×
Ad

ಜೆಎನ್‌ಯು: ಉಮರ್ ಖಲೀದ್ ಬಳಗಕ್ಕೆ ಬೆದರಿಕೆ, ನಿಂದನೆ

Update: 2016-02-20 10:52 IST

ನವದೆಹಲಿ: ಜೆಎನ್‌ಯು ಆವರಣದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಲಾಗಿದೆ ಎನ್ನಲಾದ ಘಟನೆಯ ಮರುದಿನವೇ ಪೊಲೀಸರು ತಮ್ಮ ಮಗ, ಸಂಶೋಧನಾ ವಿದ್ಯಾರ್ಥಿ ಉಮರ್ ಖಲೀದ್‌ನನ್ನು  ಪ್ರಶ್ನಿಸುತ್ತಿರುವುದನ್ನು ಟೆಲಿವಿಷನ್‌ನಲ್ಲಿ ನೋಡಿದ ಡಾ.ಸಯೀದ್ ಕಾಸಿಂ ರಸೂಲ್ ಇಲ್ಯಾಸ್ ತಕ್ಷಣ ವಾಪಾಸ್ಸಾಗುವಂತೆ ಮಗನಿಗೆ ಸೂಚಿಸಿದ್ದರು. ಆದರೆ ಇಡೀ ಕ್ಯಾಂಪಸ್ ಹೊತ್ತಿ ಉರಿಯುತ್ತಿರುವಾಗ ನಾನು ಹೇಗೆ ಬರಲಿ ಎಂದು ಉಮರ್ ನಿರಾಕರಿಸಿದ ಎಂದು ತಿಳಿದುಬಂದಿದೆ.


 ಎರಡು ದಿನ ಬಳಿಕ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದರು. ಖಲೀದ್ ಹಾಗೂ ಇತರರ ಹೆಸರು ಪ್ರಚಾರ ಫಲಕಗಳಲ್ಲಿ ಸಂಘಟನಾಕಾರರು ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ.


"ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಲೈಂಗಿಕ ಹಲ್ಲೆಯ ಬೆದರಿಕೆಗಳು ಬರುತ್ತಿವೆ" ಎಂದು ಖಲೀದ್ ಅವರ ಸಹೋದರಿ ದೂರಿದ್ದಾರೆ. ತೀರಾ ಅಶ್ಲೀಲ ಶಬ್ದಗಳಿಂದ ನಿಂದಿಸಿ ಬೆದರಿಸಲಾಗುತ್ತಿದೆ. ಇದು ಅತ್ಯಂತ ಕ್ರೂರ ಹಿಂಸೆ" ಎಂದು ಅವರು ಹೇಳಿದ್ದಾರೆ.


ಖಲೀದ್ ನಾಪತ್ತೆಯಾಗಿರುವುದು ಕುಟುಂಬಕ್ಕೆ ಆತಂಕ ತಂದಿದೆ. ಜತೆಗೆ ತಂದೆ ಸಿಮಿಯ ಸದಸ್ಯರಾಗಿದ್ದ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಈ ಮುಸ್ಲಿಂ ವಿದ್ಯಾರ್ಥಿ ಸಂಘವನ್ನು 1985ರಲ್ಲಿ ಖಲೀದ್ ಹುಟ್ಟುವ ಮುನ್ನವೇ ಹಾಗೂ ಸಂಘಟನೆಯನ್ನು ನಿಷೇಧಿಸುವ ಮುನ್ನವೇ ತೊರೆದಿದ್ದಾಗಿ ಮಾಧ್ಯಮದ ಮುಂದೆ ವಿವರಿಸಿದರು.


"ಖಲೀದ್‌ನ ಇರುವಿಕೆ ಬಗ್ಗೆ ಪೊಲೀಸರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಮಗ ಇದುವರೆಗೂ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಇಲ್ಯಾಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News