×
Ad

ಉತ್ತಪ್ರದೇಶ: ಬೋರ್ಡ್ ಪರೀಕ್ಷೆಗೇ ಸಾಮೂಹಿಕ ಚಕ್ಕರ್!

Update: 2016-02-20 11:19 IST

ಅಲಹಾಬಾದ್: ಉತ್ತರ ಪ್ರದೇಶದ ಪ್ರೌಢಶಾಲಾ ಮಂಡಳಿ ಪರೀಕ್ಷೆಗೆ ಮೊದಲ ದಿನವೇ 7.42 ಲಕ್ಷ ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್‌ನ ಅಧಿಕಾರಿಗಳು ಹೇಳುವಂತೆ, ಆನ್‌ಲೈನ್ ರಿಜಿಸ್ಟ್ರೇಷನ್ ಹಾಗೂ ನಕಲು ಮಾಡುವುದನ್ನು ಪತ್ತೆ ಮಾಡಲು ಮೊಬೈಲ್ ಆಪ್ ಜಾರಿಗೆ ತಂದಿರುವುದು ಈ ಸಾಮೂಹಿಕ ಗೈರುಹಾಜರಿಗೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ.


ವಿಶ್ವದಲ್ಲೇ ಅತಿಹೆಚ್ಚು ಮಂದಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪ್ರೌಢಶಾಲೆ ಮತ್ತು ಮಾಧ್ಯಮಿಕ ಪರೀಕ್ಷೆಯಲ್ಲಿ 68 ಲಕ್ಷ ಮಂದಿ ಪರೀಕ್ಷಾರ್ಥಿಗಳಿದ್ದಾರೆ. 11,667 ಪರೀಕ್ಷಾ ಕೇಂದ್ರಗಳಿಂದ ಪಡೆದ ಮಾಹಿತಿಯ ಪ್ರಕಾರ, 12ನೇ ತರಗತಿ ಪರೀಕ್ಷೆಗೆ 2.88 ಲಕ್ಷ ಮಂದಿ ಹಾಗೂ ಹತ್ತನೇ ತರಗತಿ ಪರೀಕ್ಷೆಗೆ 4.54 ಲಕ್ಷ ಮಂದಿ ಗೈರುಹಾಜರಾಗಿದ್ದಾರೆ.


ಮೀರಠ್ ಹಾಗೂ ಗಾಜಿಯಾಪುರದಲ್ಲಿ ಅತ್ಯಧಿಕ ಎಂದರೆ ತಲಾ 36 ಸಾವಿರ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಉಳಿದಂತೆ ಬರೇಲಿ ಹಾಗೂ ಬಲಿಯಾದಲ್ಲಿ ತಲಾ 34 ಸಾವಿರ ಮಂದಿ, ಅಲಹಾಬಾದ್‌ನಲ್ಲಿ 32 ಸಾವಿರ ಮಂದಿ ಹಾಗೂ ಆಗ್ರಾದಲ್ಲಿ 22 ಸಾವಿರ ಮಂದಿ ಗೈರಾಗಿದ್ದಾರೆ.


ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಶೇಕಡ 11ರಷ್ಟು ವಿದ್ಯಾರ್ಥಿಗಳು ಗೈರುಹಾಜರಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಮಾಧ್ಯಮಿಕ ಶಿನ್ಷಣ ಪರಿಷತ್ ಉಪ ಕಾರ್ಯದರ್ಶಿ ಅರವಿಂದ್ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.


ನಕಲು ಮಾಫಿಯಾ ನೆರವಿನಿಂದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದರು. ವಿವಿಧ ಶಾಲೆಗಳಿಂದ ನೊಂದಾಯಿಸಿಕೊಂಡು ಒಂದು ಶಾಲೆಯಿಂದ ಉತ್ತೀರ್ಣರಾಗುತ್ತಿದ್ದರು. ಆದರೆ ಹಾಜರಾತಿ ಸಾಫ್ಟ್‌ವೇರ್ ಅಳವಡಿಸಿರುವುದರಿಂದ ಈ ಬಾರಿ ಗಂಭೀರವಲ್ಲದ ವಿದ್ಯಾರ್ಥಿಗಳು ಹೊರಗೆ ಉಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News