IPL AUCTION 2026 | 14.2 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದ ಅನ್ ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್ ಯಾರು?
ಪ್ರಶಾಂತ್ ವೀರ್ (Photo: X/@ChennaiIPL)
ಹೊಸದಿಲ್ಲಿ: ಐಪಿಎಲ್ 2026 ಋತುವಿನ ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ 20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ 14.2 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾದ ಅನ್ ಕ್ಯಾಪ್ಡ್ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.
ಬುಧವಾರ ಅಬುಧಾಬಿಯಲ್ಲಿ ನಡೆದ 2026ರ ಐಪಿಎಲ್ ಋತುವಿನ ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ 20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 14.2 ಕೋಟಿ ರೂ. ಭಾರಿ ಮೊತ್ತ ತೆತ್ತು ಖರೀದಿಸಿದೆ. ಭಾರಿ ಮೊತ್ತಕ್ಕೆ ಮಾರಾಟವಾದ ಅನ್ ಕ್ಯಾಪ್ಡ್ ಆಟಗಾರ ಎಂಬ ಹಿರಿಮೆಗೆ ಪ್ರಶಾಂತ್ ವೀರ್ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ, 2022ರಲ್ಲಿ ಲಕ್ನೊ ಸೂಪರ್ ಜೇಂಟ್ಸ್ ತಂಡ ಅನ್ ಕ್ಯಾಪ್ಡ್ ಆಟಗಾರರಾಗಿದ್ದ ಬೌಲರ್ ಆವೇಶ್ ಖಾನ್ ರನ್ನು 10 ಕೋಟಿ ರೂ. ತೆತ್ತು ಖರೀದಿಸಿತ್ತು.
ಪ್ರಶಾಂತ್ ವೀರ್ ಅವರ ಮೂಲಬೆಲೆ 30 ಲಕ್ಷ ರೂ. ಮಾತ್ರವಾಗಿದ್ದರೂ, ಮುಂಬೈ ಇಂಡಿಯನ್ಸ್ ತಂಡ ಹಾಗೂ ಲಕ್ನೊ ಸೂಪರ್ ಜೇಂಟ್ಸ್ ತಂಡ ಆರಂಭದಲ್ಲಿ ಅವರ ಖರೀದಿಗೆ ಪೈಪೋಟಿ ಪ್ರದರ್ಶಿಸಿದ್ದರಿಂದ, ಬಿಡ್ಡಿಂಗ್ ಮೊತ್ತ ಆಕಾಶಕ್ಕೇರಿತು. ಕೊನೆಗೆ ಲಕ್ನೊ ಸೂಪರ್ ಜೇಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪೈಪೋಟಿಯಲ್ಲಿ ಪ್ರಶಾಂತ್ ವೀರ್ ಅವರನ್ನು ಖರೀದಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಯಿತು.
ಪ್ರಶಾಂತ್ ವೀರ್ ಈವರೆಗೆ 9 ದೇಶೀಯ ಟಿ-20 ಪಂದ್ಯಗಳನ್ನಾಡಿದ್ದಾರೆ. ಉತ್ತರ ಪ್ರದೇಶ ಟಿ-20 ಲೀಗ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ಉತ್ತರ ಪ್ರದೇಶ ಅಂಡರ್ 23ರೊಳಗಿನ ತಂಡದಲ್ಲಿ ಅವರ ತೋರಿದ ಪ್ರದರ್ಶನದಿಂದಾಗಿ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗುವ ಅವಕಾಶ ದೊರೆತಿದೆ.