ಕಾಶ್ಮೀರಿ ಮುಸ್ಲಿಮ್ ಆಗಿರುವುದೇ ವಿಚಾರಣೆಯನ್ನು ಅಗತ್ಯವಾಗಿಸುವ ಅಪರಾಧವಾಗಿಬಿಟ್ಟಿದೆ:ಉಮರ್
ಶ್ರೀನಗರ,ಫೆ.20: ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಬೆಂಬಲಿಗ ಅಶೋಕ ಪಂಡಿತ್‌ರನ್ನು ತರಾಟೆಗೆತ್ತಿಕೊಂಡಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು,ಈಗ ಕಾಶ್ಮೀರಿ ಮುಸ್ಲಿಮನಾಗಿರುವುದೇ ವಿಚಾರಣೆಯನ್ನು ಅಗತ್ಯವಾಗಿಸುವ ‘‘ಅಪರಾಧ’’ವಾಗಿಬಿಟ್ಟಿದೆ ಎಂದು ಹೇಳಿದ್ದಾರೆ.
ಅವರು ಶೀಲಾ ಆಗಿರದೆ ಶೆಹ್ಲಾ ಆಗಿರುವುದೇ ಅಪರಾಧವಾಗಿದೆ. ಎಂತಹ ದುರಂತ..? ಎಂದು ಉಮರ್ ಶನಿವಾರ ಟ್ವೀಟಿಸಿದ್ದಾರೆ.
ಚಿತ್ರ ನಿರ್ಮಾಪಕ ಅಶೋಕ ಪಂಡಿತ್ ಅವರ ಸರಣಿ ಟ್ವೀಟ್‌ಗಳಿಗೆ ಉತ್ತರಿಸಿರುವ ಉಮರ್, ನಾನು ಕಾಶ್ಮೀರಿ ಮುಸ್ಲಿಮನಾಗಿದ್ದೇನೆ ಮತ್ತು ನಾನು ರಾಮದೇವರ ಬೆಂಬಲಿಗ ಅಥವಾ ಅನುಯಾಯಿಯಲ್ಲ. ನಾನೂ ವಿಚಾರಣೆಗೆ ಸಿದ್ಧನಾಗಿರುವುದು ಒಳ್ಳೆಯದು ಎಂದು ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಕುಟುಕಿದ್ದಾರೆ.
ಕಾಶ್ಮೀರಿ ಮುಸ್ಲಿಮರಾಗಿರುವ ಶೆಹ್ಲಾ ರಶೀದರನ್ನು ವಿಚಾರಣೆಗೊಳಪಡಿಸಬೇಕು. ಅವರು ಜೆಎನ್‌ಯುದಲ್ಲಿ ಬಾಬಾ ರಾಮದೇವರನ್ನೂ ವಿರೋಧಿಸಿದ್ದರು ಎಂದು ಟ್ವೀಟಿಸಿದ್ದ ಪಂಡಿತ್, ಜೆಎನ್‌ಯು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಹುಡುಕಾಡುತ್ತಿರುವ ಉಮರ್ ಖಾಲಿದ್ ಶೆಹ್ಲಾ ನೆರವಿನೊಂದಿಗೆ ಕಾಶ್ಮೀರಕ್ಕೆ ಪರಾರಿಯಾಗಿರಬೇಕು. ಆಕೆ ಜೆಎನ್‌ಯುನಲ್ಲಿ ಹುರಿಯತ್‌ಗಾಗಿ ಕೆಲಸ ಮಾಡುತ್ತಾರೆ ಎಂದೂ ಆರೋಪಿಸಿದ್ದರು.