ರೋಹಿತ್ ವೇಮುಲಾ: ಹಿಂದುತ್ವ ರಾಜಕೀಯ ಮತ್ತು ದಲಿತ ಪ್ರಶ್ನೆ
ರೋಹಿತ್ ವೇಮುಲಾನ ಸಾವನ್ನು ತಮ್ಮ ತಮ್ಮ ರಾಜಕೀಯ ದೃಷ್ಟಿಕೋನಕ್ಕನುಗುಣವಾಗಿ ಕೆಲವರು ಆತ್ಮಹತ್ಯೆ ಎಂದು ಬಿಂಬಿಸಿದರೆ ಇನ್ನು ಕೆಲವರು ಕೊಲೆ ಎಂದು ಪ್ರತಿಪಾದಿಸಿದರು. ರೋಹಿತ್ ಒಬ್ಬ ದಲಿತನಾಗಿರುವುದು ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯಲ್ಲಿ ಆತನ ಭಾಗವಹಿಸುವಿಕೆ ಮತ್ತು ರಾಜಕೀಯವಾಗಿ ಸಕ್ರಿಯವಾಗಿರುವ ಈ ದಲಿತ ಗುಂಪಿನಲ್ಲಿ ಸಕ್ರಿಯವಾಗಿದ್ದಿದ್ದು ಆತನ ಸಾವಿಗೆ ಪ್ರಮುಖ ಕಾರಣ. ದಲಿತರಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಜೊತೆಗೆ ಈ ಸಂಘಟನೆ ಗೋಮಾಂಸ ಭಕ್ಷಣೆ ಮತ್ತು ಮುಂಬೈಸ್ಫೋಟ ಆರೋಪಿ ಯಾಕೂಬ್ ಮೆಮನ್‌ಗೆ ನೀಡಲಾದಂತಹ ಮರಣ ದಂಡನೆ ಮುಂತಾದ ಇಂದಿನ ದಿನಗಳಲ್ಲಿ ಪ್ರಸ್ತುತವಾಗಿರುವ ಪ್ರಜಾಸತಾತ್ಮಕ ಹಕ್ಕುಗಳಿಗೆ ಸಂಬಂಧಪಟ್ಟ ವಿಷಯಗಳನ್ನೂ ಎತ್ತಿತ್ತು ಮತ್ತು ಮುಝಫ್ಫರ್ ನಗರ್ ಬಾಕೀ ಹೈ ಎಂಬ ಸಿನೆಮಾವನ್ನೂ ಪ್ರದರ್ಶಿಸಿತ್ತು. ಮುಝಫ್ಫರ್ ನಗರ್ ಹಿಂಸಾಚಾರದ (2013) ಬಗ್ಗೆ ನಿರ್ಮಿಸಲಾದ ಈ ಸಿನೆಮಾ ಕೋಮು ಶಕ್ತಿಗಳ ಪಾತ್ರವನ್ನು ಬಯಲು ಮಾಡಿತ್ತು. ಮೋದಿ ಸರಕಾರ (ಮೇ 2014) ಅಸ್ತಿತ್ವಕ್ಕೆ ಬಂದ ಮೇಲೆ ರಾಷ್ಟ್ರೀಯವಾಗಿ ಹೆಚ್ಚು ಸಕ್ರಿಯವಾಗಿರುವ ಎಬಿವಿಪಿ ತನ್ನ ಹಿಂದೂ ರಾಷ್ಟ್ರವಾದ ಸಿದ್ಧಾಂತದ ಭಾಗವಾದ ಎಲ್ಲಾ ವಿಷಯಗಳನ್ನು ವಿರೋಧಿಸಿತ್ತು. ಶೈಕ್ಷಣಿಕ ಆವರಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಸತಾತ್ಮಕ ಸಮಾಜದಲ್ಲಿ ಬಹಳ ಮುಖ್ಯ. ಆರೆಸ್ಸೆಸ್‌ನ ವಿದ್ಯಾರ್ಥಿ ಅಂಗವಾಗಿರುವ ಎಬಿವಿಪಿಗೆ ಒಂದು ದಲಿತ ಸಂಘಟನೆ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎತ್ತುವುದನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಅಸಾ (ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್) ಎತ್ತಿದ ವಿಷಯಗಳನ್ನು ಗಮನಿಸಿದಾಗ ರೋಹಿತ್ ವೇಮುಲಾನ ಸಾವಿಗೆ ಕಾರಣ ಸ್ಪಷ್ಟವಾಗುತ್ತದೆ. ಈ ವಿಷಯಗಳ ಬಗ್ಗೆ ರೋಹಿತ್‌ನ ಸ್ವಂತ ದೃಷ್ಟಿಕೋನ ಆತನ ಫೇಸ್‌ಬುಕ್ ಪೋಸ್ಟ್‌ಗಳಿಂದ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಆತ ಗೋಮಾಂಸ ವಿಷಯದಲ್ಲಿ ಏನು ಬರೆದಿದ್ದ ಎಂಬುದನ್ನು ನೋಡೋಣ. ಗೋಮಾಂಸ ತಿನ್ನುವುದು ಮತ್ತು ಗೋಮಾಂಸ ಭಕ್ಷಣೆಯನ್ನು ಆಚರಿಸುವುದು ದೇಶಾದ್ಯಂತ ಈ ಕಾರಣದಿಂದ ಹತ್ಯೆಗೈಯಲ್ಪಡುವ ಎಲ್ಲರಿಗೆ ತೋರಿಸುವ ಪ್ರೋತ್ಸಾಹದ ನಡೆ. ಬಿಜೆಪಿ-ಆರೆಸ್ಸೆಸ್-ವಿಎಚ್‌ಪಿಯ ಗೋಮಾಂಸ ವಿರುದ್ಧ ಅಭಿಯಾನದ ಯೋಜನೆಯು ಮುಖ್ಯವಾಗಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಈ ದೇಶದಲ್ಲಿ ಹಿಂಸಿಸುವ ಒಂದು ಭಾಗವಾಗಿದೆ ಎಂಬುದನ್ನು ನಾವು ಈಗ ಕಂಡುಕೊಳ್ಳಲು ವಿಫಲವಾದರೆ ಮುಂದೆ ನಮ್ಮ ದೇಶದಲ್ಲಿ ನಡೆಯುವ ಮತ್ತೊಂದು ಬೃಹತ್ ಹಿಂಸಾಚಾರಕ್ಕೆ ಮೂಕಪ್ರೇಕ್ಷಕರಾಗುಳಿಯಬೇಕಾಗಿ ಬಂದಾಗ ಪಶ್ಚಾತ್ತಾಪಪಡಬೇಕಾಗುತ್ತದೆ. ಇಡೀ ಹಸುವಿನ ಕತೆ ಇಂದು ದಲಿತ ವಿರೋಧಿ ಕಡಿಮೆಯಾಗಿದ್ದು, ಮುಸ್ಲಿಮ್ ವಿರೋಧಿ ಕಾರ್ಯತಂತ್ರ ಹೆಚ್ಚಿದೆ.
ಆತನಿಗೆ ಇದ್ದ ಆಳವಾದ ಪ್ರಜಾಸತಾತ್ಮಕ ರಾಜಕೀಯ ತಿಳುವಳಿಕೆಯು ಕೇವಲ ದಲಿತ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗದೆ ಇರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಸೀಮಿತಗೊಳಿಸಲ್ಪಟ್ಟ ವಿಭಾಗಗಳಾಗಿರುವ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಕಾರ್ಮಿಕರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳು ಪರಸ್ಪರ ಆಳವಾಗಿ ಹೆಣೆಯಲ್ಪಟ್ಟಿವೆ. ಆತನ ವಾದ ಸರಿ ಯಾಕೆಂದರೆ ಇಂದು ಗೋಮಾಂಸವನ್ನು ಇತರ ಸಮುದಾಯದವರೂ ಸಾಕಷ್ಟು ಪ್ರಮಾಣದಲ್ಲಿ ಭಕ್ಷಿಸುತ್ತಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಮಾಡುವ ಮತ್ತು ಬೆದರಿಸುವ ಸಲುವಾಗಿ ಗೋಮಾಂಸ ತಿನ್ನುವ ವಿಷಯವನ್ನು ಪ್ರಸ್ತಾಪಿಸಲಾಗುತ್ತದೆ. ಒಂದು ಹಂತಕ್ಕೆ ಮುಝಫ್ಫರ್ ನಗರ್ ಸಿನೆಮಾ ವಿಷಯ ಕೂಡಾ ಅಲ್ಪಸಂಖ್ಯಾತ ಮುಸ್ಲಿಮರಿಗೆ ಸಂಬಂಧಪಟ್ಟದ್ದಾಗಿದೆ. ಆಳದಲ್ಲಿ ಇದು ಧಾರ್ಮಿಕ ಹಿನ್ನೆಲೆಯಲ್ಲಿ ಸಮಾಜವನ್ನು ಧ್ರುವೀಕರಣಗೊಳಿಸುವ, ಆ ಮೂಲಕ ಹಕ್ಕುಗಳ ಪರಿಕಲ್ಪನೆಗೆ ವಿರುದ್ಧವಾಗಿರುವ ಹಿಂದೂ ರಾಷ್ಟ್ರವಾದವನ್ನು ಹೇರುವ ಕೋಮು ರಾಜಕೀಯದ ಭಾಗವಾಗಿದೆ. ಇನ್ನೊಂದು ಹಂತದಲ್ಲಿ ಆತ ಭಯೋತ್ಪಾದನೆ ಆರೋಪಿ ಯಾಕೂಬ್ ಮೆಮನ್‌ಗೆ ಗಲ್ಲುಶಿಕ್ಷೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಮಾನವೀಯ ನೆಲೆಯಲ್ಲಿ; ಮರಣ ದಂಡನೆಗೆ ವಿರೋಧವನ್ನು ವ್ಯಕ್ತಪಡಿಸಿ. ಜಾಗತಿಕವಾಗಿ ಮರಣ ದಂಡನೆಯನ್ನು ವಿರೋಧಿಸಿ ಚಳವಳಿಗಳು ನಡೆಯುತ್ತಿವೆ ಮತ್ತು ಭಾರತದಲ್ಲೂ ಮರಣ ದಂಡನೆ ನಿಷೇಧಕ್ಕೆ ಬೆಂಬಲ ಸೂಚಿಸುವವರು ಸಾಕಷ್ಟು ಜನರಿದ್ದಾರೆ. ಇದು ಯಾವುದೇ ರೀತಿಯಲ್ಲೂ ಭಯೋತ್ಪಾದನೆಯನ್ನು ಬೆಂಬಲಿಸುವ ನಡೆಯಲ್ಲ. ಅಸಾದ ಈ ಜಾತ್ಯತೀತ ಪ್ರಜಾಸತಾತ್ಮಕ ಮಾನವೀಯ ನಿಲುವಿನಿಂದ ಇರಿಸುಮುರಿಸುಗೊಂಡ ಎಬಿವಿಪಿ ಸೈದ್ಧಾಂತಿಕ ಮಟ್ಟದಲ್ಲಿ ಅಸಾ ಜೊತೆ ಸಂಘರ್ಷಕ್ಕಿಳಿಯಿತು. ಎಬಿವಿಪಿ ಅಧ್ಯಕ್ಷ ಸುಶೀಲ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದರು. ಈ ದೈಹಿಕ ಹಲ್ಲೆ ಆರೋಪದ ತನಿಖೆ ನಡೆಸಿದ ಮೊದಲ ಸಮಿತಿ ಪ್ರಕಾರ ಈ ಆರೋಪ ಆಧಾರರಹಿತ ವಾಗಿತ್ತು. ಉಪಕುಲಪತಿ ಬದಲಾಗುತ್ತಿದ್ದಂತೆ ಎಲ್ಲವೂ ಬದಲಾಗಲು ಆರಂಭವಾದವು. ಬಿಜೆಪಿಯ ಕೇಂದ್ರ ಸಚಿವ ಬಿ. ಬಂಡಾರು ದತ್ತಾತ್ರೇಯ ಮತ್ತು ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರ ಒತ್ತಡದಿಂದಾಗಿ ರೋಹಿತ್ ಮತ್ತಾತನ ನಾಲ್ಕು ಗೆಳೆಯರನ್ನು ದಂಡನೆಗೆ ಗುರಿಪಡಿಸಲಾಯಿತು. ಅವರ ವಿದ್ಯಾರ್ಥಿವೇತನವನ್ನು ತಡೆಹಿಡಿಯಲಾಯಿತು ಮತ್ತು ಅವರನ್ನು ವಸತಿ ನಿಲಯದಿಂದ ಹೊರಗಟ್ಟಲಾಯಿತು. ಆತ ಉಪಕುಲಪತಿಯವರಿಗೆ ಬರೆದಿರುವ ಪತ್ರದಲ್ಲಿ ದಲಿತ ವಿದ್ಯಾರ್ಥಿಗಳಿಗೆ ವಿಷ ಮತ್ತು ಹಗ್ಗ ಕೊಡುವಂತೆ ಕೇಳಿರುವುದು ಉಪಕುಲಪತಿಯವರ ದಲಿತ ವಿರೋಧಿ ದೃಷ್ಟಿಕೋನದಿಂದಾಗಿ ಅವರು ಈ ಪತ್ರವನ್ನು ಸಾರಾಸಗಟಾಗಿ ನಿರ್ಲಕ್ಷಿಸಿದ ಪರಿಣಾಮ ಈ ದುರಂತ ಸಂಭವಿಸಿತು ಎಂಬುದನ್ನು ಬೆಳಕಿಗೆ ತರುತ್ತದೆ. ರೋಹಿತ್ ಸಾವಿಗೆ ಆಳುವ ಸರಕಾರದ ಪ್ರತಿಕ್ರಿಯೆ ಅದು ಅಳವಡಿಸಿಕೊಂಡಿರುವ ರಾಜಕೀಯವನ್ನು ಬಯಲು ಮಾಡುತ್ತದೆ. ಸ್ಥಳೀಯ ಎಬಿವಿಪಿ ಜೊತೆ ಸೇರಿ ಮಾನ್ಯ ದತ್ತಾತ್ರೇಯರು ಅಸಾದ ಚಟುವಟಿಕೆಗಳನ್ನು ‘ಜಾತೀವಾದ, ತೀವ್ರಗಾಮಿ ಮತ್ತು ರಾಷ್ಟ್ರ ವಿರೋಧಿ ರಾಜಕೀಯದ ಅಡ್ಡೆ’ ಎಂದು ಹೇಳಿಕೆ ನೀಡಿದ್ದರು. ಮಾನವ ಸಂಪನ್ಮೂಲಸಚಿವೆಯು ಆಕೆಯ ಮನಸ್ಥಿತಿಗೆ ತಕ್ಕಂತೆ ಇದು ದಲಿತರಿಗೆ ಸಂಬಂಧಪಟ್ಟ ವಿಷಯವಲ್ಲ ಎಂದರೆ ಕೆಲವರು ರೋಹಿತ್‌ನ ತಾಯಿ ದಲಿತೆಯಾಗಿದು,್ದ ತಂದೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದ ಕಾರಣ ಆತ ಕೂಡಾ ದಲಿತನಾಗಿರಲಿಕ್ಕಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ರೋಹಿತ್ ತನ್ನ ಪ್ರಾಣಕ್ಕೆ ಅಂತ್ಯಹಾಡಲು ಕಾರಣವಾದ ಆತನ ಮೇಲೆ ನಡೆದ ತೀವ್ರ ಅನ್ಯಾಯವನ್ನು ಮುಚ್ಚಿಹಾಕಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗಿತ್ತು. ಇದಕ್ಕಾಗಿ ಕುತೂಹಲ ಸೃಷ್ಟಿಯಾಗಬೇಕೆಂಬ ದೃಷ್ಟಿಯಿಂದ ಸಣ್ಣ ವೀಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಯಿತು. ಈ ವೀಡಿಯೊದಲ್ಲಿ ರೋಹಿತ್‌ನನ್ನು ಭಯೋತ್ಪಾದಕರ ಬೆಂಬಲಿಗ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಟಿವಿ ಚರ್ಚೆಗಳಲ್ಲಿ ಆರೆಸ್ಸೆಸ್-ಬಿಜೆಪಿಯ ವಕ್ತಾರರು ರಾಷ್ಟ್ರವಿರೋಧಿ ಜಾತೀಯ ರಾಜಕೀಯದ ಬಗ್ಗೆ ಉದ್ದುದ್ದ ಭಾಷಣಗಳನ್ನು ಮಾಡಿದರು. ಈ ಬಗ್ಗೆ ಪ್ರಧಾನ ಮಂತ್ರಿಯವರು ನೀಡಿದ ಹೇಳಿಕೆ ಮತ್ತು ಅದರ ಸಾಂದರ್ಭಿಕ ಔಚಿತ್ಯತೆ ಎಲ್ಲವನ್ನೂ ಬಟಾಬಯಲು ಮಾಡುತ್ತದೆ. ಮಾನ್ಯ ಮೋದಿಯವರು ಸಾಮಾನ್ಯವಾಗಿ ಬಹಳ ಮಾತನಾಡುವ ವ್ಯಕ್ತಿ. ತನ್ನ ಹಿಂದುತ್ವ ಕಾರ್ಯತಂತ್ರವನ್ನು ಬಯಲು ಮಾಡುವ ವಿಷಯಗಳ ಬಗ್ಗೆ ಅವರು ಸುಮ್ಮನಿರುವುದಿಲ್ಲ. ಅವರು ಈ ಹಿಂದೆ ದೀರ್ಘಕಾಲ ಮೌನವಾಗಿದ್ದ ಘಟನೆ ಮುಹಮ್ಮದ್ ಅಖ್ಲಾಕ್‌ನ ಸಾಮೂಹಿಕ ಥಳಿತ ಮತ್ತು ಹತ್ಯೆ. ರೋಹಿತ್‌ನ ವಿಷಯದಲ್ಲೂ ಐದು ದಿನಗಳ ಕಾಲ ಮೌನದ ಬಳಿಕ ಅವರು ಕೃತಕವಾಗಿ ದುಃಖವನ್ನು ಹೊರಗೆಡವಲು ಪ್ರಯತ್ನಿಸಿದರು, ‘ತಾಯಿ ಭಾರತಿ ತನ್ನ ಓರ್ವ ಮಗನನ್ನು ಕಳೆದುಕೊಂಡಿದ್ದಾಳೆ’, ಆದರೆ ಅವರದ್ದೇ ಪಕ್ಷದ ಮತ್ತು ಸಂಪುಟ ಸಹೋದ್ಯೋಗಿಗಳು ಆತನನ್ನು ದೇಶವಿರೋಧಿ ಎಂದು ಕರೆದಿದ್ದರು. ಇದು ರೋಹಿತ್‌ನ ಸಾವಿಗೆ ಸಾಮೂಹಿಕವಾಗಿ ಕಾರಣವಾದ ದಲಿತ ವಿರೋಧಿ ದೌರ್ಜನ್ಯ, ವಿಶ್ವವಿದ್ಯಾನಿಲಯದ ಆಡಳಿತದ ದಲಿತ ವಿರೋಧಿ ನಿಲುವು, ಬಿಜೆಪಿ ಸಚಿವ ದತ್ತಾತ್ರೇಯ, ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಎಬಿವಿಪಿಯನ್ನು ಚಾದರದ ಅಡಿಗೆ ಹಾಕಿ ರಕ್ಷಿಸುವ ಮೋದಿಯ ಶೈಲಿ. ಒಂದು ರೀತಿಯಲ್ಲಿ ಇಡೀ ಪ್ರಕರಣ ಹಿಂದುತ್ವ ರಾಜಕೀಯದ ಸಂದಿಗ್ಧತೆಯನ್ನು ತೋರಿಸುತ್ತದೆ. ಒಂದು ಕೈಯಲ್ಲಿ ಅದು ಜಾತ್ಯತೀತ ಮೌಲ್ಯಗಳನ್ನು ವಿರೋಧಿಸುವ ಚಟುವಟಿಕೆಗಳನ್ನು ತೀವ್ರಗೊಳಿಸುತ್ತದೆ. ದಲಿತರ-ಅಲ್ಪಸಂಖ್ಯಾತರನ್ನು ಬೆದರಿಸುವುದನ್ನು ತೀವ್ರಗೊಳಿಸುತ್ತದೆ ಮತ್ತು ಪ್ರಜಾಸತಾತ್ಮಕ ಮೌಲ್ಯಗಳ ಪರ ನಿಲ್ಲುವ ಧ್ವನಿಗಳನ್ನು ವಿರೋಧಿಸುತ್ತದೆ. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆರೆಸ್ಸೆಸ್‌ಮತ್ತು ಅದರ ಅಂಗ ಸಂಸ್ಥೆಗಳಿಗೆ ಆನೆಬಲ ಬಂದಂತಾಗಿದೆ. ಇತರ ರಾಜಕೀಯ ಪ್ರವೃತ್ತಿಗಳನ್ನು ವಿರೋಧಿಸಲು ಅವುಗಳಿಗೆ ಪ್ರಬಲವಾದ ರಾಜಕೀಯ ಪ್ರೋತ್ಸಾಹ ಸಿಗುತ್ತಿದೆ. ಈ ಹಿಂದೆ ನಾವು ಮದ್ರಾಸ್ ಐಐಟಿಯಲ್ಲಿ ಅಂಬೇಡ್ಕರ್ ಪೆರಿಯ ಅಧ್ಯಯನ ವೃತ್ತವನ್ನು ಕೇಂದ್ರ ಸರಕಾರ ನಿಷೇಧಿಸಲು ಯಶಸ್ವಿಯಾಗಿರುವುದನ್ನು ಕಂಡಿದ್ದೇವೆ. ವಿಶ್ವವಿದ್ಯಾಲಯದ ಆಡಳಿತವರ್ಗ ಒಂದೋ ಹಿಂದುತ್ವ ಪರವಾಗಿರುತ್ತದೆ ಅಥವಾ ಬಿಜೆಪಿ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರಲು ಒತ್ತಡಕ್ಕೊಳಗಾಗಿರುತ್ತವೆ ಎಂಬುದನ್ನು ಸ್ಪಷ್ಟವಾಗಿ ಅರಿತಿರುವ ಕೋಮುವಾದಿ ವಿದ್ಯಾರ್ಥಿ ಸಂಘಟನೆಗಳು ಕಾಲೇಜ್ ಕ್ಯಾಂಪಸ್ ಗಳಲ್ಲಿ ತಮ್ಮನ್ನು ಹೆಚ್ಚು ಸಮರ್ಥಿಸಲು ತೊಡಗಿವೆ. ಸಾಮಾಜಿಕ ನ್ಯಾಯಕ್ಕಾಗಿ ಅಭಿಯಾನಗಳನ್ನು ಆರಂಭಿಸುವುದನ್ನು ತೀವ್ರವಾಗಿ ವಿರೋಧಿಸಲಾಗುತ್ತದೆ. ಇದೇ ದಿಕ್ಕಿನಲ್ಲಿ ಆರೆಸ್ಸೆಸ್‌ಕುಟುಂಬಕ್ಕೆ ಸೇರಿದ ಸಾಮಾಜಿಕ್ ಸಂರಸ್ತ ಮಂಚ್ ಸಕ್ರಿಯವಾಗಿದೆ. ಅವರು ಜಾತಿಯನ್ನು ನಂಬುವುದಿಲ್ಲ ಎಂದು ಹೇಳಲಾಗುತ್ತದೆ. ಎಲ್ಲಾ ಜಾತಿಗಳೂ ಒಂದೇ! ಆದರೆ ಅದರರ್ಥ ಏನೆಂದರೆ ಹೊಸ ಪರಿಸ್ಥಿತಿಯಲ್ಲಿ ಹೆಚ್ಚು ಸೂಕ್ಷ್ಮ ಅಭಿವ್ಯಕ್ತಿಗಳ ಮೂಲಕ ಜಾತಿ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ಜಾತಿ ಸಮಸ್ಯೆಯನ್ನು ಗಮನಿಸದಿರಲು ಅವರು ಬಯಸುತ್ತಾರೆ ಎಂದು. ಒಂದು ರೋಗವನ್ನು ಗುಣಪಡಿಸಬೇಕಾದರೆ ಮೊದಲು ಆ ರೋಗವನ್ನು ಗುರುತಿಸುವುದು ಮುಖ್ಯವಾಗುತ್ತದೆ ನಂತರ ಅದಕ್ಕೆ ಏನು ಮಾಡಬಹುದು ಎಂದು ಯೋಚಿಸಬಹುದು. ಅದೇ ರೀತಿ ಜಾತಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಅಥವಾ ಅದರ ಬಗ್ಗೆ ಮೌನವಹಿಸುವುದು ಎಂದರೆ ಈಗಿನ ಜಾತಿ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗಲು ಅವರು ಬಯಸುತ್ತಾರೆ ಎಂದರ್ಥ. ಪ್ರಧಾನ ಮಂತ್ರಿಯವರು ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದಲ್ಲಿ ತನ್ನ ಕಣ್ಣುಗಳನ್ನು ತೇವವಾಗಿಸುವ ಮುನ್ನ, ವಿದ್ಯಾರ್ಥಿಗಳು, ಎಲ್ಲಾ ನಿಂದನೆ ಮತ್ತು ಅವಮಾನಗಳನ್ನು ಯಾವುದೇ ದೂರು ನೀಡದೆ ಸಹಿಸಿದ ಅಂಬೇಡ್ಕರ್ ಅವರನ್ನು ಅನುಕರಿಸಬೇಕು ಎಂದು ಉಪನ್ಯಾಸ ನೀಡಿದ್ದರು. ಇದೇ ರೀತಿಯ ಮಾತನ್ನು ರಾಜ್ ನಾಥ್ ಸಿಂಗ್ ಕೂಡಾ ಹೇಳಿದ್ದರು. ಇದೇ ಸರಕಾರ ನೇಮಿಸಿದ ಹಿಂದೆ ಐಸಿಎಚ್‌ಆರ್‌ನ ಮುಖ್ಯಸ್ಥರಾಗಿದ್ದ ಪ್ರೊ.ವೈ. ಸುದರ್ಶನ್ ರಾವ್ ಇದರ ವಿರುದ್ಧ ಯಾರೂ ದೂರನ್ನು ನೀಡಿಲ್ಲ ಎನ್ನುವ ಮೂಲಕ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ್ದರು. ಹಾಗಾಗಿ ಒಂದು ಕಡೆ ಅಂಬೇಡ್ಕರ್ ಅವರನ್ನು ಹಿಂದುತ್ವದ ಚಿಹ್ನೆಯೆಂದು ಬಿಂಬಿಸಲಾಗುತ್ತಿದೆ ಮತ್ತು ಇನ್ನೊಂದು ಕಡೆ ಹಿಂದುತ್ವ ರಾಷ್ಟ್ರವಾದದ ಬೇರೆ ಬೇರೆ ಅಂಗಸಂಸ್ಥೆಗಳ ಮಧ್ಯಸ್ಥಿಕೆಯ ಮೂಲಕ ಜಾತಿ ವ್ಯವಸ್ಥೆಯನ್ನು ರಕ್ಷಿಸುವ ಹಿಂದುತ್ವ ಕಾರ್ಯತಂತ್ರವನ್ನು ಹರಿಯಬಿಡಲಾಗಿದೆ.