×
Ad

ಕನ್ಹಯ್ಯ ನೆರವಿಗೆ ಧಾವಿಸಿದ ಪ್ರಶಾಂತ ಭೂಷಣ್, ಶತ್ರುಘ್ನ ಸಿನ್ಹಾ

Update: 2016-02-17 20:35 IST

ಹೊಸದಿಲ್ಲಿ,ಫೆ.17: ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಅವರಿಗೆ ಖ್ಯಾತ ನ್ಯಾಯವಾದಿ ಪ್ರಶಾಂತ ಭೂಷಣ್ ಮತ್ತು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕನ್ಹಯ್ಯ ಕುಮಾರ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬುಧವಾರ ಇಲ್ಲಿ ಹೇಳಿದ ಭೂಷಣ್,ತಾನು ಸಾಮಾನ್ಯವಾಗಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಕಲಾಪಗಳಲ್ಲಿ ವ್ಯಸ್ತನಾಗಿರುತ್ತೇನಾದರೂ ಅಗತ್ಯವಿದ್ದರೆ ಕೆಳ ನ್ಯಾಯಾಲಯದಲ್ಲಿ ಆತನ ಪರ ವಾದಿಸಲು ಸಿದ್ಧನಿದ್ದೇನೆ ಎಂದರು.
ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ಸ್ವರಾಜ್ ಅಭಿಯಾನ ಗುಂಪು ದೇಶದ್ರೋಹ ಆರೋಪದಲ್ಲಿ ಕನ್ಹಯ್ಯೋ ಬಂಧನದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬೆಂಬಲಕ್ಕೆ ನಿಂತಿದೆ.


 ಕನ್ಹಯ್ಯ ಬಿಡುಗಡೆಗೆ ಶತ್ರು ಕರೆ
ಹಲವಾರು ಬಾರಿ ಪಕ್ಷದ ಧೋರಣೆಗೆ ವಿಭಿನ್ನವಾದ ನಿಲುವನ್ನು ಪ್ರದರ್ಶಿಸಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರೂ ಕನ್ಹಯ್ಯಾ ಬೆಂಬಲಕ್ಕೆ ನಿಂತಿದ್ದಾರೆ.
ಕನ್ಹಯ್ಯ ಬೇಗನೆ ಬಿಡುಗಡೆಗೊಳ್ಳಲಿ ಎಂದು ಹಾರೈಸುತ್ತೇನೆ. ಎಷ್ಟು ಶೀಘ್ರ ಬಿಡುಗಡೆಯಾಗುತ್ತದೋ ಅಷ್ಟು ಒಳ್ಳೆಯದು. ಆತ ರಾಷ್ಟ್ರವಿರೋಧಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಹೇಳಿಲ್ಲ. ಆತನ ಭಾಷಣದ ಧ್ವನಿಮುದ್ರಿಕೆಯನ್ನು ನಾನು ಆಲಿಸಿದ್ದೇನೆ ಎಂದು ಅವರು ಟ್ವೀಟಿಸಿದ್ದಾರೆ.
ಜೆಎನ್‌ಯು ಈಗ ರಾಷ್ಟ್ರವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಕೆಲವು ಬಿಜೆಪಿ ನಾಯಕರ ಹೇಳಿಕೆಗಳನ್ನೂ ಅವರು ಅಲ್ಲಗಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News