ಅಮರ್ ಅಕ್ಬರ್ ಅಂತೋಣಿ-ಇವತ್ತಿಗೂ ಪ್ರಸ್ತುತ
ಪ್ರತೀ ಸಲದಂತೆ ಈ ವರ್ಷವೂ ಮಹಾನಗರ ಬೆಂಗಳೂರಿನಲ್ಲಿ ವಾರ್ಷಿಕದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸದ್ದುಗದ್ದಲ ಮಾಡದೆ ನಡೆಯಿತು. ಕರ್ನಾಟಕ ಚಲನಚಿತ್ರ ಅಕಾಡಮಿಯ ಸಹಯೋಗ ದೊಂದಿಗೆ ಸರಕಾರ ನಡೆಸುವ ಈ ಚಿತ್ರೋತ್ಸವ ಮಹಾನಗರದ ಹತ್ತರಲ್ಲಿಹನ್ನೊಂದು ಘಟನೆಗಳಂತೆ ಪತ್ರಿಕೆಗಳಲ್ಲಿ ಕಾಣಿಸಿಕೊಂಡು ನೇಪಥ್ಯಕ್ಕೆ ಸರಿಯಿತು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೂ ಉತ್ಸವದ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಷ್ಟೆ ಈ ವರ್ಷದ ವಿಶೇಷ. ಜ.28ರಿಂದ ಫೆೆ.5ರವರೆಗೆ ನಡೆದ ಈ ಎಂಟನೆ ಅಂತಾರಾಷ್ಟ್ರೀಯ ಸಿನೆಮೋತ್ಸವ ಎಲ್ಲ ಸಾಂಸ್ಕೃತಿಕ ಆಚರಣೆಗಳಂತೆ ಒಂದು ಶುಷ್ಕ ಆಚರಣೆಯಾಗಬಾರದಿತ್ತು.
ಚಲನಚಿತ್ರ, ಕಲಾ ಮಾಧ್ಯಮಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದದ್ದು ಮತ್ತು ಪ್ರಬಲವಾದದ್ದು. ನಾಗರಿಕತೆ ಮತ್ತು ಚರಿತ್ರೆಯ ದೃಷ್ಟಿಯಿಂದ ಒಂದು ಸಶಕ್ತವಾದ ಸಾಮಾಜಿಕ ದೃಶ್ಯ ದಾಖಲೆ. ದೇಶವಿದೇಶಗಳ ಸಂಸ್ಕೃತಿಗಳನ್ನು ಅರಿತುಕೊಳ್ಳಲು, ಅಧ್ಯಯನ ಮಾಡಲು ಸಿನೆಮಾ ಒಂದು ಅತ್ಯದ್ಭುತವಾದ ಜ್ಞಾನ ಸಾಧನ. ಎಂದೇ ಚಿತ್ರೋತ್ಸವಗಳು ಸಿನೆಮಾಸಕ್ತರಿಗೆ ಇಂತಹ ಅಧ್ಯಯನಕ್ಕೆ ಒಂದು ಅಪೂರ್ವ ಅವಕಾಶ. ಆದರೆ ಬೆಂಗಳೂರು ಮಹಾನಗರದಲ್ಲಿ ನಡೆದ ಎಂಟನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನನ್ನಂಥ ಹಿರಿಯ ಪತ್ರಕರ್ತರು ಮತ್ತು ಹಿರಿಯ ನಾಗರಿಕರು ಇಂತಹ ಅವಕಾಶದಿಂದ ವಂಚಿತರಾದುದು ದುರದೃಷ್ಟಕರ. ಪ್ರತಿವರ್ಷ ನಗರದ ಬಾದಾಮಿ ಚಿತ್ರ ಮಂದಿರ, ರಾಜ್ಯ ವಾರ್ತಾ ಇಲಾಖೆಯ ಚಿತ್ರ ಮಂದಿರ, ಲಿಡೋ ಚಿತ್ರ ಮಂದಿರ ಹೀಗೆ ನಗರದ ವಿವಿಧೆಡೆಗಳಲ್ಲಿ ಉತ್ಸವದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತಿತ್ತು. ಇದರಿಂದ ಚಲನಚಿತ್ರ ರಸಿಕರಿಗೆ ವಾಸಸ್ಥಳಗಳಿಗೆ ಹತ್ತಿರವಾದ ಚಿತ್ರ ಮಂದಿರಗಳಲ್ಲಿ ತಮ್ಮ ಆಸಕ್ತಿಯ ಸಿನೆಮಾಗಳನ್ನು ನೋಡಲು ಸಾಧ್ಯವಾಗುತಿತ್ತು. ಆದರೆ ಈ ವರ್ಷ ಇಂತಹ ವ್ಯವಸ್ಥೆ ಇರಲಿಲ್ಲ. ಉತ್ಸವದ ಚಿತ್ರಗಳ ಪ್ರದರ್ಶನವನ್ನು ಒಂದೇ ಚಿತ್ರ ಮಂದಿರದಲ್ಲಿ, ಅಂದರೆ ರಾಜಾಜಿ ನಗರದ ಒರಿಯಾನ್ ವಾಣಿಜ್ಯ ಸಮುಚ್ಚಯದಲ್ಲಿನ ಚಿತ್ರ ಮಂದಿರವೊಂದರಲ್ಲಿ ಏರ್ಪಡಿಸಲಾಗಿತ್ತು. ಕೇಂದ್ರಿತ ಪ್ರದರ್ಶನ ವ್ಯವಸ್ಥೆಯಿಂದಾಗಿ ಬಹುಮಂದಿ ಚಿತ್ರಾಸಕ್ತರು ನಿರಾಶೆಗೊಳ್ಳಬೇಕಾಯಿತು. ವಿಕೇಂದ್ರೀಕರಣಕ್ಕೆ ಬದ್ಧವಾದ ಸರಕಾರ ಹೀಗೇಕೆ ಮಾಡಿತೋ ತಿಳಿಯದು.
ಮಾತನಾಡುವ ಭಾಷೆ ಜನತೆಯನ್ನು, ಹಲವಾರು ಸಮುದಾಯಗಳನ್ನು, ಸಂಸ್ಕೃತಿಗಳನ್ನು ಹತ್ತಿರ ತರುತ್ತದೆ. ಸಂಬಂಧಗಳನ್ನು ಕೂಡಿಸುವ ಸೂತ್ರವಾಗುತ್ತದೆ. ಹಾಗೆಯೇ ದೃಶ್ಯ ಭಾಷೆಯೂ. ಇದಕ್ಕೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಉದಾಹರಣೆಗಳನ್ನು ಹುಡುಕುವುದು ಕಷ್ಟವಾಗದು. ದೇಶೀಯವಾಗಿಯೇ ಹೇಳುವುದಾದರೆ, ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ರಾಮಚಂದ್ರ ಗುಹ ಅವರ ಒಂದು ಮಾತನ್ನು ನೋಡಬಹುದು. ಭಾರತ ಎಲ್ಲಿಯವರೆಗೆ, ಚಿರಂತನವಾಗಿ, ಅಖಂಡವಾಗಿ ಉಳಿಯಲು ಸಾಧ್ಯ ಎನ್ನವುದಕ್ಕೆ, ಗುಹ ಅವರು ಕೊಡುವ ಹತ್ತು ಕಾರಣಗಳಲ್ಲಿ ಒಂದು, ಎಲ್ಲಿಯವರೆಗೆ ಜನ ಹಿಂದಿ ಸಿನೆಮಾಗಳನ್ನು ನೋಡುತ್ತಾ, ಅದರ ಹಾಡುಗಳನ್ನು ಹಾಡುತ್ತಿರುತ್ತಾರೋ, ಗುನುಗುನಿಸುತ್ತಿರುತ್ತಾರೋ ಅಲ್ಲಿಯವರೆಗೆ ಭಾರತ ಅಮರ ಎಂಬುದು.(ಬಾಪೂ ನಂತರದ ಭಾರತ ಪುಟ:514). ಗುಹ ತಮ್ಮ ಈ ಮಾತಿಗೆ ಪೂರಕವಾಗಿ ಹಿಂದಿ ಚಿತ್ರ ರಂಗದ ಖ್ಯಾತ ಗೀತ ರಚನಕಾರ ಜಾವೇದ್ ಅಖ್ತರ್ ಅವರ ಅಭಿಪ್ರಾಯವೊಂದನ್ನು ದೃಷ್ಟಾಂತವಾಗಿ ನೀಡಿದ್ದಾರೆ.
ಭಾರತ ಒಕ್ಕೂಟ ವ್ಯವಸ್ಥೆಯಡಿ ತಮ್ಮದೇ ಆದ ಸಂಸ್ಕೃತಿ, ಸಂಪ್ರದಾಯ, ಜೀವನ ಶೈಲಿಗಳನ್ನು ಹೊಂದಿರುವ ಇಪ್ಪತ್ತೊಂಬತ್ತು ರಾಜ್ಯಗಳಿವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಇವೆಲ್ಲ ಅಲ್ಲದೆ ಇನ್ನೂ ಒಂದು ರಾಜ್ಯವಿದೆ. ಅದು ಹಿಂದಿ ಸಿನೆಮಾ ಎನ್ನುತ್ತಾರೆ ಜಾವೇದ್ ಅಖ್ತರ್. ಜಾವೇದ್ ಅವರ ಈ ಮಾತನ್ನು ಉಲ್ಲೇಖಿಸಿ ಗುಹ ಹೀಗೊಂದು
ರೂಪಕಸದೃಶ ತೀರ್ಮಾನಕ್ಕೆ ಬರುತ್ತಾರೆ:
........ಹಿಂದಿ ಸಿನೆಮಾ ಭಾರತದ ಒಂದು ಪ್ರತ್ಯೇಕ ರಾಜ್ಯವಾಗಿ, ಹೂವಿನ ಬುಟ್ಟಿಯಿದ್ದಂತೆ. ಬೇರೆ ರಾಜ್ಯಗಳಲ್ಲಿರುವ ಎಲ್ಲ ಸೃಜನಶೀಲ ಕುಸುಮಗಳನ್ನೂ ಈ ಪುಷ್ಷಪಾತ್ರೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಹೀಗಾಗಿ, ಹಿಂದಿ ಸಿನೆಮಾರಂಗದ ನಟನಟಿಯರು, ನಿರ್ದೇಶಕರು, ಸಂಗೀತಗಾರರು, ತಂತ್ರಜ್ಞರು ಇವರೆಲ್ಲರೂ ಭಾರತದ ಬೇರೆಬೇರೆ ಭಾಗಗಳಿಂದ ಬಂದವರು. ಹೀಗೆ ಹಿಂದಿ ಸಿನೆಮಾ ಭಾರತದ ವಿವಿಧ ಪ್ರದೇಶಗಳಲ್ಲಿನ ವಿವಿಧ ಸಂಸ್ಕೃತಿಗಳ, ವಿವಿಧ ಕಲಾ ಪ್ರಕಾರಗಳ, ವಿವಿಧ ಶೈಲಿಗಳ ಪ್ರತಿನಿಧಿಯೂ ಆಗಿಬಿಟ್ಟಿದೆ.
(ಬಾಪೂ ನಂತರದ ಭಾರತ ಪುಟ:506)
ರಾಮಚಂದ್ರ ಗುಹ ಅವರ ಮೇಲಿನ ಮಾತುಗಳು ನನಗೆ ಥಟ್ಟನೆ ನೆನಪಾಗಲು ಕಾರಣ ನಾನು ಇತ್ತೀಚೆಗೆ ಗಮನಿಸಿದ ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್‌ನ ಪ್ರಕಟಣೆಯಾದ ಅಮರ್ ಅಕ್ಬರ್ ಆಂತೋಣಿ ಪುಸ್ತಕ. ಭಾರತೀಯ ಸಿನೆಮಾ ನಿರ್ದೇಶಕರುಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾಗಿರುವ ಸತ್ಯಜಿತ್ ರಾಯ್ ಅವರ ಚಿತ್ರಗಳ ಬಗ್ಗೆ ಅಧ್ಯಯನಮಾಡಿ ವಿದೇಶಿ ಲೇಖಕರು ಗ್ರಂಥಗಳನ್ನು ರಚಿಸಿರುವ ನಿದರ್ಶನಗಳಿವೆ. ಆದರೆ, ಗಲ್ಲಾಪೆಟ್ಟಗೆ ಯಶಸ್ಸಿನ ಮೇಲೆ ಕಣ್ಣಿಟ್ಟು ನಿರ್ಮಿಸಲಾಗುವ ಬಾಲಿವುಡ್‌ನ ಕಮರ್ಶಿಯಲ್ ಚಿತ್ರಗಳು ಆಧ್ಯಯನಶೀಲ ವಿದೇಶಿ ಲೇಖಕರ ಗಮನ ಸೆಳೆದಿರುವುದು ವಿರಳ. ಅಂತಹ ಗ್ರಂಥಗಳೂ ವಿರಳ. ಸುಮಾರು ನಾಲ್ಕು ದಶಕಗಳಷ್ಟು ಹಿಂದೆ ಮನಮೋಹನ ದೇಸಾಯಿ ಎಂಬ ಯಶಸ್ವಿ ನಿರ್ದೇಶಕ ನಿರ್ಮಿಸಿರುವ -ಗಲ್ಲಾಪೆಟ್ಟಿಗೆ ಸೂತ್ರದ ಅಮರ್ ಅಕ್ಬರ್ ಆಂತೋಣಿ ವಿದೇಶಿ ಲೇಖಕರ ಗಮನ ಸೆಳೆದಿರುವುದು ಕುತೂಹಲಕಾರಿಯಾದುದು. ಚಿತ್ರದ ಹೆಸರನ್ನೆ ಹೊಂದಿರುವ ಈ ಕೃತಿಯ ಲೇಖಕರು: ವಿಲಿಯಂ ಎಲಿಸನ್, ಕ್ರಿಶ್ಚಿಯನ್ ಲೀ ನೊವೆತ್ಸೇ ಮತ್ತು ಆಂಡಿ ರಾತ್ಮನ್.
ಹಿಂದಿ ಚಿತ್ರೋದ್ಯಮದ ಇತಿಹಾಸದಲ್ಲಿ ಜನಪ್ರಿಯತೆಯ ನಿಕಷ ಎಂಬ ಹೆಗ್ಗಳಿಕೆ ಗಳಿಸಿರುವ ಅಮರ್ ಅಕ್ಬರ್ ಆಂತೋಣಿ ಹಾಡು-ಕುಣಿತ ಮತ್ತು ಹುಚ್ಚಾಟದ ಸಾಹಸಗಳಿಂದ ಪ್ರೇಕ್ಷಕರ ಮನಸೂರೆಗೂಳ್ಳುವ ಚಿತ್ರ. ಬಾಲ್ಯದಲ್ಲೇ ತಂದೆ-ತಾಯಿ, ನೆಂಟರಿಷ್ಟರಿಂದ ಬೇರೆಯಾದ ಮೂವರು ಸೋದರರ ಬದುಕನ್ನು ಕೇಂದ್ರವಾಗಿ ಬಿಂಬಿಸುವ ಈ ಚಿತ್ರ ಪ್ರೇಕ್ಷಕರಿಗೆ ಕಚಗುಳಿ ಇಡುವಂಥ ಬಿಡುಬೀಸಿನ ವೈನೋದಿಕವೂ ಹೌದು. ಮುಕ್ತಾಯದಲ್ಲಿ ಮೂವರು ನಾಯಕರುಗಳನ್ನೂ ಒಂದುಗೂಡಿಸುವುದರಲ್ಲಿ ನಿರ್ದೇಶಕರು ಸಾಮಾಜಿಕ ಸಾಮರಸ್ಯದ ಕಾಣ್ಕೆಯ ಆಯಾಮವನ್ನೂ ನೀಡಿದ್ದಾರೆ.
ನಮ್ಮ ಸಿನೆಮಾ ವಿಮರ್ಶಕರ ದೃಷ್ಟಿಯಲ್ಲಿ ಹಾಸ್ಯ, ಸಂಗೀತ, ಭಾವುಕತೆಗಳ ಮಸಾಲೆ ಎಂಬ ತಿರಸ್ಕಾರಕ್ಕೊಳಪಡಬಹುದಾದ ಅಮರ್ ಅಕ್ಬರ್ ಆಂತೋಣಿಯಲ್ಲಿ ಈ ವಿದೇಶೀ ಲೇಖಕರು ಗಾಢವಾದ ಸಾಂಕೇತಿಕತೆಯನ್ನು ಕಂಡಿದ್ದಾರೆ. ಇದು ಜಾತ್ಯತೀತ ಪ್ರಜಾಪ್ರಭುತ್ವ ಹೊಂದಿರುವ ಆಧುನಿಕ ಭಾರತವನ್ನು ಅರ್ಥಮಾಡಿಸುತ್ತದೆ, ಈ ಚಿತ್ರ ಜಾತ್ಯತೀತ ಆಧುನಿಕ ಭಾರತದ ದರ್ಶನ ಮಾಡಿಸುವ ಒಂದು ಮಸೂರವಿದ್ದಂತೆ ಎಂದು ವ್ಯಾಖ್ಯಾನಿಸಿದ್ದಾರೆ.
