ಜೆಎನ್‌ಯು ಕಾರ್ಯಕ್ರಮಕ್ಕೆ ವಿದೇಶಿ ನಿಧಿ ಬಳಕೆಯಾಗಿಲ್ಲ : ದೆಹಲಿ ಪೊಲೀಸರು
ನವದೆಹಲಿ : ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಫೆಬ್ರವರಿ 9ರಂದು ದೇಶ-ವಿರೋಧಿ ಘೋಷಣೆ ಕೂಗಲಾಗಿದೆಯೆನ್ನಲಾದ ವಿವಾದಾಸ್ಪದ ಕಾರ್ಯಕ್ರಮವನ್ನು ವಿದೇಶಿ ನಿಧಿಯನ್ನು ಬಳಸಿ ಆಯೋಜಿಸಲಾಗಿಲ್ಲವೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೇಶದ್ರೋಹದ ಆರೋಪ ಹೊತ್ತು ಮಂಗಳವಾರ ರಾತ್ರಿ ಶರಣಾಗತರಾದ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯರನ್ನುಬುಧವಾರ ಪ್ರತ್ಯೇಕವಾಗಿ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಪೊಲೀಸರು ಮೇಲಿನ ತೀರ್ಮಾನಕ್ಕೆ ಬಂದಿದ್ದಾರೆ. ಅವರಿಬ್ಬರ ವಿಚಾರಣೆಯನ್ನು ಎರಡು ಹಂತಗಳಲ್ಲಿ ಕ್ಯಾಮರಾ ಎದುರುಗಡೆ ನಡೆಸಲಾಗಿದ್ದು ನಂತರ ಮ್ಯಾಜಿಸ್ಟ್ರೇಟರೊಬ್ಬರನ್ನು ಆರ್‌ಕೆ ಪುರಂ ಪೊಲೀಸ್ ಠಾಣೆಗೆ ಕರೆಸಿ ಇಬ್ಬರನ್ನೂ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ವಿಚಾರಣೆ ವೇಳೆ ಇಬ್ಬರು ಎಸಿಪಿಗಳು, ಮೂವರು ಇನ್‌ಸ್ಪೆಕ್ಟರುಗಳು ಸೇರಿದಂತೆ 10 ಮಂದಿ ಅಧಿಕಾರಿಗಳು ಹಾಜರಿದ್ದರು. ಖಾಲಿದ್ ವಿಚಾರಣೆ ವೇಳೆ ಪೊಲೀಸರೊಂದಿಗೆ ಸಹಕರಿಸಿದ್ದಾನೆಂದು ಹೇಳಲಾಗಿದ್ದು ಅನಿರ್ಬನ್ ಮಾತ್ರ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದೆ ಮೌನ ವಹಿಸಿದ್ದನೆಂದು ತಿಳಿದು ಬಂದಿದೆ. ಅಫ್ಜಲ್ ಗುರು ಸ್ಮರಣಾರ್ಥವಾಗಿ ಕ್ಯಾಂಪಸ್ಸಿನಲ್ಲಿ ಕಾರ್ಯಕ್ರಮ ಆಯೋಜನೆ ತನ್ನ ಐಡಿಯಾ ಆಗಿತ್ತು ಎಂದು ಖಾಲಿದ್ ಪೊಲೀಸರಿಗೆತಿಳಿಸಿದ್ದನೆನ್ನಲಾಗಿದ್ದು ಅರ್ನಿಬನ್ ಕಾರ್ಯಕ್ರಮಕ್ಕೆ ಪೋಸ್ಟರುಗಳನ್ನು ಸಿದ್ಧಪಡಿಸಿದ್ದರೆ, ಇನ್ನಷ್ಟೇ ಶರಣಾಗತನಾಗಬೇಕಾದ ಇನ್ನೊಬ್ಬ ವಿದ್ಯಾರ್ಥಿ ರಿಯಾಜ್ ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಿದ್ದ ಹಾಗೂ ಸಾಮಾಜಿಕ ತಾಣದಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದ. ‘‘ವಿಚಾರಣೆ ವೇಳೆ ಬಂಜ್ಯೋತ್ಸನ ಲಹಿರಿಯೆಂಬವ ಈ ಕಾರ್ಯಕ್ರಮದ ಸಹ-ಆಯೋಜಕನಾಗಿದ್ದಾನೆ ಎಂದು ಖಾಲಿದ್ ಹೇಳಿದ್ದಾನೆ. ಇವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ,’’ಎಂದು ಪೊಲೀಸರು ತಿಳಿಸಿದ್ದಾರೆ.
ದೇಶ ವಿರೋಧಿ ಘೊಷಣೆಗಳನ್ನು ಹೊರಗಿನವರು ಕೂಗಿದ್ದರೆಂದು ಇಬ್ಬರು ವಿದ್ಯಾರ್ಥಿಗಳೂ ಹೇಳಿದ್ದಾರೆ.ಫೆಬ್ರವರಿ 12 ಹಾಗೂ 21ರ ಮಧ್ಯೆ ಅವರೆಲ್ಲಿದ್ದರು, ಯಾರು ಅವರಿಗೆ ಸಹಾಯ ಮಾಡಿದ್ದರು, ಅವರೇಕೆ ದೇಶವಿರೋಧಿ ಘೋಷಣೆ ಕೂಗಿದ್ದರು ಹಾಗೂ ಅವರನ್ನು ಈ ನಿಟ್ಟಿನಲ್ಲಿ ಯಾರಾದರೂ ಪ್ರೇರೇಪಿಸಿದ್ದರೇ ಎಂದು ಪೊಲೀಸರು ಅವರನ್ನು ಪ್ರಶ್ನಿಸಿದ್ದರು, ಎಂದು ಮೂಲಗಳು ತಿಳಿಸಿವೆ.