ಬ್ರಿಟನ್ ಪ್ರಧಾನಿಗೆ ಅವಿಶ್ವಾಸ ಮತದ ಬೆದರಿಕೆ
ಲಂಡನ್, ಫೆ.29: ಕನ್ಸರ್ವೆಟಿವ್ ಪಕ್ಷದ ತಮ್ಮ ಸಹೋದ್ಯೋಗಿಗಳ ಮೇಲೆ ಸತತ ದಾಳಿಯನ್ನು ನಿಲ್ಲಿಸಲು ಬ್ರಿಟಿಷ್‌ಪ್ರಧಾನಿ ಡೇವಿಡ್ ಕ್ಯಾಮರೂನ್ ವಿಫಲರಾದಲ್ಲಿ, ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವೆವೆಂದು ಕನ್ಸರ್ವೆಟಿವ್ ಸಚಿವರು ಹಾಗೂ ಸಂಸತ್ತಿನಲ್ಲಿ ಹಿಂಬದಿಯ ಆಸನಗಳ ಹಿರಿಯರು ಬೆದರಿಕೆ ಹಾಕಿದ್ದಾರೆ.
ಬ್ರೆಕ್ಸಿಟ್ ಪರ ಲಂಡನ್ ಮೇಯರ್ ಬೋರಿಸ್ ಜಾನ್ಸನ್ ಹಾಗೂ ಇತರ ಯುರೊ ಸಂದೇಹವಾದಿಗಳ ವಿರುದ್ಧದ ವಾಗ್ದಾಳಿಯನ್ನು ನಿಲ್ಲಿಸದಿದ್ದಲ್ಲಿ ‘ಒಳಗೆ ಅಥವಾ ಹೊರಗೆ’ ಐರೋಪ್ಯ ಒಕ್ಕೂಟದ (ಇಯು) ಜನಮತ ಗಣನೆಯ ಬಳಿಕ ಕ್ಯಾಮರೂನ್ ನಾಯಕತ್ವದ ಸವಾಲನ್ನು ಎದುರಿಸ ಬೇಕಾಗಬಹುದು ಎಂದು ರವಿವಾರ ‘ಸಂಡೇ ಟೈಂಸ್’ನ ವರದಿಯೊಂದನ್ನು ಕ್ಸಿನುವಾ ಉಲ್ಲೇಖಿಸಿದೆ.
ಕನ್ಸರ್ವೆಟಿವ್ ಪಕ್ಷದ ನಿಯಮಗಳನ್ವಯ, ಅದರ ಶೇ.15ರಷ್ಟು ಸಂಸತ್ ಸದಸ್ಯರು ಬಯಸಿದಲ್ಲಿ ‘ಅವಿಶ್ವಾಸ ನಿರ್ಣಯವೊಂದನ್ನು’ ಮಂಡಿಸಬಹುದು.
ಕ್ಯಾಮರೂನ್ ಈ ರೀತಿ ಮಾಡುವುದನ್ನು ಮುಂದುವರಿಸಿದರೆ ಜನಮತ ಗಣನೆಯಲ್ಲಿ ಗೆದ್ದರೂ, ಅವರ ಸ್ಥಿತಿ ಅಸಮರ್ಥನೀಯವಾಗಲಿದೆ. 50 ಸಂಸದರ ಬೆಂಬಲ ಪಡೆಯುವುದು ದೊಡ್ಡ ವಿಷಯವೇನಲ್ಲವೆಂದು ಹಿಂದಿನ ಆಸನದ ಹಿರಿಯ ಸಂಸದರೊಬ್ಬರನ್ನುಲ್ಲೇಖಿಸಿ ವಾರ್ತಾಪತ್ರಿಕೆ ವರದಿ ಮಾಡಿದೆ.
ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್‌ನ ಭವಿಷ್ಯದ ಬಗ್ಗೆ ಆಳುವ ಕನ್ಸರ್ವೆಟಿವ್ ಪಕ್ಷದಲ್ಲೇ ಬಹಿರಂಗ ಒಡುಕು ಉಂಟಾಗಿದೆ. ಅನೇಕ ಮಂದಿ ಪ್ರಭಾವಿ ಸಚಿವರು, ಖ್ಯಾತ ಕನ್ಸರ್ವೆಟಿವ್ ರಾಜಕಾರಣಿಗಳು ಹಾಗೂ 120ಕ್ಕೂ ಹೆಚ್ಚು ಸಂಸದರು ‘ಹೊರಗೆ’ ಬರಬೇಕೆಂಬ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಬ್ರೆಕ್ಸಿಟ್‌ಗೆ ತನ್ನ ಬೆಂಬಲ ಘೋಷಿಸಿದ ಲಂಡನ್‌ನ ಮೇಯರ್ ಜಾನ್ಸನ್‌ರನ್ನು ಸೋಮವಾರ ಕ್ಯಾಮರೂನ್, ಮೇಯರ್‌ನ ನಿರ್ಧಾರವು ಕೇವಲ ಮುಂದಿನ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರೇರಿತವಾಗಿದೆಯೆಂದು ಟೀಕಿಸಿದ್ದಾರೆ.
ಐರೋಪ್ಯ ಒಕ್ಕೂಟದಲ್ಲಿ ಉಳಿಯ ಬೇಕೇ ಬೇಡವೇ ಎಂಬ ಬಗ್ಗೆ ಬ್ರಿಟನ್ ಜೂ.23ರಂದು ಜನಮತ ಗಣನೆ ನಡೆಸಲಿದೆ.