ಯೋಗಿ ಆದಿತ್ಯನಾಥ್ ಮುಂದಿನ ಉ.ಪ್ರ ಬಿಜೆಪಿ ಅಧ್ಯಕ್ಷ?
ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಿನ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯ ದೃಷ್ಟಿಯಿಂದ ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಸದಾ ವಿವಾದದ ಸುಳಿಯಲ್ಲಿರುವ ಗೋರಖಪುರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ನೇಮಿಸಲು ತೀವ್ರ ಉತ್ಸುಕರಾಗಿದ್ದಾರೆಂದು ತಿಳಿದು ಬಂದಿದೆ.
ಜೆಎನ್‌ಯು ಹಗರಣದ ನಂತರ ದೇಶದಲ್ಲೆದ್ದಿರುವ ರಾಷ್ಟ್ರೀಯತೆಯ ವಿಚಾರದ ಗಂಭೀರ ಚರ್ಚೆಯನ್ನು ಚುನಾವಣೆಯ ತನಕ ಜೀವಂತವಾಗಿರಿಸ ಬಯಸಿರುವ ಬಿಜೆಪಿ ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯನ್ನಿಡಲು ಈ ಹುದ್ದೆಗೆ ಹಲವಾರು ಆಕಾಂಕ್ಷಿಗಳಿದ್ದರೂ ಬೆಂಕಿಚೆಂಡು ಎಂದೇ ಕರೆಯಲ್ಪಡುವ ಯೋಗಿ ಆದಿತ್ಯನಾಥರನ್ನು ಈ ಹುದ್ದೆಗೆ ತರಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇಲಾಗಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಈ ಯುವ ಸಂಸದ ಮತಗಳ ಧ್ರವೀಕರಣ ಮಾಡುವಲ್ಲಿಯೂ ಎತ್ತಿದ ಕೈ ಎಂದು ಅರಿತಿರುವ ಶಾ ಅವರಿಗಿಂತ ಈ ಹುದ್ದೆಗೆ ಬೇರೆ ಉತ್ತಮ ಆಯ್ಕೆ ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ.
ಪೂರ್ವ ಉತ್ತರ ಪ್ರದೇಶದಲ್ಲಿ ಮಹಂತ್‌ಜಿ ಎಂದು ಕರೆಯಲ್ಪಡುತ್ತಿರುವ ಯೋಗಿ ಆದಿತ್ಯನಾಥ್ ಕೆಲವರಿಗೆ ಆ ರಾಜ್ಯದಲ್ಲಿ ಹಿಂದುತ್ವದ ಪ್ರತೀಕವಾಗಿ ಹೊರಹೊಮ್ಮಿದ್ದಾರೆ.
ಅವರ ಹಲವು ಪ್ರಚೋದನಾತ್ಮಕ ಭಾಷಣಗಳು ಹಲವಾರು ಬಾರಿ ಮತೀಯ ಭಾವನೆಗಳನ್ನು ಕೆರಳಿಸಿವೆ. ‘‘ಒಬ್ಬ ಹಿಂದು ಮಹಿಳೆಯನ್ನು ಬಲವಂತವಾಗಿ ಮತಾಂತರ ಮಾಡಿದರೆ ಹಿಂದು ಪುರುಷರು ನೂರು ಮುಸ್ಲಿಂ ಮಹಿಳೆಯರನ್ನು ವಿವಾಹವಾಗಬೇಕು’’ ಅಥವಾ ‘‘ಮಸೀದಿಗಳಲ್ಲಿ ಗೌರಿ ಗಣೇಶ ವಿಗ್ರಹಗಳನ್ನು ಸ್ಥಾಪಿಸುತ್ತೇನೆ’’ ಎಂಬ ಅವರ ಮಾತುಗಳು ಸಾಕಷ್ಟು ವಿವಾದಕ್ಕೀಡಾಗಿವೆ.
ಚುನಾವಣಾ ಆಯೋಗದಿಂದ ಹಲವಾರು ಬಾರಿ ತರಾಟೆಗೊಳಗಾಗಿದ್ದರೂ ಹಾಗೂ ಅವರ ಭಾಷಣಗಳು ಪೂರ್ವ ಉತ್ತರಪ್ರದೇಶದಲ್ಲಿ ಗಲಭೆಗಳಿಗೆ ಕಾರಣವಾಗಿದ್ದರೂ ಆದಿತ್ಯನಾಥ್ ತಮ್ಮ ಕಾರ್ಯ ವನ್ನು ಮುಂದುವರಿಸಿದ್ದು ಚುನಾವಣೆ ಸಮಯ ಅವರು ಯಾವತ್ತೂ ಪಕ್ಷದ ಬಹು ಬೇಡಿಕೆಯ ಸಂಸದರಾಗಿರುತ್ತಾರೆ.
ಮೇಲಾಗಿ ದೆಹಲಿ ಹಾಗೂ ಬಿಹಾರ ಚುನಾವಣೆಗಳಲ್ಲಿನ ಸೋಲಿನ ಬಳಿಕ ಉತ್ತರ ಪ್ರದೇಶದಲ್ಲಿ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವಅಮಿತ್ ಶಾ ತಮ್ಮ ಕಾರ್ಯ ಸಾಧಿಸಲು ಯೋಗಿ ಆದಿತ್ಯನಾಥರಂತ ನಾಯಕರ ಅಗತ್ಯವಿದೆಯೆಂದು ಅರಿತುಕೊಂಡೇ ಅವರನ್ನು ಮಹತ್ವದ ಸ್ಥಾನದಲ್ಲಿ ಕೂರಿಸಲು ಅತೀವ ಆಸಕ್ತಿ ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ.