೂ ಒಳಗೊಂಡಂತೆ ಐವರು ಮಹಿಳೆಯರು ಸೇರಿದಂತೆ ಬೋಧಕ ವೃಂದದ ಏಳು ಜನರ ಮೇಲೆ ಗುಂಪು ಹಲ್ಲೆ ನಡೆಸಿದೆ. ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು ಎಂದು ಜೆಎನ್‌ಯುದಲ್ಲಿ ಪ್ರೊಫೆಸರ್ ಆಗಿರುವ ಆಯೇಷಾ ಕಿದ್ವಾಯಿ ಆರೋಪಿಸಿದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬಲವಂತದಿಂದ ನ್ಯಾಯಾಲಯದ ಹೊರಕ್ಕೆ ದಬ್ಬಿದ ವಕೀಲರು ಪತ್ರಕರ್ತರನ್ನೂ ಬಿಡಲಿಲ್ಲ. ಅವರನ್ನೂ ಥಳಿಸಿ ಬೆದರಿಕೆಯೊಡ್ಡಿದ್ದಲ್ಲದೆ ಅವರ ಮೊಬೈಲ್‌ಗಳನ್ನೂ ಕಿತ್ತುಕೊಂಡರು ಎಂಬ ದೂರುಗಳು ಕೇಳಿಬಂದಿವೆ.
ಪ್ರತಿಯೊಬ್ಬರೂ ಶಾಂತಿಯುತರಾಗಿ ಕುಳಿತುಕೊಂಡಿದ್ದಾಗ ದಿಢೀರನೆ ನುಗ್ಗಿದ ವಕೀಲರ ಗುಂಪು ‘ನೀನು ಜೆಎನ್‌ಯುದವನೇ’ಎಂದು ಅವರನ್ನು ಪ್ರಶ್ನಿಸುತ್ತ ಯಾವುದೇ ಪ್ರಚೋದನೆಯಿಲ್ಲದೆ ಥಳಿಸತೊಡಗಿದ್ದರು.ಅವರು ನನ್ನನ್ನೂ ಬಿಡಲಿಲ್ಲ ಎಂದು ಎನ್‌ಡಿಟಿವಿಯ ಪ್ರತಿನಿಧಿ ಸೋನಾಲ್ ಮೆಹ್ರೋತ್ರಾ ತಿಳಿಸಿದರು.
ಆಘಾತಕ್ಕೊಳಗಾಗಿದ್ದ ಪತ್ರಕರ್ತರು ಹರಿದ ಬಟ್ಟೆಗಳಲ್ಲಿಯೇ ಘಟನೆಯನ್ನು ವರದಿ ಮಾಡುವಂತಾಗಿತ್ತು.