ಭಾರತದ ವಿರುದ್ಧ ಸಿಕ್ಸರ್,ಬೌಂಡರಿ ಸಿಡಿಸುವೆ, ವಿಫಲನಾದರೆ ಕೈ ಕತ್ತರಿಸುವೆ,ತಂಡದಲ್ಲಿ ಅವಕಾಶ ಕೊಡಿ
ಹೊಸದಿಲ್ಲಿ, ಫೆ.29: ಏಷ್ಯಯಾ ಕಪ್ ಟಿ-20ಯಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯಮಾನವಾಗಿ ಸೋಲುಂಡ ಪಾಕಿಸ್ತಾನದ ತಂಡದ ವಿರುದ್ಧ ಸ್ವದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಪಗೊಂಡಿರುವ ಕೆಲ ಅಭಿಮಾನಿಗಳು ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗುತ್ತಿದೆ. ಇಲ್ಲೊಬ್ಬ ಅಭಿಮಾನಿ ತನ್ನನ್ನು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇರಿಸಿ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್‌ರಲ್ಲಿ ಮನವಿ ಮಾಡಿಕೊಂಡಿದ್ದಾನೆ. ತನ್ನನ್ನು ತಂಡಕ್ಕೆ ಸೇರಿಸಿಕೊಂಡರೆ ಟೀಮ್ ಇಂಡಿಯಾ ವಿರುದ್ಧ ಸಿಕ್ಸರ್ ಬೌಂಡರಿಗಳನ್ನು ಚಚ್ಚುವೆ. ಮಾತ್ರವಲ್ಲ ಹಾಗೆ ತನ್ನಿಂದ ಮಾಡಲು ಸಾಧ್ಯವಾಗದಿದ್ದರೆ ತನ್ನ ಕೈಯನ್ನೇ ತುಂಡರಿಸುತ್ತೇನೆ ಎಂದು ವೀಡಿಯೊವೊಂದರಲ್ಲಿ ಘೋಷಿಸಿದ್ದಾನೆ.
ಈ ಪಾಕಿಸ್ತಾನಿ ಅಭಿಮಾನಿಯ ವೀಡಿಯೊವನ್ನು ಈವರೆಗೆ ಫೇಸ್‌ಬುಕ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ವೀಡಿಯೊದಲ್ಲಿ "ಅಸ್ಸಲಾಂ ಅಲೈಕುಂ ಪ್ರಧಾನಿ ನವಾಜ್ ಶರೀಫ್ ಸಾಹೇಬರೇ, ನಾನೊಬ್ಬ ಬಡ ವ್ಯಕ್ತಿ ದುಬೈಯಲ್ಲಿ ಇದ್ದೇನೆ. ಈ ದಿನಗಳಲ್ಲಿ ಪಾಕಿಸ್ತಾನ ಆಡುತ್ತಿರುವುದನ್ನು ನೋಡಿ ತಡೆಯಲು ಸಾಧ್ಯವಾಗುತ್ತಿಲ್ಲ. ನಾನು ನಿಮ್ಮ ಮುಂದೆ ಕೈಜೋಡಿಸುತ್ತಿದ್ದೇನೆ. ಒಮ್ಮೆ ನನ್ನನ್ನು ಟೀಮ್‌ಗೆ ಕರೆಸಿಕೊಳ್ಳಿ. ಪಾಕಿಸ್ತಾನಿ ಕ್ರಿಕೆಟರ್ಸ್ ಎಂದರೆ ಏನೆಂದು ಅವರಿಗೆ ತೋರಿಸಿಕೊಡುತ್ತೇನೆ. ಯಾರಾದರೂ ಹೀಗೆ ಆಡುತ್ತಾರೆಯೇ? ಈ ಎಲ್ಲ ಕ್ರಿಕೆಟರ್ಸ್ ನಮ್ಮನ್ನು ನಾಶ ಮಾಡಿದ್ದಾರೆ. ದೇವನಿಗಾಗಿ ನನಗೊಮ್ಮೆ ಅವಕಾಶ ಕೊಡಿ. ಒಮ್ಮೆ ಅವಕಾಶ ಕೊಟ್ಟು ನೋಡಿ ಪ್ರಧಾನಿಯವರೇ." ಅಸ್ಸಲಾಂ ಅಲೈಕುಂ ಎಂದು ಪ್ರಧಾನಿ ನವಾರ್ ಶರೀಫ್‌ರೊಡನೆ ಈ ಅಭಿಮಾನಿ ಹೀಗೆ ಅಲವತ್ತುಕೊಂಡಿದ್ದಾನೆ.