ಧಾರ್ಮಿಕ ಸಹಿಷ್ಣುತೆ ಮತ್ತು ಬಹುಸಾಂಸ್ಕೃತಿಕತೆಯ ಅಡಿಪಾಯದ ಮೇಲೆ ರೂಪುಗೊಂಡಿರುವ ಭಾರತದ ಭವ್ಯತೆಯ ಉಲ್ಲಾಸದಾಯಕ ಮುಖವನ್ನು ಶ್ಲಾಘನೀಯವಾಗಿ ಬಿಂಬಿಸುವ ಅಮರ್ ಅಕ್ಬರ್ ಆಂತೋಣಿಯಲ್ಲಿ ಇವತ್ತಿನ ಪ್ರೇಕ್ಷಕರ ಧ್ವನಿಗಳೂ ಅನುರಣನಗೊಂಡಿವೆ ಎಂದೂ ಈ ವಿದೇಶಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರ ಬಿಂಬಿಸಿರುವ ಭಾರತದ ಸುಪ್ರಸನ್ನಮುಖ ಲೇಖಕರಿಗೆ ಆಕರ್ಷಕವಾಗಿ, ಆಶಾದಾಯಕವಾಗಿ ಕಂಡಿರುವುದು ಸಹಜವೇ. ಚಿತ್ರದಲ್ಲಿ ಮರೆಮಾಚಿಹೋಗಿರುವ ರಾಷ್ಟ್ರ ವಿಭಜನೆಯ ಕರಾಳ ನೆರಳು, ತುರ್ತುಪರಿಸ್ಥಿತಿಯ ಅತಿರೇಕ-ಅವಾಂತರಗಳು, ಕುಟುಂಬವನ್ನು ರಾಷ್ಟ್ರವೊಂದರ ರೂಪಕವಾಗಿ ಬಿಂಬಿಸಿರುವುದರಲ್ಲಿನ ಉಪದ್ರವಗಳು ಇವೇ ಮೊದಲಾದ ಅಂಶಗಳು ಅವರ ದೃಷ್ಟಿಗೆ ಬಿದ್ದಂತಿಲ್ಲ.
ಇದರ ಯಶಸ್ಸು ಮುಖ್ಯವಾಗಿ ಪ್ರೇಕ್ಷಕನ ಮನದ ಇಂಗಿತವನ್ನೇ ಅವಲಂಬಿಸಿದೆ ಎಂದರೆ ಉತ್ಪ್ರೇಕ್ಷೆಯಾಗದು. ಮೂವರು ಸಹೊದರರಲ್ಲಿ ಯಾರನ್ನು ಅವರು ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ ಎನ್ನುವುದೆ ಇಲ್ಲಿ ಮುಖ್ಯ ಪ್ರಶ್ನೆ. ಹಿಂದು ಸಮುದಾಯದ ಪ್ರಾತಿನಿಧಿಕ ಪಾತ್ರ ಎನ್ನಬಹುದಾದ ಪೊಲೀಸ್ ಅಮರನನ್ನೇ? ಮುಸ್ಲಿಂ ಸಮುದಾಯದ ರಮ್ಯ ಮನೋಹರ ಸಂಗೀತಗಾರ ಅಕ್ಬರನನ್ನೇ? ಅಥವಾ ಚಿನ್ನದಂಥ ಹೃದಯವುಳ್ಳ ಕ್ರಿಶ್ಚಿಯನ್ ಸಮುದಾಯದ ಆಂತೋಣಿಯನ್ನೇ? ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ತಾನೇ ನಾಯಕ ಎಂದು ಹೇಳಿಕೊಳ್ಳಲು ಕಾರಣಗಳು ಇವೆ, ಸಮರ್ಥನೆಗಳು ಇವೆ. ಆದಾಗ್ಯೂ ತಾಯಿಯದೇ ಆಖೈರು ಮಾತು. ಇವರ ಸೋಲು ಗೆಲುವುಗಳ ನಿರ್ಣಯಕ್ಕೆ ಮುನ್ನ ನಮ್ಮ ಈ ವಿದೇಶಿ ಲೇಖಕರ ಬಗ್ಗೆ ಸ್ವಲ್ಪತಿಳಿದುಕೊಳ್ಳೋಣ. ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರುಗಳಾಗಿರುವ ಈ ಮೂವರೂ ಯೋಗಾಯೋಗವೆಂಬಂತೆ ಪಿ.ಎಚ್.ಡಿ., ವಿದ್ಯಾರ್ಥಿಗಳಾಗಿ ಭಾರತದಲ್ಲಿ ಭೇಟಿಯಾದವರು. ಇವರ ಪಿಎಚ್.ಡಿ., ಅಧ್ಯಯನದ ವಿಷಯ: ಒಬ್ಬನದು ಭಾಷಾ ವಿಜ್ಞಾನ, ಇನ್ನೊಬ್ಬನದು ಚರಿತ್ರೆ, ಮತ್ತೊಬ್ಬನದ್ದು ಜನಾಂಗೀಯ ಸ್ಥಿತಿ ಅಧ್ಯಯನ. ಮೂವರಲ್ಲೂ ಇದ್ದ ಸಮಾನ ಆಸಕ್ತಿ ಎಂದರೆ ಭಾರತೀಯ ಸಿನೆಮಾ. ಮೂವರಿಗೂ ಅಮರ್ ಅಕ್ಬರ್ ಆಂತೋಣಿ ಇಷ್ಟವಾಗಿದ್ದು, ಅದು 1970ರ ಕಾಲಘಟ್ಟದ ಭಾರತದ ಕಾಲಮಹಿಮೆಯನ್ನು ಅಥವಾ ಯುಗಧರ್ಮವನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕಾಗಿ. ಇದರಲ್ಲಿನ ಅತಿಯಾದ ಸಾಂಕೇತಿಕತೆ, ಪಾತ್ರಗಳು, ವಿಚಾರಗಳು-ಇವುಗಳ ಮೂಲಕ ಭಾರತದ ಆಧುನಿಕತೆ ಬಗ್ಗೆ ಅತ್ಯವಶ್ಯಕವಾಗಿ ತಿಳಿದುಕೊಳ್ಳಬೇಕಾದ್ದು ಇದೆ ಎಂದು ಅನಿಸಿದ್ದರಿಂದ ಎನ್ನುತ್ತಾರೆ ಆಂಡಿ ರಾತ್ಮನ್.
1970ರ ದಶಕ, ಹಿಂದಿ ಚಿತ್ರರಂಗ ಹಲವು ಬಗೆಯ ಪ್ರಯೋಗಶೀಲತೆಯಲ್ಲಿ ತೊಡಗಿಕೊಂಡಿದ್ದ ಕಾಲ. ಹತ್ತಾರು ಪಾಕಗಳನ್ನೂ ಮಸಾಲೆಗಳನ್ನೂ ಸಂಯೋಜಿಸಿ ಪ್ರೇಕ್ಷಕರಿಗೆ ಹೊಸ ಅಭಿರುಚಿಯನ್ನೂ ವೈವಿಧ್ಯತೆಯನ್ನೂ ಉಣಬಡಿಸುವಂತಹ ವಿವಿಧ ಪ್ರಯೋಗಗಳನ್ನು ಈ ಕಾಲಘಟ್ಟದಲ್ಲಿ ನಾವು ಕಾಣುತ್ತೇವೆ. ಅಮರ್ ಅಕ್ಬರ್ ಆಂತೋಣಿ ಮಸಾಲೆ ತುರುಕುವ ಇಂತಹ ಪ್ರಯೋಗಶೀಲತೆಯನ್ನು ಒಂದು ಶೈಲಿಯಾಗಿ ಸೂತ್ರೀಕರಿಸಿ ಹಿಂದಿ ಸಿನೆಮಾದಲ್ಲಿ ಪರಿವರ್ತನೆಯ ಹೊಸ ಶಕೆಗೆ ನಾಂದಿ ಹಾಡಿತು ಎನ್ನವುದು ಈ ತ್ರಿಮೂರ್ತಿಗಳ ತೀರ್ಮಾನ.
ಮನರಂಜನೆಯ ಎಲ್ಲ ಮಸಾಲೆಗಳನ್ನೂ ಒಳಗೊಂಡಿರುವ ಈ ಚಿತ್ರ ಜಾತ್ಯತೀತ ಪ್ರಜಾಸತ್ತೆಯ ಬಗ್ಗೆ ಏನನ್ನು ಹೇಳುತ್ತದೆ? ಇದಕ್ಕೆ ಲೇಖಕರ ಉತ್ತರ ಹೀಗಿದೆ:
ಅಮರ್ ಅಕ್ಬರ್ ಆಂತೋಣಿಯಲ್ಲಿನ ಬಹುತ್ವದ ಹುರುಪು, ನವಚೈತನ್ಯಗಳಲ್ಲಿ ನಾವು ಕಾಣುವುದು ಮೇಲಿನಿಂದ ಸಂವಿಧಾನಾತ್ಮಕವಾಗಿ ಹೇರಲ್ಪಟ್ಟ ಜಾತ್ಯತೀತತೆಯಲ್ಲ. ಚಿತ್ರದಲ್ಲಿ ಬಿಂಬಿಸಲಾಗಿರುವ ಜಾತ್ಯತೀತತೆ ಸಮುದಾಯಗಳ ನಡುವಣ ಮೈತ್ರಿಯಿಂದಾಗಿ ತಳಮಟ್ಟದಿಂದ ರೂಪುಗೊಂಡದ್ದು. ನಿರ್ದೇಶಕರ ಪರಿಕಲ್ಪನೆಯ ಈ ಮೈತ್ರಿ ಅನೇಕ ಬಿಕ್ಕಟ್ಟು, ಪರಿಹಾಸ್ಯಗಳಿಗೆ ಪುಟಕೊಡುವುದಾದರೂ ಕೊನೆಯಲ್ಲಿ, ಅವರು ಒಬ್ಬಳೇ ತಾಯಿಯ ಮಕ್ಕಳೆಂದು ತಿಳಿದಾಗ ನಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ. ಆದರೆ, ನಿಜವಾಗಿ ಅವರು ಒಗ್ಗೂಡುವುದು ರಕ್ತ ಸಂಬಂಧದಿಂದಾಗಿಯಲ್ಲ, ಪ್ರೀತಿ, ಪರಸ್ಪರ ಯೋಗಕ್ಷೇಮ ಮತ್ತು ಕರ್ತವ್ಯಗಳಂತಹ ವೌಲ್ಯಗಳನ್ನು ಬೋಧಿಸುವ ಸಾಂಸ್ಕೃತಿಕ ರೂಢಿ ಸಂಪ್ರದಾಯಗಳಿಂದಾಗಿ. ರಾಷ್ಟ್ರೀಯತೆ ಎಂದರೆ ನೆರೆಹೊರೆಯವರನ್ನು ಪ್ರೀತಿಸುವುದು ಮತ್ತು ಸ್ನೇಹಭಾವ-ಭ್ರಾತೃತ್ವ ತೋರುವುದು ಎಂಬುದೇ ಈ ಚಿತ್ರದ ಸಂದೇಶ. ನೆರೆಹೊರೆಯವರಲ್ಲಿ ಪ್ರೀತಿ, ಸ್ನೇಹ ಭಾವ ಎಂದರೆ ಒಂದೇ ಕುಟುಂಬದವರು ಎಂದೇ ಅರ್ಥ. ಇಂತಹ ಸ್ಪಂದನಶೀಲ ಜಾತ್ಯತೀತ ಸಮಾಜದಿಂದಾಗಿ ಭಾರತ ಇಂದಿಗೂ ಅಖಂಡವಾಗಿ ಉಳಿದಿದೆಯೇ ಹೊರತು ರಾಜಕೀಯ ಸಿದ್ಧಾಂತವೊಂದರ ಪ್ರಜ್ಞಾಪೂರ್ವಕ ನಂಬಿಕೆಯಿಂದಾಗಿಯಲ್ಲ ಎನ್ನುತ್ತಾರೆ ತ್ರಿಮೂರ್ತಿ ಲೇಖಕರಲ್ಲಿ ಒಬ್ಬರಾದ ಕ್ರಿಶ್ಚ್ಚಿಯನ್ ಲೀ ನೊವೆತ್ಸೇ.
