ಸಂಜಯ್ ದತ್ತ್ ಬಿಡುಗಡೆ
ಮುಂಬೈ, ಫೆ.25: ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಯನ್ನು ಪೂರೈಸಿರುವ ನಟ ಸಂಜಯ್ ದತ್ತ್ ಇಂದು ಕಾರಾಗೃಹದಿಂದ ಹೊರ ನಡೆದಿದ್ದಾರೆ.
ಹೊರ ಬರುತ್ತಲೇ ಅವರು ಭೂಮಿಗೆ ಮುತ್ತಿಕ್ಕಿ, ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದರು.
ತಾನು 23 ವರ್ಷಗಳಿಂದ ಆಝಾದಿಯ(ಸ್ವಾತಂತ್ರದ) ಈ ದಿನಕ್ಕಾಗಿ ಕಾದಿದ್ದೆನು. ತಾನು ಭಯೋತ್ಪಾದಕನಲ್ಲ. ತಾನು ಶಸ್ತ್ರಾಸ್ತ್ರ ಕಾಯ್ದೆಯನ್ವಯ ಕಾರಾಗೃಹದಲ್ಲಿದ್ದೆ. ತನ್ನನ್ನು 1993ರ ಮುಂಬೈ ಸ್ಫೋಟ ಪ್ರಕರಣದ ಅಪರಾಧಿಯೆನ್ನ ಬೇಡಿರೆಂದು ತಾನು ವಿನಂತಿಸಿಕೊಳ್ಳುತ್ತಿದ್ದೇನೆಂದು ದತ್ತ್ ಆ ಬಳಿಕ ತನ್ನ ಮನೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಬೆಳಗ್ಗೆೆ 8:45ರ ವೇಳೆ ದೊಡ್ಡ ಚೀಲವೊಂದನ್ನು ಹೆಗಲೇರಿಸಿ, ಯೆರವಾಡ ಬಂಧಿಖಾನೆಯಿಂದ ಹೊರ ಬಂದ ಅವರು, ಪತ್ನಿ ಮಾನ್ಯತಾ, ಅವಳಿ ಮಕ್ಕಳಾದ ಇಕ್ರಾ ಹಾಗೂ ಶಹ್ರಾನ್ ಮತ್ತು ಚಿತ್ರ ನಿರ್ಮಾಪಕ ಮಿತ್ರ ರಾಜಕುಮಾರ್ ಹಿರಾನಿಯವರ ಬಳಿಗೆ ನಡೆದರು.
ಜೈಲಿನಲ್ಲಿ ಪೇಪರ್ ಬ್ಯಾಗ್ ತಯಾರಿಸಿ ತಾನು ಸಂಪಾದಿಸಿದ್ದ ರೂ.440ನ್ನು ದತ್ತ್, ಪತ್ನಿ ಮಾನ್ಯಾತಾರ ಕೈಗೆ ನೀಡಿದರು.
ಬಿಳಿ ಯಸ್‌ಯುವಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ಅವರು, ವಿಶೇಷ ವಿಮಾನವೊಂದರಲ್ಲಿ ಮನೆಗೆ ಪ್ರಯಾಣಿಸಿದರು.
ಸ್ವಾತಂತ್ರದೆಡೆಗೆ ನಡಿಗೆ ಸುಲಭವಲ್ಲ ಮಿತ್ರರೇ ಎಂದು ದತ್ತ್, ಮುಗುಳ್ನಗುತ್ತ ಪುಣೆ ವಿಮಾನ ನಿಲ್ದಾಣದಲ್ಲಿದ್ದ ಪತ್ರಕರ್ತರೊಡನೆ ಹೇಳಿದರು.
ಮುಂಬೈ ತಲುಪಿದೊಡನೆಯೇ ನೇರವಾಗಿ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋದ ಅವರು ಪ್ರಾರ್ಥನೆ ಸಲ್ಲಿಸಿದರು. ಮರಿನ್ ಲೈನ್ಸ್‌ನಲ್ಲಿರುವ ತಾಯಿ ನರ್ಗಿಸ್ ದತ್ತ್‌ರ ಸಮಾಧಿಯ ಬಳಿಗೆ ತೆರಳಿದ ದತ್ತ್, ಅಲ್ಲಿಂದ ನೇರವಾಗಿ ತನ್ನ ಪಾಲಿಹಿಲ್‌ನ ನಿವಾಸಕ್ಕೆ ಹೋದರು.