ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಬದಲಾದ ತಂತ್ರಗಳಿಂದ ಸಾವುನೋವು ಹೆಚ್ಚಳ?
ನವದೆಹಲಿ,ಫೆ.23: ಪ್ಯಾಂಪೋರ್‌ನ ಸರಕಾರಿ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇಬ್ಬರು ಪ್ಯಾರ ಕಮಾಂಡೋ ಅಧಿಕಾರಿಗಳೂ ಸೇರಿದಂತೆ ಐದು ಯೋಧರು ಸಾವನ್ನಪ್ಪಿದ್ದಾರೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ನಮ್ಮ ರಕ್ಷಣಾ ಪಡೆಗಳು ಅನುಸರಿಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ ಹೊಸ ತಂತ್ರಗಳ ಬಗ್ಗೆ ಹಲವಾರು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಕಾದು ನೋಡುವ ತಂತ್ರದ ಬದಲು ಕ್ಷಿಪ್ರ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದರಿಂದ ಸಾವುನೋವುಗಳು ಹೆಚ್ಚಾಗುತ್ತಿವೆಯೆಂಬ ಭಾವನೆ ಸೇನೆಯ ಕೆಲವರಲ್ಲಿದೆ.
‘‘ಕಾರ್ಯಾಚರಣೆಯನ್ನು ಕನಿಷ್ಠ ಸಮಯದಲ್ಲಿ ಮುಗಿಸಲು ಮೇಲಿನಿಂದ ಒತ್ತಡವಿದ್ದಿರಬಹುದು. ಆದರೆ ಪ್ಯಾಂಪೋರಿನಲ್ಲಿ ಉಗ್ರರು ಕಟ್ಟಡವೊಂದರಲ್ಲಿದ್ದರು ಹಾಗೂ ಅವರು ಓಡಿ ಹೋಗುವ ಸಾಧ್ಯತೆಗಳಿರಲಿಲ್ಲ. ಆದುದರಿಂದ ಅವರನ್ನು ನಾವು ಹೇಗಾದರೂ ಸಾಯಿಸುತ್ತೇವೆಂದು ಗೊತ್ತಿದ್ದೂ ಪ್ಯಾರ ಕಮಾಂಡೋಗಳನ್ನು ಅಲ್ಲಿಗೆ ಅವಸವಸರವಾಗಿ ಕಳುಹಿಸಿದ್ದೇಕೆ?’’ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಬಾರಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡುಗಳಿಗೆ ಇಬ್ಬರು ಕರ್ನಲ್‌ಗಳು ಹತರಾದ ನಂತರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಸಾವು ನೋವುಗಳು ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬೇಕೆಂದು ಸೇನೆಗೆ ಹೇಳಿದ್ದರು.
ಇತ್ತೀಚೆಗೆ ಉಗ್ರರು ಎಲ್ಲಿ ಹೆಚ್ಚಿನ ಸಾವುನೋವುಗಳಾಗಬಹುದೋ ಅಂತಹ ಸ್ಥಳಗಳನ್ನು ತಮ್ಮ ದಾಳಿಗೆ ಆಯ್ದುಕೊಳ್ಳುವುದರಿಂದ ಸಾವುನೋವಿನ ಪ್ರಮಾಣ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಯಾಚರಣೆ ತುಂಬಾ ಹೊತ್ತು ಸಾಗಿದಾಗ ಸಹಜವಾಗಿ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಯಾಗುವುದು ಅವರಿಗೆ ಬೇಕಾಗಿದೆ, ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
‘‘ನಾವು ಒಂದು ಕಟ್ಟಡವನ್ನು ಸ್ಫೋಟಿಸಿ ಉಗ್ರರನ್ನು ಸುಲಭವಾಗಿ ಸಾಯಿಸಬಹುದು. ಅದರೆ ಅದರಿಂದ ಅಕ್ಕಪಕ್ಕದಲ್ಲಿ ಕೂಡ ಸಂಭವಿಸಬಹುದಾದ ಹಾನಿಯ ಬಗ್ಗೆ ಏನಂತೀರಿ? ಆದುದರಿಂದ ಸೂಕ್ಷ್ಮವಾಗಿ ಸಮತೋಲನ ಸಾಧಿಸಿ ನಾಗರಿಕರನ್ನು ರಕ್ಷಿಸಲು ನಾವು ಸಾವುನೋವುಗಳನ್ನು ಅನುಭವಿಸಲು ಸಿದ್ಧರಿದ್ದೇವೆ,’’ ಎಂದು ಮಾಜಿ ಸೇನಾ ಕಮಾಂಡರ್ ಲೆ.ಜ. ಬಿ ಎಸ್ ಜಸ್ವಾಲ್ ತಿಳಿಸಿದ್ದಾರೆ.