ಈ ಪುಸ್ತಕದಲ್ಲಿ ಲೇಖಕತ್ರಯರು ಚರ್ಚಿಸಿರುವ ಸಾಂಕೇತಿಕತೆ ಬಗ್ಗೆ ಮನಮೋಹನ ದೇಸಾಯಿಯವರು ಯೋಚಿಸಿರಲಿಕ್ಕೇ ಇಲ,್ಲ ಇಂತಹ ಕಲಾತ್ಮಕತೆಯ ಸೋಗುಗಳು ಅವರಲ್ಲಿ ಇರಲಿಲ್ಲ. ಸಾಂಕೇತಿಕತೆ ಇತ್ಯಾದಿಗಳನ್ನು ಆರೋಪಿಸುವುದು ಸಾಮಾನ್ಯ ಚಿತ್ರವೊಂದಕ್ಕೆ ಸುವರ್ಣ ಚೌಕಟ್ಟನ್ನು ತೊಡಿಸಿದಂತೆ ಎಂಬುದು ಕೆಲವು ಭಾರತೀಯ ವಿಮರ್ಶಕರ ಪ್ರತಿಕ್ರಿಯೆ. ಇದಕ್ಕೆ ಲೇಖಕರಲ್ಲಿ ಒಬ್ಬರಾದ ವಿಲಿಯಮ ಎಲಿಸನ್ ಅವರ ಸಮಜಾಯಿಷಿ ಹೀಗಿದೆ: ‘ಅಮರ್ ಅಕ್ಬರ್ ಆಂತೋಣಿ’ ಮುಖ್ಯವಾಗಿ ಕುಟುಂಬ, ರಾಷ್ಟ್ರ, ಜಾತಿ-ಧರ್ಮ ಮತ್ತು ಆಧುನಿಕತೆಗಳನ್ನೊಳಗೊಂಡ ಸಾಮಾಜಿಕ ಕಲ್ಪನೆಯ ಚಿತ್ರ. ಈ ಮೂರೂ ಎಪ್ಪತ್ತರ ದಶಕದಲ್ಲಿ ಒಪ್ಪಿತ ವೌಲ್ಯಗಳಾಗಿದ್ದವು. ಏನೆಲ್ಲ ಹುಚ್ಚಾಟ, ಗಡಿಬಿಡಿಗಳಿದ್ದಾಗ್ಯೂ ಈ ವೌಲ್ಯಗಳಿಂದಾಗಿ ಚಿತ್ರ ಸಹಜವೆನಿಸುತ್ತದೆ, ಸಹನೀಯವಾಗುತ್ತದೆ. ಸಾಮಾಜಿಕ ವಿಮರ್ಶೆ ಎನ್ನುದಕ್ಕೂ ಮಿಗಿಲಾಗಿ ಮಾನವೀಯತೆಯ ಪರಮ ಆದರ್ಶವಾದ ಭ್ರಾತೃತ್ವದ ಮಹತ್ವವನ್ನು ಸಾರುವುದೇ ಚಿತ್ರದ ಮುಖ್ಯ ಸಂದೇಶವಾಗಿದೆ. ಚಿತ್ರದ ಪ್ರಚಂಡ ಯಶಸ್ಸಿಗೆ ಈ ಅಂಶಗಳೇ ಕಾರಣ. ಕ್ರಿಶ್ಚಿಯನ್ ಲೀ ನೊವೆತ್ಸಿಯವರ ಪ್ರಕಾರ, ನಿಷ್ಠಾವಂತ ಭಾರತೀಯರು ಯಾವುದೇ ಜಾತಿ ಧರ್ಮಗಳಿಗೆ ಸೇರಿದವರಾಗಿದ್ದರೂ ಕೆಲವೊಂದು ಒಪ್ಪಿತ ಸಾಂಸ್ಕೃತಿಕ ವೌಲ್ಯಗಳ ಸಮಾನಬಾಧ್ಯಸ್ಥರಾಗಿರುತ್ತಾರೆ ಎಂಬುದೇ ಚಿತ್ರದ ಸಂದೇಶ. ಆಖೈರಾಗಿ ಇಲ್ಲಿ ರಾಜಕೀಯ ಅಥವಾ ಪೌರತ್ವವಲ್ಲ, ನೈತಿಕತೆ ಮತ್ತು ಪ್ರಾಮಾಣಿಕತೆಗಳೇ ಮುಖ್ಯವಾಗುತ್ತದೆ. ಇಲ್ಲಿನ ಅರ್ಥ ವಿವರಣೆ, ವ್ಯಾಖ್ಯಾನಗಳನ್ನು ಒಪ್ಪುವುದು, ಬಿಡುವುದು ಬೇರೆ ಮಾತು. ಆದರೆ, ಸಹಿಷ್ಣುತೆ, ಸಾಮಾಜಿಕ ಸಾಮರಸ್ಯಗಳ ಪಾಲನೆ-ಪೋಷಣೆಯಲ್ಲಿ ಚಲನಚಿತ್ರ ಮಾಧ್ಯಮದ ಪಾತ್ರವನ್ನು ಮನಗಾಣಿಸುವ ಈ ಪುಸ್ತಕ, ಇವತ್ತಿನ ಸಂದರ್ಭದಲ್ಲಿ ಗಮನಿಸಲೇಬೇಕಾದ ಕೃತಿ ಎಂದು ಹೇಳಲು ಸಂತೋಷವಾಗುತ್ತದೆ.
ಭರತ ವಾಕ್ಯ
ವೆಂಕನಾಣಿಶೀನ
ಅಮರ್ ಅಕ್ಬರ್ ಅಂಟನಿ
ಕನವರಿಸ್ತಾರೆ:
ನಂಧರ್ಮನಂಧರ್ಮನಂಧರ್ಮ.
ಕಲೀರಯ್ಯ ಮೊದಲು,
ಮಾನವ ಧರ್ಮ.