×
Ad

ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಬಗ್ಗೆ ಜೆಎನ್‌ಯುವಿನಲ್ಲಿ ಪ್ರಶ್ನೆ ಎದುರಿಸಲು ಅರ್ನಬ್ ಗೋಸ್ವಾಮಿಗೆ ಸವಾಲು

Update: 2016-02-20 12:49 IST

ಮುಂಬೈ : ಟೈಮ್ಸ್ ನೌ ಟಿವಿ ಚಾನೆಲ್ 9 ಗಂಟೆಗೆ ಪ್ರಸಾರ ಮಾಡುವ ನ್ಯೂಸ್ ಅವರ್ ಸಂವಾದದ ಆ್ಯಂಕರ್ ಅರ್ನಬ್ ಗೋಸ್ವಾಮಿಯವರಿಗೆ ಜೆಎನ್‌ಯು ಹಗರಣದ ಸಂಬಂಧ ತಿರುಚಿದ ವೀಡಿಯೋ ಹಾಗೂ ನಕಲಿ ಐಬಿ ವರದಿ ಬಗ್ಗೆ ಜೆಎನ್‌ಯುವಿನಲ್ಲಿ ಪ್ರಶ್ನೆಗಳನ್ನು ಎದುರಿಸಲು ಫೇಸ್ಬುಕ್ಕಿನಲ್ಲಿ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ ಆಲ್ ಇಂಡಿಯಾ ಪ್ರೋಗ್ರೆಸ್ಸಿವ್ ವಿಮೆನ್ಸ್ ಎಸೋಸಿಯೇಶನ್ ಇದರ ಕಾರ್ಯದರ್ಶಿ ಕವಿತಾ ಕೃಷ್ಣನ್.

ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿರುವ ಬಹಿರಂಗ ಸವಾಲಿನಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಮಾಸಿಕ ‘ಲಿಬರೇಶನ್’ ಸಂಪಾದಕಿಯೂ ಆಗಿರುವ ಕವಿತಾ ಹೀಗೆಂದು ಬರೆದಿದ್ದಾರೆ ‘‘ನಮ್ಮ ಆಯ್ಕೆಯ ಸ್ಥಳಕ್ಕೆ, ಪ್ರಾಯಶಃ ಜೆಎನ್‌ಯು ಆಗಿರಬಹುದು, ನೀವು ನ್ಯೂಸ್ ಅವರ್‌ಗೆ ಒಂದು ರಾತ್ರಿ ಬರಬೇಕು. ಆದರೆ ಅಲ್ಲಿ ನೀವು ಆ್ಯಂಕರ್ ಕುರ್ಚಿಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಬದಲಾಗಿ ನಾವು ನ್ಯೂಸ್ನ ರಾಹುಲ್ ಶಿವಶಂಕರ್ ಹಾಗೂ ಝೀ ನ್ಯೂಸ್‌ನ ಸುಧೀರ್ ಚೌಧುರಿಯವರನ್ನು ನಿಮ್ಮೊಂದಿಗೆ ಅತಿಥಿಗಳಾಗಿ ಆಹ್ವಾನಿಸುತ್ತೇವೆ. ನೀವು ಮೂವರೂ  ತಿರುಚಿದ ವೀಡಿಯೋ,ನಕಲಿ ಐಬಿ ವರದಿ ಸಹಿತಿ ಜೆಎನ್‌ಯು ಹಗರಣ ಸಂಬಂಧ ನಿಮ್ಮ ಸಂವಾದ ಕಾರ್ಯಕ್ರಮಗಳಲ್ಲಿರುವ ಹಲವಾರು ಇತರ ‘ಪ್ರಮಾದ’ಗಳ ಸಂಬಂಧ ಪ್ರಶ್ನೆಗಳನ್ನು ಎದುರಿಸಬಹುದು.

ನೀವು ದೇಶದ್ರೋಹ ಅಥವಾ ಘೋಷಣೆಗಳೆಡೆಗೆ ನಿಮ್ಮ ಮಾತುಗಳನ್ನು ತಿರುಗಿಸುವ ಹಾಗಿಲ್ಲ. ಈ ಸಂವಾದ ಕೇವಲ ತಿರುಚಿದ ವೀಡಿಯೋ, ನಕಲಿ ಐಬಿ ವರದಿ ಹಾಗೂ ನಕಲಿ ಟ್ವೀಟ್‌ಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.’’


‘‘ನೀವು ತಿರುಚಿದ ವೀಡಿಯೋಗಳನ್ನು ಉಪಯೋಗಿಸಿ ಜೆಎನ್‌ಯುಗೆ ಮಾಡಿರುವುದಕ್ಕೂ ಎಬಿವಿಪಿ ರೋಹಿತ್ ವಿಚಾರದಲ್ಲಿ ಆತನಿಗೆ ಅಪೆಂಡಿಸೈಟಿಸ್ ಇದ್ದರೂ ಆತನಿಗೆ ಗಾಯಗಳಾಗಿವೆಯೆಂದು ಸುಳ್ಳು ಹೇಳಿರುವುದರ ಮಧ್ಯೆ ಏನು ವ್ಯತ್ಯಾಸವಿದೆಯೆಂದು ನಿಮ್ಮನ್ನು ಪ್ರಶ್ನಿಸಲಾಗುವುದು.

ನಿಮ್ಮನ್ನು ವೈರ್ ಸುದ್ದಿ ಸಂಸ್ಥೆಯ ಸಿದ್ಧಾರ್ಥ್ ವರದರಾಜನ್ ಮೊದಲು ಎಕ್ಸ್‌ಪೋಸ್ ಮಾಡಿದಾಗ ನೀವೇಕೆ ಸುಳ್ಳು ಹೇಳಿದಿರೆಂದು ನಿಮ್ಮನ್ನು ಪ್ರಶ್ನಿಸಲಾಗುವುದು. ಜೆಎನ್‌ಯುವಿನ ಖ್ಯಾತಿಗೆ ಮಸಿ ಬಳಿದು ರಾತ್ರಿ ಅದು ಹೇಗೆ ಅರ್ನಬ್, ರಾಹುಲ್ ಹಾಗೂ ಸುಧೀರ್ ಅವರಿಗೆ ನಿದ್ದೆ ಬರುವುದೆಂದು ದೇಶಕ್ಕೆ ಗೊತ್ತಾಗಬೇಕು. ಇಂತಹ ಪ್ರಶ್ನೆಗಳನ್ನು ನೀವು ಎದುರಿಸಬಹುದೇ? ಇಲ್ಲದಿದ್ದಲ್ಲಿ ಇಂತಹ ವಿಷಯಗಳಲ್ಲಿ ನೀವೇ ನ್ಯಾಯಾಧೀಶರಂತೆ ವರ್ತಿಸಬೇಡಿ. ನಿಮ್ಮ ಖ್ಯಾತಿ ಚಿಂದಿ ಚೂರಾಗಿದೆ. ನೀವೊಬ್ಬ ಸುಳ್ಳುಗಾರ ಹಾಗೂ ನಿಮ್ಮ ಸುಳ್ಳುಗಳು ಯುವಜನರ ಜೀವನವನ್ನೇ ಹಾಳುಗೆಡಹಬಹುದೆಂಬ ಕಿಂಚಿತ್ತೂ ಯೋಚನೆ ನಿಮಗಿಲ್ಲ,’’ಎಂದು ಕವಿತಾ ತಮ್ಮ ಫೇಸ್ಬುಕ್ ಪುಟದಲ್ಲಿ ಕೆಂಡ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News