ಕನ್ಹಯ್ಯ ಯಾವುದೇ ಘೋಷಣೆ ಕೂಗಿರಲಿಲ್ಲ, ಜೆಎನ್‌ಯು ಭದ್ರತಾ ಸಿಬ್ಬಂದಿ,ಪೊಲೀಸ್ ಹೇಳಿಕೆ

Update: 2016-02-26 14:57 GMT

ಹೊಸದಿಲ್ಲಿ,ಫೆ.26: ಫೆ.9ರಂದು ನಡೆದಿದ್ದ ವಿವಾದಾತ್ಮಕ ಕಾರ್ಯಕ್ರಮದ ಪ್ರತ್ಯಕ್ಷದರ್ಶಿಗಳೆನ್ನಲಾಗಿರುವ ಜೆಎನ್‌ಯು ಕ್ಯಾಂಪಸ್‌ನ ಓರ್ವ ಭದ್ರತಾ ಸಿಬ್ಬಂದಿ ಮತ್ತು ಓರ್ವ ಪೊಲೀಸ್ ಹೆಡ್ ಕಾನಸ್ಟೇಬಲ್ ಅವರು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಯಾವುದೇ ಘೋಷಣೆಗಳನ್ನು ಕೂಗಿರಲಿಲ್ಲ ಎಂದು ಹೇಳಿರುವ ಕುಟುಕು ಕಾರ್ಯಾಚರಣೆಯ ವೀಡಿಯೊ ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳೆದುರು ಇವರಿಬ್ಬರೂ ತಮ್ಮ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿದ್ದಾರೆ.
ಇದಕ್ಕೂ ಮುನ್ನ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದ ಮೂವರು ವಕೀಲರ ಪೈಕಿ ಇಬ್ಬರ ಮೇಲೆಯೂ ಇಂತಹುದೇ ಕುಟುಕು ಕಾರ್ಯಾಚರಣೆ ನಡೆದಿತ್ತು ಮತ್ತು ಬಳಿಕ ಅವರಿಬ್ಬರನ್ನೂ ಪೊಲೀಸರು ಬಂಧಿಸಿದ್ದರು.
 ಟಿವಿ ವಾಹಿನಿಯೊಂದು ನಡೆಸಿರುವ ತಾಜಾ ಕುಟುಕು ಕಾರ್ಯಾಚರಣೆಯಲ್ಲಿ ತನ್ನ ಹೆಸರು ಅಮರಜೀತ್ ಸಿಂಗ್ ಹೇಳಿಕೊಂಡಿರುವ ಭದ್ರತಾ ಸಿಬ್ಬಂದಿಯು,ಫೆ.9ರಂದು ಕ್ಯಾಂಪಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ತಾನು ಉಪಸ್ಥಿತನಿದ್ದೆ. ಸಾಬರಮತಿ ಧಾಬಾದ ಬಳಿಯಿಂದ ಆರಂಭಗೊಂಡಿದ್ದ ಜಾಥಾ ಗಂಗಾ ಧಾಬಾದ ಬಳಿ ಅಂತ್ಯಗೊಂಡಿದ್ದು, ಅಲ್ಲಿ ಕನ್ಹಯ್ಯೆ ಭಾಷಣ ಮಾಡಿದ್ದರು. ಆದರೆ ಅವರು ಯಾವುದೇ ಘೋಷಣೆಯನ್ನು ಕೂಗಿರಲಿಲ್ಲ ಎಂದು ತಿಳಿಸಿದ್ದಾನೆ. ಕಾರ್ಯಕ್ರಮದಲ್ಲಿ ಹೊರಗಿನ 10-15 ಜನರು ಉಪಸ್ಥಿತರಿದ್ದರು ಎಂದೂ ಆತ ತಿಳಿಸಿದ್ದಾನೆ.
ತಾನು ಮಫ್ತಿಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತನಿದ್ದೆ ಎಂದು ವೀಡಿಯೊದಲ್ಲಿ ಹೇಳಿರುವ ದಿಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಮಬೀರ್,ಕನ್ಹಯ್ಯೆ ಕುಮಾರ್ ಗುಂಪಿನಲ್ಲಿದ್ದುದನ್ನು ತಾನು ನೋಡಿದ್ದೆ, ಆದರೆ ಅವರು ಯಾವುದೇ ಘೋಷಣೆಯನ್ನು ಕೂಗಿರಲಿಲ್ಲ. ಉಮರ್ ಖಾಲಿದ್ ಮಾತ್ರ ಘೋಷಣೆಗಳನ್ನು ಕೂಗುತ್ತಿದ್ದನ್ನು ತಾನು ಗಮನಿಸಿದ್ದೆ ಎಂದು ತಿಳಿಸಿದ್ದಾನೆ.
ಹಿಂದಿ ಸುದ್ದಿವಾಹಿನಿಯೊಂದರಿಂದ ಪಡೆದುಕೊಂಡಿರುವ ವೀಡಿಯೊದ ಆಧಾರದಲ್ಲಿ ಪ್ರಕರಣದಲ್ಲಿ ದಾಖಲಿಸಿರುವ ಎಫ್‌ಐಆರ್ ಜೊತೆಯಲ್ಲಿರುವ ಹೇಳಿಕೆಯೊಂದರಲ್ಲಿ ಪೊಲೀಸರು ಕಾರ್ಯಕ್ರಮದಲ್ಲಿ ಮಫ್ತಿಯಲ್ಲಿ ಉಪಸ್ಥಿತರಿದ್ದ ರಾಮಬೀರ್ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಗಳ ಹೆಸರುಗಳನ್ನು ಉಲ್ಲೇಖಿಸಿದ್ದರು.
ಕಳೆದ ಎರಡು ವರ್ಷಗಳಲ್ಲಿಯೂ ಸಂಸತ್ ದಾಳಿಯ ದೋಷಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳು ನಡೆದಿದ್ದವು,ಆದರೆ ಈ ರೀತಿ ಹಿಂದೆಂದೂ ಸಂಭವಿಸಿರಲಿಲ್ಲ ಎಂದೂ ರಾಮಬೀರ್ ವೀಡಿಯೊದಲ್ಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News