ಆರ್ಮಿ ನಿಯಂತ್ರಣಕ್ಕೆ ಬಂತು ದಿಲ್ಲಿ ನೀರು ಪೂರೈಕೆ ವ್ಯವಸ್ಥೆ
ಹೊಸದಿಲ್ಲಿ, ಫೆ.22: ಹರ್ಯಾಣದಲ್ಲಿ ಜಾಟ್ ಸಮುದಾಯದ ಮೀಸಲಾತಿ ಹೋರಾಟದಿಂದಾಗಿ ಅಸ್ತವ್ಯಸ್ತಗೊಂಡಿದ್ದ ರಾಜಧಾನಿ ದಿಲ್ಲಿಯ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಸೈನಿಕರು ನಿಯಂತ್ರಣಕ್ಕೆ ತೆಗೆದುಕೊಂಡಿದ್ಧಾರೆ.
ರಾಜಧಾನಿಗೆ ನೀರು ಪೂರೈಕೆ ಮಾಡುವ ಹರ್ಯಾಣದ ಮುನಾಕ್ ಕೆನಾಲ್ ನ್ನು ಸೈನಿಕರು ಜಾಟ್ ಹೋರಾಟಗಾರರ ಹಿಡಿತದಿಂದ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ಉಂಟಾಗಿರುವ ನೀರಿನ ಕೃತಕ ಬರ ನಿವಾರಣೆಯಾಗುವ ವಿಶ್ವಾಸವನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.
ಯುಮುನಾ ನದಿಯಿಂದ ಮಾನುಕ್ ಕೆನಾಲ್ ಮೂಲಕ ರಾಜಧಾನಿಗೆ ಪ್ರತಿದಿನ 542 ಗ್ಯಾಲನ್ ನೀರು ಸರಬರಾಜಾಗುತ್ತಿದ್ದು, ಜಾಟ್ ಹೋರಾಟಗಾರರು ನೀರು ಪೂರೈಕೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದರು. ನೀರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸರಕಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಮುಂದಿನ 24 ಗಂಟೆಗಳ ಒಳಗಾಗಿ ನೀರು ಪೂರೈಕೆ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ದಿಲ್ಲಿ ಜಲ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ-ಚಂಢಿಗಡ ಹೈವೆಯನ್ನು ಜಾಟ್ ಸಮುದಾಯದ ಮೀಸಲಾತಿ ಹೋರಾಟಗಾರರು ಬಂದ್ ಮಾಡಿದ್ದರು. ರವಿವಾರ ರಾತ್ರಿ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.