×
Ad

ಹೊಸ ಬಜೆಟ್ ಬಂದರೂ ವೆಚ್ಚವಾಗದ ಹಳೆ ಬಜೆಟ್ ಅನುದಾನ

Update: 2016-02-29 10:26 IST

ನವದೆಹಲಿ: ತಮ್ಮ ಸಚಿವಾಲಯಕ್ಕೆ ಬಜೆಟ್‌ನಲ್ಲಿ ಕಡಿಮೆ ಅನುದಾನ ನಿಗದಿಪಡಿಸಿರುವ ಬಗ್ಗೆ ಹಲವು ಸಚಿವಾಲಯಗಳು ಭುಸುಗುಟ್ಟುತ್ತವೆ. ಹಣಕಾಸು ವರ್ಷ ಅಂತ್ಯವಾಗುತ್ತಾ ಬಂದು ಹೊಸ ಬಜೆಟ್ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಮೊದಲ ಒಂಬತ್ತು ತಿಂಗಳ ಹಣಕಾಸು ವೆಚ್ಚ ವಿಧಾನವನ್ನು ನೋಡಿದಾಗ ವಿಭಿನ್ನ ಚಿತ್ರಣ ಸಿಗುತ್ತದೆ.
ಹತ್ತು ಸಚಿವಾಲಯಗಳು ಕಳೆದ ವರ್ಷದಲ್ಲಿ ನೀಡಿದ ಬಜೆಟ್ ಅನುದಾನದ ಶೇಕಡ 50ನ್ನು ಕೂಡಾ 2015ರ ಡಿಸೆಂಬರ್‌ವರೆಗೆ ಅಂದರೆ ಮೊದಲ ಒಂಬತ್ತು ತಿಂಗಳಲ್ಲಿ ವೆಚ್ಚ ಮಾಡಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ಅವಧಿಯಲ್ಲಿ ಏಳು ಸಚಿವಾಲಯಗಳು ಶೇಕಡ 90ರಷ್ಟು ಅನುದಾನ ವೆಚ್ಚ ಮಾಡಿವೆ. ಹಣಕಾಸು ವರ್ಷದ ನಾಲ್ಕನೇ ಒಂದು ಭಾಗದಲ್ಲಿ ಶೇಕಡ 10ರಷ್ಟು ಹಣವನ್ನಷ್ಟೇ ವೆಚ್ಚ ಮಾಡಬೇಕಾಗಿದೆ.


ಇದು ಯೋಜನಾ ವೆಚ್ಚವಾಗಿದ್ದು, ಇದರಲ್ಲಿ ವೇತನ, ಪಿಂಚಣಿ ಮತ್ತು ಇತರ ಆವರ್ತ ವೆಚ್ಚಗಳು ಸೇರುವುದಿಲ್ಲ. ಎಲ್ಲ ಹೂಡಿಕೆ ವೆಚ್ಚಗಳನ್ನೂ ಇದು ಒಳಗೊಳ್ಳುತ್ತದೆ.
ಸಚಿವಾಲಯಗಳು ಸಾಮಾನ್ಯವಾಗಿ ಕಾಲಾವಧಿಗೆ ಅನುಗುಣವಾಗಿ ವೆಚ್ಚ ಮಾಡಬೇಕೇ ವಿನಃ ಹಣಕಾಸು ವರ್ಷದ ಅಂತ್ಯದ ಕೆಲ ತಿಂಗಳಲ್ಲಿ ಹೇರಳವಾಗಿ ವೆಚ್ಚ ಮಾಡುವುದಲ್ಲ. ಆಗ ಮಾತ್ರ ಉತ್ತಮ ದಕ್ಷತೆ ಹಾಗೂ ಜನರಿಗೆ ಸೇವೆ ಲಭ್ಯವಾಗುತ್ತದೆ. ಈ ಸಮಸ್ಯೆ ಹಲವು ಸಚಿವಾಲಯಗಳಲ್ಲಿ ಇರುವುದನ್ನು ಸಿಎಜಿ ವರದಿ ಕೂಡಾ ಹಲವು ಬಾರಿ ಎತ್ತಿ ತೋರಿಸಿದೆ.


ಕೆಲ ಸಚಿವಾಲಯಗಳಿಗೆ ವರ್ಷಾಂತ್ಯದಲ್ಲಿ ವೆಚ್ಚ ಮಾಡಲು ಹಣವೇ ಇಲ್ಲ. ಮತ್ತೆ ಕೆಲವು ಸಚಿವಾಲಯಗಳು ವೆಚ್ಚವನ್ನೇ ಮಾಡಿಲ್ಲ. ಉದಾಹರಣೆಗೆ ಮೋದಿಯವರ ಮಹತ್ವಾಕಾಂಕ್ಷೆಯ ಸ್ಕಿಲ್ ಇಂಡಿಯಾ ಯೋಜನೆಯ ಹೊಣೆ ಹೊತ್ತಿರುವ ಕೌಶಲ ಅಭಿವೃದ್ಧಿ ಸಚಿವಾಲಯ, 2022ರೊಳಗೆ 400 ದಶಲಕ್ಷ ಮಂದಿಗೆ ಕೌಶಲ ತರಬೇತಿ ನೀಡಲು ನಿರ್ಧರಿಸಿದೆ. ಇದು ಮೇಕ್ ಇನ್ ಇಂಡಿಯಾ ಯೋಜನೆಗೂ ಪ್ರಮುಖ ಸಾಧನವಾಗಲಿದೆ. ಆದರೆ ಮೊದಲ ಒಂಬತ್ತು ತಿಂಗಳಲ್ಲಿ ಇದು ಮಾಡಿದ ವೆಚ್ಚ ಕೇವಲ ಶೇಕಡ 33. ನಗರಾಭಿವೃದ್ಧಿ ಸಚಿವಾಲಯ ಶೇಕಡ 18, ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಕೇವಲ 44 ಶೇಕಡ ಹಣವನ್ನಷ್ಟೇ ವೆಚ್ಚ ಮಾಡಲು ಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News