ಇಶ್ರತ್ ಜಹಾನ್ ಪ್ರಕರಣ ಚಿದಂಬರಂ ವಿರುದ್ಧ ದೇಶದ್ರೋಹ ಪ್ರಕರಣಕ್ಕೆ ಶಿವಸೇನೆ ಒತ್ತಾಯ
ಹೊಸದಿಲ್ಲಿ,ಮಾ.1: ಇಶ್ರತ್ ಜಹಾನ್ ಮತ್ತು ಆಕೆಯ ಸಹಚರರು ಲಷ್ಕರ್ ಉಗ್ರರಾಗಿದ್ದರು ಎಂದು ಮೂಲದಲ್ಲಿ ಬಣ್ಣಿಸಲಾಗಿದ್ದ ಅಫಿದಾವಿತ್‌ನಲ್ಲಿ ಬದಲಾವಣೆಯನ್ನು ಮಾಡಿದ್ದಕ್ಕಾಗಿ ಮಾಜಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ವಿರುದ್ಧ ದೇಶದ್ರೋಹ ಆರೋಪವನ್ನು ದಾಖಲಿಸಬೇಕು ಎಂದು ಶಿವಸೇನೆಯು ಮಂಗಳವಾರ ಆಗ್ರಹಿಸಿದೆ.
ಚಿದಂಬರಂ ಅವರ ನಡೆಯು ದೇಶಕ್ಕೆ ಅಪಾಯಕಾರಿ ಯಾಗಿದೆ ಎಂದು ಹೇಳಿದ ಶಿವಸೇನೆಯ ನಾಯಕ ಸಂಜಯ್ ರಾವುತ್ ಅವರು,ಲಷ್ಕರ್ ಜೊತೆ ಇಶ್ರತ್ ನಂಟನ್ನು ಗೋಪ್ಯವಾಗಿರಿಸಲು ಕಾಂಗ್ರೆಸ್ ಪ್ರಯತ್ನಿಸಿದ್ದೇಕೆ ಎಂದು ಪ್ರಶ್ನಿಸಿದರು.
ಈ ವಿಷಯ ಗಂಭೀರ ಮಾತ್ರವಲ್ಲ,ದೇಶಕ್ಕೆ ಅಪಾಯಕಾರಿಯೂ ಹೌದು. ಪೊಲೀಸರು ಭಯೋತ್ಪಾದಕ ಯುವತಿಯನ್ನು ಕೊಂದಿದ್ದಾರೆ ಮತ್ತು ಎನ್‌ಕೌಂಟರ್ ಬಳಿಕ ಪೊಲೀಸರನ್ನೇ ದೂರಲಾಗಿದೆ. ಇಂದು ಹ್ಯಾಡ್ಲಿ ವಿಷಯಗಳನ್ನು ಬಾಯ್ಬಿಟ್ಟಾಗ ಸತ್ಯವು ಹೊರಗೆ ಬಂದಿದೆ. ಸರಕಾರಕ್ಕೆ ಅದನ್ನು ಬಚ್ಚಿಡುವ ಅಗತ್ಯವೇನಿತ್ತು? ಯಾರನ್ನು ರಕ್ಷಿಸಲು ಚಿದಂಬರಂ ಪ್ರಯತ್ನಿಸಿದ್ದರು? ಇಷ್ರತ್ ನೆಪದಲ್ಲಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರೇ ಎಂದು ಪ್ರಶ್ನಿಸಿದ ರಾವುತ್,ಅವಸರದಲ್ಲಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಲಾಯಿತೆಂದು ಚಿದಂಬರಂ ಈಗ ಹೇಳುತ್ತಿದ್ದಾರೆ. ಹೀಗಾಗಿ ಗುರು ಮತ್ತು ಇಶ್ರತ್ ಜಹಾನ್‌ರ ಈ ಎಲ್ಲ ಬೆಂಬಲಿಗರು ವಿಚಾರಣೆಯನ್ನೆದುರಿಸಬೇಕು.ಅವರ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಬೇಕು. ಅವರನ್ನು ನ್ಯಾಯಾಲಯಕ್ಕೆಳೆದು ಜೈಲಿಗೆ ತಳ್ಳಬೇಕು ಎಂದು ಕಿಡಿ ಕಾರಿದರು. ತನ್ಮಧ್ಯೆ ಚಿದಂಬರಂ ಅವರು ಅಫಿದಾವಿತ್ತನ್ನು ಬದಲಿಸಿದ್ದರೆಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿರುವ ಹಿನ್ನೆಲೆಯಲ್ಲಿ ವಿವಾದಾತ್ಮಕ ಇಷ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲು ಗೃಹ ಸಚಿವಾಲಯವು ನಿರ್ಧರಿಸಿದೆ.