ಸೇನೆ ಹಾಗೂ ಉಗ್ರರ ನಡುವಿನ ಕಾರ್ಯಾಚರಣೆಯಲ್ಲಿ ಸಾಮಾನ್ಯವಾಗಿ 1 : 10 ಅನುಪಾತದಲ್ಲಿ ಸಾವುನೋವು ಸಂಭವಿಸಬಹದು ಎಂದು ಹೇಳಲಾಗಿದ್ದರೂ, ಮೂರು ದಿನಗಳ ಪ್ಯಾಂಪೋರ್ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದರೆ, ಮೂವರು ಸೇನಾ ಸಿಬ್ಬಂದಿ ಹಾಗೂ ಇಬ್ಬರು ಸಿಆರ್‌ಪಿಎಫ್ ಜವಾನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಿನ ಪಠಾಣ್‌ಕೋಟ್ ದಾಳಿಯಲ್ಲಿ ಎನ್‌ಎಸ್‌ಜಿಯ ಲೆ. ಕ. ನಿರಂಜನ್ ಕುಮಾರ್ ಸೇರಿದಂತೆ ಏಳು ಸುರಕ್ಷಾ ಸಿಬ್ಬಂದಿ ಸಾವನ್ನಪ್ಪಿದ್ದರೆ ಐದು ಮಂದಿ ಉಗ್ರರು ಹತರಾಗಿದ್ದರು.
ಪ್ಯಾಂಪೋರಿನಲ್ಲಿ ಉಗ್ರರು ದಾಳಿ ನಡೆಸಿದ್ದ ಕಟ್ಟಡದಲ್ಲಿದ್ದ ನಾಗರಿಕರನ್ನು ಸುರಕ್ಷಿತವಾಗಿ ಹೊರ ಕಳುಹಿಸುವ ಜವಾಬ್ದಾರಿ ಸೇನೆಯ ಮೇಲಿತ್ತು. ಜಂಟಿ ಕಾರ್ಯಾಚರಣೆಯಲ್ಲಿ ನಾವು 120 ನಾಗರಿಕರನ್ನು ಗುಂಡು ನಿರೋಧಕ ವಾಹನಗಳಲ್ಲಿ ಹೊರಕ್ಕೆ ಕರೆದುಕೊಂಡು ಹೋದೆವು,’’ಎಂದು ಮೇಜರ್ ಜನರಲ್ ಅರವಿಂದ್ ದತ್ತಾ ಹೇಳಿದ್ದಾರೆ. ಸ್ಥಳೀಯ ಪತ್ರಿಕೆ ಗ್ರೇಟರ್ ಕಾಶ್ಮೀರದಲ್ಲಿನ ವರದಿಯೊಂದರಂತೆ ಉಗ್ರರು ತಮ್ಮನ್ನು ಹೊರ ಹೋಗಲು ಅನುವು ಮಾಡಿ ಕೊಟ್ಟರು ಎಂದು ಹೆಸರು ಹೇಳಲಿಚ್ಛಿಸದ ಕೆಲವು ಉದ್ಯೋಗಿಗಳು ಹೇಳಿದ್ದಾರೆ.