5 ರೂಪಾಯಿ ಸಾಲ ಪಡೆದ ಬಿಹಾರದ ಸಿಎಂ ನಿತೀಶ್ ಕುಮಾರ್!
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಮಾನ್ಯವಾಗಿ ಮನೆಯಿಂದ ಕಚೇರಿಗೆ ತೆರಳುವಾಗ ಖಾಲಿ ಜೇಬಿನಲ್ಲೇ ತೆರಳುತ್ತಾರೆ. ಅಗತ್ಯ ಬಿದ್ದಾಗ ಬೇರೆಯವರಿಂದ ಹಣ ಪಡೆಯುತ್ತಾರೆ.
ಬುಧವಾರ ಇಂಥದ್ದೇ ಘಟನೆ ನಡೆಯಿತು. ಪಾಟ್ನಾದಲ್ಲಿ ಹೊಸ ನಗರ ಸಾರಿಗೆ ಬಸ್ಸುಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ನಿತೀಶ್ ಕುಮಾರ್ ಬಸ್ಸಿನ ಆಂತರಿಕ ವಿನ್ಯಾಸವನ್ನು ವೀಕ್ಷಿಸಲು ಒಳಕ್ಕೆ ಹೋದರು. ಚಲಿಸುತ್ತಿದ್ದ ಬಸ್ಸಿನಲ್ಲಿ ಸೀಟು ಹಿಡಿದು ಕುಳಿತರು. ತಕ್ಷಣ ಎದುರಾದ ನಿರ್ವಾಹಕಿ ಗಾಂಧಿ ಮೈದಾನದಿಂದ ಪಾಟ್ನಾ ನಿಲ್ದಾಣದ ಪ್ರಯಾಣದರವಾದ 5 ರೂಪಾಯಿಯ ಟಿಕೆಟ್ ನೀಡಿದರು.
ಜೇಬಿನಲ್ಲಿ ಹಣಕ್ಕಾಗಿ ಕುಮಾರ್ ತಡಕಾಡಿದರು. ಆದರೆ ಖಾಲಿ ಜೇಬಿನಲ್ಲಿ ಏನೂ ಇಲ್ಲ ಎನ್ನುವುದು ತಿಳಿಯಿತು. ಅವರ ಜತೆಯೇ ಪ್ರಯಾಣಿಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ನೆರವಿಗೆ ಬಂದರು. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದಶಿ ಅಮೃತ್‌ಲಾಲ್ ಮೀನಾ, ಮುಖ್ಯಮಂತ್ರಿಗೆ 5 ರೂಪಾಯಿ ಸಾಲ ನೀಡಿದ ಖ್ಯಾತಿಗೆ ಪಾತ್ರರಾದರು. ಈ ಸ್ವಾರಸ್ಯಕರ ಘಟನೆಯನ್ನು ಸಿಎಂ ತಮ್ಮ ಭಾಷಣದಲ್ಲಿ ಬಹಿರಂಗಪಡಿಸಿದರು. ವಿದ್ಯಾರ್ಥಿ ಸಂಘದ ಹಿನ್ನೆಲೆಯಿಂದ ಬಂದ ನಿತೀಶ್ ಹೀಗೆ ಜೇಬು ತಡಕಾಡಿದ್ದು ಇದೇ ಮೊದಲಲ್ಲ. ಕೆಲ ವರ್ಷಗಳ ಹಿಂದೆ ಪಕ್ಷದ ಸದಸ್ಯತ್ವ ಹಣವನ್ನು ನೀಡುವ ಸಂದರ್ಭದಲ್ಲೂ ಇಂಥದ್ದೇ ಪರಿಸ್ಥಿತಿ ಬಂದಾಗ, ವಕ್ತಾರ ಸಂಜಯ ಸಿಂಗ್ ನೇತಾರನ ನೆರವಿಗೆ ಬಂದಿದ್ದರು. ಎರಡು ಬಾರಿ ಚುನಾವಣೆಯಲ್ಲಿ ಸೋತ ಬಳಿಕ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಚುನಾವಣಾ ವೆಚ್ಚಕ್ಕಾಗಿ ಪತ್ನಿಯ ಉಳಿತಾಯದ ಒಂದು ಭಾಗವನ್ನು ನೀಡುವಂತೆ ಕೈಚಾಚಿದ್ದರು.
ಸಾರಿಗೆ ಇಲಾಖೆ ಮಹಿಳಾ ವಿಶೇಷ ಬಸ್ಸುಗಳನ್ನು ಆರಂಭಿಸಿದ್ದು, ಇದರಲ್ಲಿ ಮಹಿಳಾ ನಿರ್ವಾಹಕರು ಮಾತ್ರವಲ್ಲದೇ ಮಹಿಳಾ ಚಾಲಕಿಯರೂ ಇರುತ್ತಾರೆ ಎಂದು ಪ್ರಕಟಿಸಿದರು. ಮೊದಲ ಬಾರಿ ಶಾಸಕನಾದಾಗ ವಿಧಾನಸಭೆಗೆ ಬಸ್ಸು ಚಾಲನೆ ಮಾಡಿಕೊಂಡು ಬರುತ್ತಿದ್ದುದನ್ನೂ ನೆನಪಿಸಿಕೊಂಡರು.