ತನ್ನ ಕಾರನ್ನು ಬೆನ್ನಟ್ಟಿದ್ದ ಶಾಸಕನ ವಿರುದ್ಧ ಗೋವಾದ ಮಾಜಿ ಸಚಿವರ ಪತ್ನಿಯ ದೂರು
ಪಣಜಿ.ಫೆ.15: ವಾಸ್ಕೋದ ಬಿಜೆಪಿ ಶಾಸಕ ಹಾಗೂ ಸರಕಾರಿ ಸ್ವಾಮ್ಯದ ಕದಂಬ ಸಾರಿಗೆ ನಿಗಮದ ಅಧ್ಯಕ್ಷ ಕಾರ್ಲೊಸ್ ಆಲ್ಮೇಡಾ ಅವರು ತಾನು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನಟ್ಟಿದ್ದರೆಂದು ಆರೋಪಿಸಿ ಗೋವಾ ಎನ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಕಂದಾಯ ಸಚಿವ ಜೋಸ್ ಫಿಲಿಪ್ ಡಿಸೋಜಾ ಅವರ ಪತ್ನಿ ನೆನಿ ಡಿಸೋಜಾ ಅವರು ವಾಸ್ಕೋ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅವರು ತನ್ನ ಕುಟುಂಬಕ್ಕೆ ಹಾನಿಯನ್ನುಂಟು ಮಾಡಬಹುದೆಂದೂ ನೆನಿ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಆಲ್ಮೇಡಾ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.
ರವಿವಾರ ತಾನು ಕುಟುಂಬ ಸದಸ್ಯರೊಂದಿಗೆ ಮನೆಗೆ ಮರಳುತ್ತಿದ್ದಾಗ ಆಲ್ಮೇಡಾರ ಕಾರು ತನ್ನ ಕಾರನ್ನು ಹಿಂದಕ್ಕೆ ಹಾಕಿ ನಿಲ್ಲಿಸಲು ಪ್ರಯತ್ನಿಸಿತ್ತು. ತನ್ನ ಕಾರು ರಸ್ತೆ ಪಕ್ಕದ ಹೊಂಡಕ್ಕೆ ಬೀಳುವುದನ್ನು ಚಾಲಕ ಹೇಗೋ ತಪ್ಪಿಸಿದ್ದ. ಆಲ್ಮೇಡಾ ತನ್ನ ಕಾರನ್ನು ನಿಲ್ಲಿಸಿ ಏನನ್ನೋ ಹೇಳಿದರಾದರೂ ಅದು ತನಗೆ ಗೊತ್ತಾಗಲಿಲ್ಲ. ತನ್ನ ಮನೆಯವರೆಗೂ ಅವರು ತಮ್ಮನ್ನು ಬೆನ್ನಟ್ಟಿಕೊಂಡು ಬಂದಿದ್ದರು ಎಂದು ನೆನಿ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಭವಿಸಿದಾಗ ಜೋಸ್ ಡಿಸೋಜಾ ಕೂಡ ಕಾರಿನಲ್ಲಿದ್ದರು.