ಮೈಸೂರು ದೇಶದಲ್ಲೇ ಅತ್ಯಂತ ಸ್ವಚ್ಛ ನಗರ
ನವದೆಹಲಿ : ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ರಾಷ್ಟ್ರವ್ಯಾಪಿ10 ಲಕ್ಷಕ್ಕೂ ಹೆಚ್ಚುಜನಸಂಖ್ಯೆ ಹೊಂದಿರುವ 73 ನಗರಗಳಲ್ಲಿ ನಡೆಸಿದ ಸಮೀಕ್ಷೆ ‘ಸ್ವಚ್ಛತಾ ಸರ್ವೇಕ್ಷಣ್’ನಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಪ್ರಥಮ ಸ್ಥಾನ ಪಡೆದು ಭಾರತದ ಅತ್ಯಂತ ಸ್ವಚ್ಛ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾದರೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುತ್ತಿರುವ ವಾರಣಾಸಿ ಸ್ವಚ್ಛತೆಯ ಪಟ್ಟಿಯಲ್ಲಿ ಕೊನೆಯ ಹತ್ತು ನಗರಗಳಲ್ಲಿ ಸೇರಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛಭಾರತ ಅಭಿಯಾನ ಆರಂಭವಾದ ನಂತರ ಕೈಗೆತ್ತಿಕೊಂಡ ಎರಡನೆಯ ಸಮೀಕ್ಷೆ ಇದಾಗಿದ್ದು ಇದರ ವರದಿಯನ್ನು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಬಿಡುಗಡೆಗೊಳಿಸಿದರು.
ವರ್ಷ 2014ರಲ್ಲಿ ನಡೆದ ಸಮೀಕ್ಷೆಯಲ್ಲೂ ಮೈಸೂರು ತಿರುಚಿನಾಪಳ್ಳಿಯೊಂದಿಗೆ ಪ್ರಥಮ ಐದುಸ್ವಚ್ಛ ನಗರಗಳಲ್ಲಿ ಸೇರಿತ್ತು. ಈ ಬಾರಿ ಮೈಸೂರು ಹೊರತಾಗಿ ಚಂಡೀಗಢ, ತಿರುಚಿರಾಪಳ್ಳಿ,ನವದೆಹಲಿ ಮುನಿಸಿಪಲ್ ಕಾರ್ಪೊರೇಶನ್ ಪ್ರದೇಶ,ವಿಶಾಖಪಟ್ಟಣಂ, ಸೂರತ್, ರಾಜ್‌ಕೋಟ್, ಗಾಂಗ್ಟಾಕ್, ಪಿಂಪ್ರಿ ಚಿಂಡ್ವಾಡ್ ಹಾಗೂ ಗ್ರೇಟರ್ ಮುಂಬೈ ಹತ್ತು ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ಕನಿಷ್ಠ ಸ್ವಚ್ಛತೆಯನ್ನೂ ಕಾಪಾಡದ ಕೊನೆಯ ಹತ್ತು ನಗರಗಳಲ್ಲಿ ವಾರಣಾಸಿ ಸೇರಿದಂತೆ ಧನಬಾದ್, ಅಸಾನ್ಸೋಲ್,ಮೀರತ್, ರಾಯ್‌ಪುರ್, ಗಜಿಯಾಬಾದ್, ಜಮ್ಶೆದ್‌ಪುರ್, ಕಲ್ಯಾಣ್ ದೊಂಬಿವಿಲಿ ಹಾಗೂ ಇಟಾನಗರ್ ಸೇರಿವೆ.
ಘನ ತ್ಯಾಜ್ಯ ನಿರ್ವಹಣೆ, ವೈಂಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ಶುಚಿತ್ವ ಕಾಪಾಡಲು ತೆಗೆದುಕೊಂಡ ಕ್ರಮಗಳ ಆಧಾರದಲ್ಲಿ ನಗರಗಳ ಆಯ್ಕೆ ನಡೆದಿತ್ತು.
ಪ್ರಧಾನಿ ಸ್ವತಃ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದರೆ, ಅವರ ಕ್ಷೇತ್ರವಾದ ವಾರಣಾಸಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಟಿಸಲು 2014ರಿಂದ ರೂ 20,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆಯಾದರೂ ಯಾವುದೂ ಅಲ್ಲಿನ ಶುಚಿತ್ವ ಸುಧಾರಣೆಗೆ ಸಹಕಾರಿಯಾಗಿಲ್ಲ. ಒಟ್ಟು 73 ನಗರಗಳಲ್ಲಿ ವಾರಣಾಸಿ 65ನೇ ಸ್ಥಾನದಲ್ಲಿದೆ.