ಸಲ್ಮಾನ್ ಹತ್ಯೆ ಮಾಡುವುದಾಗಿ ಮುಂಬೈ ಪೊಲೀಸರಿಗೆ ಅನಾಮಿಕ ಕರೆ ; ತನಿಖೆ ಆರಂಭ

Update: 2016-02-23 06:06 GMT

ಮುಂಬೈ,ಫೆ.23: ನಗರದ ಪೊಲೀಸ್ ಕಂಟ್ರೋಲ್ ರೂಂಗೆ ಇತ್ತೀಚೆಗೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ತಾನು ಬಾಲಿವುಡ್ ನಟ ಸಲ್ಮಾನ್ ಖಾನ್‌ನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬೆದರಿಕೆ ಕರೆ ಫೆಬ್ರವರಿ 16ರಂದು ಬಂದಿತ್ತೆಂದು ತಿಳಿಯಲಾಗಿದ್ದು ಇದೊಂದು ಸುಳ್ಳು ಬೆದರಿಕೆಯೆಂದು ಪೊಲೀಸರು ಶಂಕಿಸಿದ್ದಾರೆ. ಯಾವುದೇ ದೂರು ದಾಖಲಾಗದಿದ್ದರೂ ಪೊಲೀಸರು ಸ್ವಯಂ ಪ್ರೇರಣೆಯಿಂದ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕರೆ ಮಾಡಲಾದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆನ್ನಲಾಗಿದ್ದು, 50 ವರ್ಷದ ನಟನಿಗೆ ಒದಗಿಸಲಾದ ಭದ್ರತೆಯನ್ನು ಪುನರ್‌ಪರಿಶೀಲಿಸಲು ನಿರ್ಧರಿಸಲಾಗಿದೆ.

ಭಜರಂಗಿ ಭಾಯಿಜಾನ್ ಹಾಗೂ ಪ್ರೇಮ್ ರತನ್ ಪಾಯೋದಂತಹ ಹಿಟ್ ಚಿತ್ರಗಳನ್ನು ಇತ್ತೀಚೆಗೆ ನೀಡಿರುವ ಸಲ್ಮಾನ್ ಪ್ರಸಕ್ತ ತಾವು ಹಾಗೂ ಅನುಷ್ಕಾ ಶರ್ಮ ಮುಖ್ಯ ಭೂಮಿಕೆಯಲ್ಲಿರುವ ಕುಸ್ತಿ ಪಟುವೊಬ್ಬನ ಜೀವನಕಥೆಯಾಧರಿತ ಚಿತ್ರ ‘ಸುಲ್ತಾನ್’ ನಿರ್ಮಾಣದಲ್ಲಿ ವ್ಯಸ್ತರಾಗಿದ್ದಾರೆ. ಈ ಬೆದರಿಕೆ ಕರೆ ಬಗ್ಗೆ ಸಲ್ಮಾನ್ ಕುಟುಂಬ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತರುವಾಯ 2002ರ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಸಲ್ಮಾನ್‌ರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿರುವ ಅಪೀಲಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಲ್ಮಾನ್‌ಗೆ ಫೆ. 19ರಂದ ನೊಟೀಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News