ನಾನು ಪ್ರವಾದಿ ಮಹಮ್ಮದ್ ರ ಯ ದೊಡ್ಡ ಅಭಿಮಾನಿ : ರಾಮ್ ಜೇಠ್ಮಲಾನಿ
ನವದೆಹಲಿ : ಆಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಬಲವಾಗಿ ಸಮರ್ಥಿಸಿರುವ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಕೇಂದ್ರ ಕಾನೂನು ಸಚಿವ ರಾಮ್ ಜೇಠ್ಮಲಾನಿ ಇಸ್ಲಾಂ ಧರ್ಮದ ಬಗ್ಗೆ ಶಿಕ್ಷಣ ನೀಡುವ ಯೋಚನೆಯ ಬಗ್ಗೆಯೂ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
‘‘ನಾನೊಬ್ಬ ಹಿಂದೂ ಎಂಬುದು ರಹಸ್ಯವೇನಲ್ಲ. ನಾನು ಹುಟ್ಟಿದ್ದು ಹಿಂದುವಾಗಿ. ಆದರೆ ನಾನು ಈ ಬೃಹತ್ ಸಂಸ್ಥೆಯ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಅವರ ಅಭಿಮಾನಿ,’’ ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜೇಠ್ಮಲಾನಿ ಹೇಳಿದರು.
‘‘ಆಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು ಮುಸ್ಲಿಮರ ಶಿಕ್ಷಣಕ್ಕಾಗಿ ಮುಸ್ಲಿಮರೇ ಸ್ಥಾಪಿಸಿದ ಸಂಸ್ಥೆಯೆಂದು ಗವರ್ನರ್ ಜನರಲ್ ಅವರ ಹೇಳಿಕೆ ತಿಳಿಸುತ್ತದೆ,’’ಎಂದರು ಜೇಠ್ಮಲಾನಿ.
ತಾನು ಹಲವಾರು ಧರ್ಮಗಳ ಅಧ್ಯಯನ ನಡೆಸಿದ್ದರೂ ಪ್ರವಾದಿ ಮಹಮ್ಮದ್ ಅವರ ಶಿಕ್ಷಣದ ಬಗೆಗಿನ ದೃಷ್ಟಿಕೋನ ತನಗೆ ಹೆಚ್ಚು ಹಿಡಿಸಿದೆಯೆಂದರು.
‘‘ಒಬ್ಬ ಹಿಂದುವಾಗಿ ನಾನು ಇಸ್ಲಾಂ ಸೇರಿದಂತೆ ಎಲ್ಲಾ ಧರ್ಮಗಳ ವಿದ್ಯಾರ್ಥಿ. ನಾನು ಪ್ರವಾದಿ ಮಹಮ್ಮದರ ದೊಡ್ಡ ಅಭಿಮಾನಿ. ಪ್ರವಾದಿಯವರು ಹೇಳಿದಂತೆ, ನೀವು ಜ್ಞಾನವನ್ನು ಅರಸಿ ನಡೆದರೆ, ನೀವು ದೇವರತ್ತ ನಡೆದಂತೆ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದ ಬೇರ್ಯಾವುದೇ ಧರ್ಮದ ನಾಯಕನ ಬಗ್ಗೆ ನನಗೆ ಹೇಳಿ,"" ಎಂದು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಜತೆ ವೇದಿಕೆ ಹಂಚಿದ ಜೇಠ್ಮಲಾನಿ ಹೇಳಿದರು.
ತಮ್ಮ ದೃಷ್ಟಿಕೋನದಲ್ಲಿ ಇಸ್ಲಾಂ ಧರ್ಮದ ಮೂಲಸಾರವನ್ನು ವಿವರಿಸಿದ ಅವರು ಇಂತಹ ಮೂಲಸಾರವನ್ನು ಹೊಂದಿದ ಧರ್ಮವನ್ನು ಗೌರವಿಸಬೇಕಲ್ಲದೆ, ಪ್ರವಾದಿಯನ್ನು ಆರಾಧಿಸಬೇಕು, ಎಂದು ಅವರು ಅಭಿಪ್ರಾಯ ಪಟ್ಟರು.
‘‘ಪ್ರತಿಯೊಂದು ಧರ್ಮದಲ್ಲೂ ಎಸೆಯಬಹುದಾದಂತಹ ಕಲ್ಮಶಗಳಿರುತ್ತವೆಯೆಂದು ಹೇಳಿದ ಜೇಠ್ಮಲಾನಿ ‘‘ಪ್ರಾಯಶಃ ನನ್ನ ಧರ್ಮದಲ್ಲಿ ಇತರ ಬೇರ್ಯಾವುದೇ ಧರ್ವದಲ್ಲಿರುವುದಕ್ಕಿಂತ ಇಂತಹ ಕಲ್ಮಶಗಳು ಅಧಿಕವಾಗಿವೆ’’ ಎಂದರು.