ಫಿಜಿ: ಚಂಡಮಾರುತದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂಚನೆ
ವೆಲ್ಲಿಂಗ್ಟನ್, ಫೆ.25: ಭೀಕರ ಚಂಡಮಾರುತದಿಂದ ಫಿಜಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮೃತಪಟ್ಟ ಮಂದಿಯ ಅಟಾಪ್ಸಿಗಳಿಗೆ ಕಾಯದೆ ಶವಗಳನ್ನು ತಕ್ಷಣ ಅಂತ್ಯಸಂಸ್ಕಾರ ಮಾಡುವಂತೆ ಸರಕಾರ ಜನತೆಗೆ ಸೂಚಿಸಿದೆ.
ಹಲವು ಒಳ ದ್ವೀಪಗಳು ಸಂಪರ್ಕ ಫಿಜಿ: ಚಂಡಮಾರುತದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂಚನೆ ಕಡಿದುಕೊಂಡಿದ್ದು, ಇಂಥ ಪ್ರದೇಶಗಳಲ್ಲಿ ಇಂದಿಗೂ ವಿದ್ಯುತ್ ಅಥವಾ ಶೀತಲೀಕರಣ ವ್ಯವಸ್ಥೆ ಇಲ್ಲ. ಆದ್ದರಿಂದ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಶವಗಳನ್ನು ಆದಷ್ಟು ಬೇಗ ಮಣ್ಣುಮಾಡುವಂತೆ ಸೂಚಿಸುತ್ತಿದ್ಧೇವೆ ಎಂದು ಸರಕಾರದ ವಕ್ತಾರ ಇವಾನ್ ಪೆರಿನ್ ಹೇಳಿದರು.
ಭೀಕರ ಚಂಡಮಾರುತ ಅಪ್ಪಳಿಸಿದ್ದರಿಂದ ಮೃತಪಟ್ಟವರ ಸಂಖ್ಯೆ 42 ಎಂದು ಅಂದಾಜು ಮಾಡಲಾಗಿದ್ದು, ಇನ್ನೂ ಕನಿಷ್ಠ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ. ಕಳೆದ ವಾರಾಂತ್ಯದಲ್ಲಿ ಫೆಸಿಫಿಕ್ ದ್ವೀಪ ಸರಣಿಯ ಮೇಲೆ ಗಂಟೆಗೆ 285 ಕಿಲೋಮೀಟರ್ ವೇಗದ ಚಂಡಮಾರುತ ಅಪ್ಪಳಿಸಿತ್ತು. ಇದು ಫಿಜಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಚಂಡಮಾರುತವಾಗಿದೆ. ಚಂಡಮಾರುತದಿಂದ ಹಾನಿಗೀಡಾಗಿರುವ ಎಲ್ಲ ಪ್ರದೇಶಗಳನ್ನು ಅಧಿಕಾರಿಗಳು ಈಗ ತಲುಪುವುದು ಸಾಧ್ಯವಾಗಿದೆ ಎಂದು ಪೆರಿನ್ ವಿವರಿಸಿದ್ದಾರೆ. ಆದರೆ ಕೆಲ ಸಮುದಾಯ ಪ್ರದೇಶಗಳನ್ನು ತಲುಪಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಈಗಾಗಲೇ ಮೃತದೇಹಗಳನ್ನು ಹೂಳಿರುವ ಕುಟುಂಬಗಳು ಸರಕಾರಕ್ಕೆ ಸಾಧ್ಯವಾದಷ್ಟು ನಿಖರವಾದ ಮಾಹಿತಿಗಳನ್ನು ನೀಡಬೇಕು. ಸಾವು ಸಂಭವಿಸಿದ ಮತ್ತು ಘಟನೆಗೆ ಕಾರಣವಾದ ಅಂಶಗಳನ್ನು ವಿವರಿಸುವಂತೆ ಅವರು ಮನವಿ ಮಾಡಿದ್ದಾರೆ. ರೋಗಶಾಸ್ತ್ರಜ್ಞರು ಕೆಲ ಗುಡ್ಡಗಾಡು ಪ್ರದೇಶಗಳಿಗೆ ತಲುಪಲು ಇನ್ನೂ ಕೆಲ ದಿನ ತಗುಲಬಹುದು ಎಂದು ಅಭಿಪ್ರಾಯಪಟ್ಟರು.
ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸವಾಗಿದ್ದು, 45 ಸಾವಿರ ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ತಂಗಿದ್ದಾರೆ. ಕೆಲ ಪ್ರಕರಣಗಳಲ್ಲಂತೂ ಪುನರ್ವಸತಿಗೆ ಬಹಳಷ್ಟು ಕಾಲಾವಕಾಶ ಬೇಕಾಗಬಹುದು. ಅಂಥ ಸಮುದಾಯಗಳು ಸುರಕ್ಷಿತ ಪ್ರದೇಶಗಳತ್ತ ಹೋಗಬೇಕಾಗುತ್ತದೆ ಎಂದು ವಿವರಿಸಿದರು.
ಸರಕಾರ ಸಂತ್ರಸ್ತರಿಗೆ ಆಹಾರ ಹಾಗೂ ಉಪಗ್ರಹ ಫೋನ್‌ಗಳನ್ನು ನೀಡಿ, ಹಂತಹಂತವಾಗಿ ಪರಿಸ್ಥಿತಿ ಸುಧಾರಿಸಲು ಅನುಕೂಲ ಕಲ್ಪಿಸಿದೆ ಎಂದರು. ನಾವು ದೋಣಿಯಲ್ಲಿ ಹತ್ತಿರಕ್ಕೆ ಹೋಗುತ್ತಿದ್ದಂತೆ ಸತ್ತು ಕೊಳೆತ ಜಾನುವಾರುಗಳು ಹಾಗೂ ಪ್ರಾಣಿಗಳ ವಾಸನೆ ದಟ್ಟವಾಗಿ ಹರಡಿತ್ತು. ನೀರಿನಲ್ಲಿ ಇಂಥ ಜಾನುವಾರುಗಳು ಕೊಚ್ಚಿ
ಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು ಎಂದು ಸಂತ್ರಸ್ತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಯೂನಿಸೆಫ್‌ನ ಜೋಸೆಫ್ ಹಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸಮುದ್ರದ ತೀರದಲ್ಲಿ ಹವಳದ ಹುಳಗಳು ಮುತ್ತಿಕೊಂಡಿದ್ದು, ದ್ವೀಪವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಜನ ಟಾರ್ಚ್ ಹಿಡಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಚಿತ್ರಣ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.