×
Ad

ಕನಿಷ್ಠ ರೂ. 45 ಲಕ್ಷ ಖರ್ಚು

Update: 2016-02-20 23:44 IST

 ಹೊಸದಿಲ್ಲಿ, ಫೆ.20: ರಾಷ್ಟ್ರೀಯತೆಯೆಂಬ ಭಾವನೆಗೆ ಬೆಲೆ ಕಟ್ಟಲು ಅಸಾಧ್ಯವಾದರೂ, ಯುವಜನತೆಯಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 207 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕೆಂಬ ನಿರ್ಧಾರವನ್ನು ಜಾರಿಗೊಳಿಸಬೇಕಾಗಿದ್ದರೆ ಸ್ವಲ್ಪ ಬೆಲೆಯಂತೂ ಕಟ್ಟಲೇಬೇಕಾಗುತ್ತದೆ. ಇಂತಹ ಒಂದು ರಾಷ್ಟ್ರಧ್ವಜವನ್ನು 200 ಮೀಟರ್ ಎತ್ತರದಲ್ಲಿ ಹಾರಿಸಲು ಕನಿಷ್ಠ ರೂ. 40 ಲಕ್ಷದಿಂದ ರೂ. 45 ಲಕ್ಷದಷ್ಟು ವೆಚ್ಚ ತಗಲುವುದಲ್ಲದೆ ಅದರ ಮಾಸಿಕ ನಿರ್ವಹಣಾ ವೆಚ್ಚ ರೂ 65,000 ರಷ್ಟಾಗುವುದು ಎಂದು ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ ಇದರ ಸಿಇಓ ಹಾಗೂ ನಿವೃತ್ತ ಕಮಾಂಡರ್ ಕೆ.ವಿ. ಸಿಂಗ್ ಹೇಳುತ್ತಾರೆ. ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅಧ್ಯಕ್ಷತೆಯಲ್ಲಿ ನಡೆದ ಉಪಕುಲಪತಿಗಳ ಸಭೆಯಲ್ಲಿ ಮೇಲಿನ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
   ಈ ನಿರ್ಧಾರವನ್ನು ಜಾರಿಗೊಳಿಸಲು ಹಣಕಾಸಿನ ಕೊರತೆ ಎದುರಾಗದು ಎಂದು ಹೇಳುವ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ದೆಹಲಿಯ ಸೆಂಟ್ರಲ್ ಪಾರ್ಕ್‌ನಲ್ಲಿ 2014ರಲ್ಲಿ ಸ್ಥಾಪಿಸಲಾದ 207 ಅಡಿ ಉದ್ದದ ರಾಷ್ಟ್ರಧ್ವಜಸ್ತಂಭದ ಮಾದರಿಯಲ್ಲಿಯೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಧ್ವಜಸ್ತಂಭವನ್ನು ವಿಶ್ವವಿದ್ಯಾನಿಲಯಗಳ ಹೃದಯ ಭಾಗದಲ್ಲಿ ಸ್ಥಾಪಿಸುವ ಯೋಚನೆಯಿದೆ. ದೆಹಲಿಯಲ್ಲಿ ಸ್ಥಾಪಿಸಲಾದ ಈ ಧ್ವಜಸ್ತಂಭಕ್ಕೆ ರೂ 40 ಲಕ್ಷ ವೆಚ್ಚವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
 
   

   ದೇಶದಲ್ಲಿ ವಿವಿಧ ಕಡೆಗಳಲ್ಲಿ ಚಿರಸ್ಮರಣೀಯ ಧ್ವಜಸ್ಥಂಭಗಳನ್ನು ಸ್ಥಾಪಿಸುವ ಕಾರ್ಯ ಕೈಗೆತ್ತಿಕೊಂಡಿರುವ ಕಾಂಗ್ರೆಸ್ ರಾಜಕಾರಣಿ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರ ನೇತೃತ್ವದ ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ ಪ್ರಕಾರ ಈ ಯೋಜನೆಯ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಪುಣೆಯ ಎರಡು ಸಂಸ್ಥೆಗಳು ತಯಾರಿಸುವ ಹಾಗೂ ಇದಕ್ಕಾಗಿ ಉಪಯೋಗಿಸಲಾಗುವ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಹಾಗೂ ಫ್ಯಾಬ್ರಿಕೇಟ್ ಮಾಡಲಾದ ಹೈಟೆನ್ಸೈಲ್ ಸ್ಟೀಲ್ ಸಾಕಷ್ಟು ಭಾರವಾಗಿದೆ. ಪುಣೆಯ ಬಜಾಜ್ ಎಲೆಕ್ಟ್ರಿಕಲ್ಸ್ ಹಾಗೂ ಟ್ರಾನ್ಸ್ ಇಂಡಿಯಾ ಈ ಹೈಟೆನ್ಸೈಲ್ ಸ್ಟೀಲ್ ಸರಬರಾಜು ಮಾಡುತ್ತಿದ್ದರೆ, ರಾಷ್ಟ್ರಧ್ವಜಕ್ಕೆ ಉಪಯೋಗಿಸಲಾಗುವ ಹೆಣೆದ ಪಾಲಿಯೆಸ್ಟರ್ ಬಟ್ಟೆಯನ್ನು ಮುಂಬೈನ ಫ್ಲ್ಯಾಗ್ ಶಾಪ್ ಸರಬರಾಜು ಮಾಡುತ್ತದೆ, ಎಂದು ಫೌಂಡೇಶನ್ ಹೇಳಿದೆ.
 ಸರಕಾರ ತನ್ನನ್ನು ಇಲ್ಲಿಯವರೆಗೆ ರಾಷ್ಟ್ರ ಧ್ವಜಸ್ತಂಭ ನಿರ್ಮಾಣ ಮಾಡುವ ವಿಚಾರದಲ್ಲಿ ಸಂಪರ್ಕಿಸಿಲ್ಲವೆಂದು ಫೌಂಡೇಶನ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News