ದತ್ತ್ ಬಿಡುಗಡೆ ಹಿನ್ನೆಲೆ ಅಭಿಮಾನಿಗಳಿಗೆ ‘ಚಿಕನ್ ಸಂಜು ಬಾಬಾ’ ಖಾದ್ಯ ಕೊಡುಗೆ
ಮುಂಬೈ,ಫೆ.23: ಫೆಬ್ರವರಿ 25ರಂದು ಬಾಲಿವುಡ್ ನಟ ಸಂಜಯ್ ದತ್ತ್ 1994ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸನ್ನಡತೆಯ ಆಧಾರದಲ್ಲಿ ತಮ್ಮ ಐದು ವರ್ಷದ ಜೈಲು ಶಿಕ್ಷೆ ಪೂರ್ಣಗೊಳ್ಳುವ ಆರು ತಿಂಗಳು ಮೊದಲೇ ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಗೊಳ್ಳುವಾಗ ದಕ್ಷಿಣ ಮುಂಬೈನ ನೂರ್ ಮುಹಮ್ಮದಿ ಹೊಟೇಲ್ ಸಂಜು ಬಾಬಾ ಅವರ ಅಭಿಮಾನಿಗಳಿಗೊಂದು ವಿಶೇಷ ಕೊಡುಗೆ ನೀಡಲಿದೆ. ಅದೇ ಸಂಜಯ್ ದತ್ತ್ ಅವರ ಸಿಗ್ನೇಚರ್ ಖಾದ್ಯ ‘ಚಿಕನ್ ಸಂಜು ಬಾಬಾ.’ ಫೆಬ್ರವರಿ 25ರಂದು ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಈ ಹೊಟೇಲ್‌ಗೆ ಆಗಮಿಸುವ ಸಂಜಯ್ ದತ್ತ್ ಅಭಿಮಾನಿಗಳಿಗೆ ಹೊಟೇಲ್ ಈ ಖಾದ್ಯವನ್ನು ಉಚಿತವಾಗಿ ಉಣಬಡಿಸುವುದು ಎಂದು ಅದರ ಮಾಲಕ ಖಾಲಿದ್ ಹಕೀಂ ಹೆಮ್ಮೆಯಿಂದ ಹೇಳುತ್ತಾರೆ.
ಈ ವಿಶೇಷ ಖಾದ್ಯವು ಪರಿಚಯಿಸಿದವರು ಸಂಜಯ್ ದತ್ತ್ ಅವರೇ ಆಗಿದ್ದು ಅವರು ಈ ಹೊಟೇಲ್‌ಗೆ ಆಗಾಗ ಭೇಟಿ ನೀಡುತ್ತಿರುತ್ತಿದ್ದರು ಎಂದು ಹಕೀಂ ನೆನಪಿಸಿಕೊಳ್ಳುತ್ತಾರೆ.
ನಮ್ಮ ಹೊಟೇಲಿನ್ ಫ್ಯಾಮಿಲಿ ಸೆಕ್ಷನನ್ನು ಸಂಜಯ್ ದತ್ತ್ ಸಾಬ್ 19686ರಲ್ಲಿ ಉದ್ಘಾಟಿಸಿದ್ದರು. ಅಂದಿನಿಂದ ಅವರು ಇಲ್ಲಿಗೆ ಯಾವತ್ತೂ ಬಂದು ನಮ್ಮ ವಿಶೇಷ ಮಾಂಸಾಹಾರಿ ಖಾದ್ಯಗಳನ್ನು ಆರ್ಡರ್ ಮಾಡುತ್ತಾರೆ, ಎಂದು ಹಕೀಂ ವಿವರಿಸುತ್ತಾರೆ.
‘‘ನಮ್ಮ ಹೊಟೇಲಿನ ವೈಟ್ ಚಿಕನ್ ಬಿರಿಯಾನಿ, ಚಿಕನ್ ಹಕೀಮಿ, ದಾಲ್ ಘೀ, ಶಮೀ ಕಬಾಬ್, ತಿರಂಗಾ ಕಬಾಬ್ ಸಂಜಯ್ ದತ್ತ್ ಅವರಿಗೆ ಬಹಳ ಇಷ್ಟ. 2010ರಲ್ಲಿ ಅವರು ಒಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ಈ ವಿಶೇಷ ಚಿಕನ್ ಖಾದ್ಯವನ್ನು ತಯಾರಿಸಿದ್ದರು, ನಾವು ಅದನ್ನು ‘ಚಿಕನ್ ಸಂಜು ಬಾಬಾ’ ಎಂದು ಹೆಸರಿಸಿ ನಮ್ಮ ಮೆನುವಿನಲ್ಲಿ ಸೇರಿಸಿದೆವು. ಅಂದಿನಿಂದ ಇಂದಿನವರೆಗೆ ನಮ್ಮ ಹೋಟೆಲಿನ ಜನಪ್ರಿಯ ಖಾದ್ಯಗಳಲ್ಲಿ ಅದು ಒಂದಾಗಿದೆ,"ಎಂದು ಹೇಳಿದ ಹಕೀಂ ಒಮ್ಮೆ ದತ್ತ್ ಅವರು ತಮ್ಮ ಈ ಖಾದ್ಯದ ಬಗ್ಗೆ ಟಿವಿ ಸಂದರ್ಶನವೊಂದರಲ್ಲೂ ಹೇಳಿದ್ದರೆಂದು ನೆನಪಿಸಿದ್ದಾರೆ.