×
Ad

I am Umar Khalid and I'm not a terrorist : ಕ್ಯಾಂಪಸ್ ಗೆ ಮರಳಿದ ವಿದ್ಯಾರ್ಥಿ ನಾಯಕನ ಹೇಳಿಕೆ

Update: 2016-02-22 12:10 IST

ಹೊಸದಿಲ್ಲಿ : ‘‘ನಾನು ಕಳೆದ ಏಳು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿದ್ದಾಗ ಯಾವತ್ತೂ ನಾನೊಬ್ಬ ಮುಸ್ಲಿಂ ಎಂಬ ಭಾವನೆ ನನಗೆ ಬಂದಿರಲೇ ಇಲ್ಲ. ಆದರೆ ಕಳೆದ ಹತ್ತು ದಿನಗಳಿಂದ ನಾನೊಬ್ಬ ಮುಸ್ಲಿಂ ಎಂದು ನನಗನಿಸುವಂತೆ ಮಾಡಲಾಗಿದೆ. ಹೌದು. ನಾನು ಉಮರ್ ಖಾಲಿದ್. ಆದರೆ ನಾನು ಉಗ್ರವಾದಿಯಲ್ಲ,’’ಜೆಎನ್‌ಯು ವಿವಾದ ಹುಟ್ಟಿಕೊಂಡಂದಿನಿಂದ ಕಾಣೆಯಾಗಿದ್ದ ಖಾಲಿದ್ ನಿನ್ನೆ ಮತ್ತೆ ಕ್ಯಾಂಪಸ್ಸಿನಲ್ಲಿ ಪ್ರತ್ಯಕ್ಷರಾದ ನಂತರ ಹೇಳಿದರು.

‘‘ ಫೆಬ್ರವರಿ 9ರಂದು ಆಯೋಜಿಸಲಾದ ಕಾರ್ಯಕ್ರಮದಿಂದಾಗಿಯೇ ಈ ದಾಳಿ (ವಿಶ್ವವಿದ್ಯಾನಿಲಯದ ಮೇಲೆ) ನಡೆದಿದೆಯೆಂದಲ್ಲ, ಸರಕಾರಕ್ಕೆ ನಮ್ಮ ಮೇಲೆ ದಾಳಿ ನಡೆಸಲು ಒಂದು ನೆಪ ಬೇಕಿತ್ತಷ್ಟೇ,’’ಎಂದು ವಿಶ್ವವಿದ್ಯಾನಿಲಯದ ಆಡಳಿತ ಬ್ಲಾಕ್ ಎದುರು ವಿದ್ಯಾರ್ಥಿಗಳನ್ನುದ್ದೇಶಿಸಿ ಖಾಲಿದ್ ಹೇಳಿದರು.


‘‘ಕನ್ಹಯ್ಯ ಕುಮಾರ್ ಕೋ ರಿಹಾ ಕರೋ", ‘‘ಸೆಡಿಶನ್ ಚಾರ್ಜಸ್ ವಾಪಸ್ ಕರೋ", ‘‘ಲಾಂಗ್ ಲಿವ್ ಜೆಎನ್‌ಯು’’, ಮುಂತಾದ ಘೋಷಣೆಗಳು ಮೊಳಗಿದವು.
‘‘ಇಲ್ಲಿಯವರೆಗೆ ಮಾಧ್ಯಮ ನನ್ನ ಬಗ್ಗೆ ಸಾಕಷ್ಟು ಹೇಳಿದೆ. ಈ ಮಾಧ್ಯಮ ವಿಚಾರಣೆ, ಅಪಪ್ರಚಾರ ಎಲ್ಲ ಕಾರಣಗಳಿಂದಲೂ ನನ್ನ ಕುಟುಂಬ ಏನನ್ನು ಅನುಭವಿಸುತ್ತಿದೆಯೆಂದು ನನಗೆ ಗೊತ್ತು," ಎಂದು ಖಾಲಿದ್ ಹೇಳಿದರು.


ಕಾರ್ಯಕ್ರಮ ಆಯೋಜಿಸುವ ಮೊದಲು ತಾನು ಗಲ್ಫ್ ರಾಷ್ಟ್ರಗಳಿಗೆ ಅಥವಾ ಕಾಶ್ಮೀರಕ್ಕೆ 800 ಕರೆಗಳನ್ನು ಮಾಡಿದ್ದೇನೆಂಬ ಆಪಾದನೆಗಳನ್ನೂ ಅವರು ನಿರಾಕರಿಸಿದರು.
‘‘ನಮ್ಮ ಸ್ನೇಹಿತರು ವಾಪಸ್ಸಾಗಿರುವುದು ನಮಗೆ ಸಂತಸ ತಂದಿದೆ,’’ಎಂದು ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕಿ ಶೆಹಲಾ ರಶೀದ್ ಶೋರಾ ಹೇಳಿದರು.

ಪೊಲೀಸರು ಕ್ಯಾಂಪಸ್ಸಿಗೆ ಬಂದರೆ, ‘ವಿದ್ಯಾರ್ಥಿ ಕಾರ್ಯಕರ್ತರು’ ಶರಣಾಗತರಾಗಲಿದ್ದಾರೆ ಎಂದೂ ಅವರು ತಿಳಿಸಿದರು. ಪೊಲೀಸರು ಕ್ಯಾಂಪಸ್ಸಿನಲ್ಲಿ ಎಲ್ಲಿಯೂ ಕಾಣದಿದ್ದರೂ ಅವರು ‘ಸಾಮಾನ್ಯ ಉಡುಪಿನಲ್ಲಿ ತಿರುಗಾಡುತ್ತಿದ್ದಾರೆ,’’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News