ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ : ಮಯೂಕಾಗೆ ಅವಳಿ ಪದಕ, ದುತೀಗೆ ಕಂಚು
ದೋಹಾ, ಫೆ.20: ಇಲ್ಲಿ ನಡೆಯುತ್ತಿರುವ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲಾಂಗ್‌ಜಂಪ್ ತಾರೆ ಮಯೂಕಾ ಜಾನಿ ಚಿನ್ನ ಸಹಿತ ಎರಡು ಪದಕಗಳನ್ನು ಜಯಿಸಿದರು. 60 ಮೀ. ಡ್ಯಾಶ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಓಟಗಾರ್ತಿ ದುತೀ ಚಂದ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಲಾಂಗ್‌ಜಂಪ್ ಸ್ಪರ್ಧೆಯಲ್ಲಿ 6.35 ಮೀ. ದೂರ ಜಿಗಿದ ಮಯೂಕಾ ಭಾರತಕ್ಕೆ ಟೂರ್ನಿಯಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ವಿಯೆಟ್ನಾಂನ ಬುಯ್ ಥಿ ಥಾವೊ(6.30 ಮೀ.) ಬೆಳ್ಳಿ ಹಾಗೂ ಕಝಕ್‌ಸ್ತಾನದ ಒಲ್ಗಾ ರಿಪಕೊವಾ(6.22 ಮೀ.) ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಭಾರತದ ಇನ್ನೋರ್ವ ಸ್ಪರ್ಧಿ ಎಂ.ಎ. ಪ್ರಜುಶಾ 6.15 ಮೀ. ದೂರ ಜಿಗಿಯುವ ಮೂಲಕ 5ನೆ ಸ್ಥಾನ ಪಡೆದರು.
ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ 14.00 ಮೀ. ದೂರ ಜಿಗಿದ ಮಯೂಕಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ದುತೀ ಚಂದ್ 60 ಮೀ. ಡ್ಯಾಶ್ ವಿಭಾಗದ ಹೀಟ್ಸ್‌ನಲ್ಲಿ 7.28 ಸೆಕೆಂಡ್‌ನಲ್ಲಿ ಗುರಿ ತಲುಪಿ ನ್ಯಾಶನಲ್ ರೆಕಾರ್ಡ್ಸ್ ನಿರ್ಮಿಸಿದರು. ಫೈನಲ್‌ನಲ್ಲಿ 7.37 ಸೆಕೆಂಡ್‌ನಲ್ಲಿ ಗುರಿ ತಲುಪಿದ ದುತೀ ಕಂಚಿನ ಪದಕವನ್ನು ಜಯಿಸಿದ್ದಾರೆ.
ಮಹಿಳೆಯರ 1500 ಮೀ. ಓಟದಲ್ಲಿ 4:29.06 ಸೆಕೆಂಡ್‌ನಲ್ಲಿ ಗುರಿ ತಲುಪಿದ ಭಾರತದ ಸುಗಂಧಾ ಕುಮಾರಿ ಕಂಚಿನ ಪದಕವನ್ನು ಗೆದ್ದುಕೊಂಡರು.
ಮಹಿಳೆಯರ ಶಾಟ್‌ಪುಟ್‌ನಲ್ಲಿ ಮನ್‌ಪ್ರೀತ್ ಕೌರ್ 15.21 ಮೀ. ದೂರ ಶಾಟ್‌ಪುಟ್ ಎಸೆದು ಆರನೆ ಸ್ಥಾನ ಪಡೆದರು. ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನಿ ಶಂಕರ್ ಮೊದಲ ತಡೆಯನ್ನು ದಾಟಲು ವಿಫಲರಾದರು.