ಪಟೇಲ್ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಆಸ್ಪತ್ರೆಗೆ ದಾಖಲು
ಸೂರತ್,ಫೆ.20: ಅನಾರೋಗ್ಯದ ಹಿನ್ನೆಲೆಯಲ್ಲಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಸಂಚಾಲಕ ಹಾರ್ದಿಕ್ ಪಟೇಲ್ ಅವರನ್ನು ಶನಿವಾರ ಬೆಳಗಿನ ಜಾವ ಇಲ್ಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೈಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬುಧವಾರ ಸಂಜೆಯಿಂದ ಅನಿರ್ದಿಷ್ಟಾವಧಿ ನಿರಶನ ನಡೆಸುತ್ತಿರುವ ಹಾರ್ದಿಕ್ ತಲೆ ಸುತ್ತುವಿಕೆ ಮತ್ತು ಮೂತ್ರ ವಿಸರ್ಜನೆಗೆ ತೊಂದರೆಯ ಬಗ್ಗೆ ದೂರಿಕೊಂಡ ನಂತರ ಅವರನ್ನು ಲಾಜಪೋರ್ ಸೆಂಟ್ರಲ್ ಜೈಲಿನಿಂದ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಬಳಿಕ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಯಲ್ಲಿನ ಕೈದಿಗಳ ವಾರ್ಡ್‌ನಲ್ಲಿ ದಾಖಲಿಸಲಾಯಿತು.
ನಿರಶನ ಆರಂಭಿಸಿದಾಗಿನಿಂದ ಹಾರ್ದಿಕ್‌ರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿತ್ತು. ಹೊರಗಿನ ಯಾರೊಂದಿಗೂ ಭೇಟಿಗೆ ಅವರಿಗೆ ಅವಕಾಶ ನೀಡಲಾಗಿರಲಿಲ್ಲ. ತನಗೆ ಮನೆಯಿಂದ ಪೂರೈಕೆಯಾಗುತ್ತಿರುವ ಆಹಾರದಲ್ಲಿ ನೀರು ಮತ್ತು ಮಣ್ಣು ಬೆರೆಸಲಾಗುತ್ತಿದೆ ಎಂದು ಹಾರ್ದಿಕ್ ಆರೋಪಿಸಿದ್ದರು. ಆದರೆ ಜೈಲು ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
ಹಾರ್ದಿಕ್‌ರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕ ಎಂ.ಕೆ.ವಡೇಲಾ ತಿಳಿಸಿದರು.
ಆಹಾರದ ಜೊತೆಗೆ ನೀರನ್ನೂ ತ್ಯಜಿಸಿದ್ದ ಹಾರ್ದಿಕ್ ಇದೀಗ ವೈದ್ಯರ ಸಲಹೆಯ ಮೇರೆಗೆ ನೀರನ್ನು ಸೇವಿಸುತ್ತಿದ್ದಾರೆ.
ಎರಡು ದೇಶದ್ರೋಹದ ಪ್ರಕರಣಗಳಲ್ಲಿ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಿಂದಲೂ ಬಂಧನದಲ್ಲಿದ್ದಾರೆ.