ಸ್ಮತಿ ಉಲ್ಲೇಖ ತಪ್ಪುದಾರಿಗೆಳೆಯುವಂಥದ್ದು: ಆಕ್ಸ್‌ಫರ್ಡ್ ಸಂಶೋಧಕಿ ಕಿಡಿ
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ಫೆಬ್ರವರಿ 24ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದ ವಿವಾದ ಸರಣಿಗೆ ಇದೀಗ ಹೊಸದೊಂದು ಅಂಶ ಸೇರಿಕೊಂಡಿದೆ. ಸಚಿವೆ ತಮ್ಮ ಹೆಸರು ಮತ್ತು "ಡೆಡ್ ರೆಕೊನಿಂಗ್: ಮೆಮೊರೀಸ್ ಆಫ್ 1971 ಬಾಂಗ್ಲಾದೇಶ್ ವಾರ್" ಕೃತಿಯನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಆಕ್ಸ್‌ಫರ್ಡ್ ಸಂಶೋಧಕಿ ಶರ್ಮಿಳಾ ಬೋಸ್ ಕಿಡಿ ಕಾರಿದ್ದಾರೆ.
ಆಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ವೇಳೆ ಸ್ಮತಿ ಇರಾನಿ ನನ್ನ ಹೆಸರನ್ನು ಉಲ್ಲೇಖಿಸಿ, ಹಿಂದಿನ ಪ್ರಮುಖ ವಿಷಯಗಳ ಅಧ್ಯಯನವನ್ನು ಹೇಗೆ ಮಾಡಬೇಕು; ಚಿಂತಕರು, ಪತ್ರಕರ್ತರು ಅಥವಾ ವಿದ್ಯಾರ್ಥಿಗಳು ರಾಷ್ಟ್ರೀಯತೆ ವಿಚಾರದಲ್ಲಿ ಡಿಕ್ಕಿ ಹೊಡೆದಾಗ ಏನಾಗುತ್ತದೆ ಎನ್ನುವುದನ್ನು ವಿವರಿಸಿದರು.
"ದುರದೃಷ್ಟವಶಾತ್, ಸಚಿವೆ ನನ್ನ ಕೃತಿಯ ಬಗ್ಗೆ ಮಾಡಿರುವ ಉಲ್ಲೇಖ ಸರಿಯಲ್ಲ. ಬಾಂಗ್ಲಾದೇಶ ವಿಮೋಚನಾ ಯುದ್ಧ ದೊಡ್ಡ ಆಭಾಸ ಎಂದು ನಾನು ಬರೆದಿದ್ದಾಗಿ ಸಚಿವೆ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಸ್ವಯಂವಿನಾಶದ ಸಂಘರ್ಷದಲ್ಲಿ ಭಾರತದ ಹಸ್ತಕ್ಷೇಪ ಆಭಾಸವೇ ಅಥವಾ ಅಲ್ಲವೇ ಎನ್ನುವುದು ಮುಖ್ಯವಲ್ಲ. ಆ ಬಗ್ಗೆ ನಾನು ಕೃತಿಯಲ್ಲಿ ಉಲ್ಲೇಖಿಸಿಲ್ಲ. ಈ ಕೃತಿ ಭಾರತದ ಬಗ್ಗೆ ಅಲ್ಲ. ಪೂರ್ವಪಾಕಿಸ್ತಾನದಲ್ಲಿ ಆ ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆದ ಹಿಂಸಾಕೃತ್ಯಗಳ ಆಳವಾದ ಸಂಶೋಧನೆಯನ್ನು ಒಳಗೊಂಡ ತನಿಖೆ" ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸೇನೆ ಬಾಂಗ್ಲಾದೇಶಿಯರಿಗೆ ಏನೂ ಮಾಡಿಲ್ಲ. ಇಂದಿರಾಗಾಂಧಿ ಅವರ ನೆರವಿಗೆ ಬಂದರು ಎಂದು ನಾನು ಬರೆದಿದ್ದಾಗಿ ಸಚಿವೆ ಹೇಳಿದ್ದಾರೆ. ಆದರೆ ವಾಸ್ತವವಾಗಿ ಈ ಕೃತಿ ಹಲವು ಭಯಾನಕಗಳ ಕೈಪಿಡಿ. ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಪಾಕಿಸ್ತಾನದ ಸೇನೆ ನಡೆಸಿದ ದೌರ್ಜನ್ಯಗಳನ್ನು ವಿವರಿಸುತ್ತದೆ. ಇದರ ಜತೆಗೆ ಬಾಂಗ್ಲಾದೇಶಿ ರಾಷ್ಟ್ರೀಯವಾದಿಗಳು ಬಾಂಗ್ಲಾದೇಶೀಯರಲ್ಲದವರ ಮೇಲೆ ರಾಷ್ಟ್ರೀಯತೆ ಹೆಸರಿನಲ್ಲಿ ನಡೆಸಿದ ದೌರ್ಜನ್ಯದ ವಿವರಣೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ತಪ್ಪಾಗಿ ಉಲ್ಲೇಖಿಸಿರುವುದು ಅಲ್ಲದೇ ನನ್ನ ಕೃತಿಯನ್ನೇ ನನ್ನ ಸಹೋದರ ಮೇಲಿನ ವಾಗ್ದಾಳಿಗೆ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ಆದರೆ ಬಹುಶಃ ಈ ಕೃತಿಯನ್ನು ಸಂಪೂರ್ಣವಾಗಿ ಓದುವ ಸಮಯ ಸಚಿವೆಗೆ ಇದ್ದಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ..