ಮಾ.15ರೊಳಗೆ ಡ್ಯಾನ್ಸ್ ಬಾರ್‌ಗಳಿಗೆ ಪರವಾನಿಗೆ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಆದೇಶ
ಹೊಸದಿಲ್ಲಿ,ಮಾ.2: ಡ್ಯಾನ್ಸ್ ಬಾರ್‌ಗಳಿಗೆ ಮಾ.15ರೊಳಗೆ ಪರವಾನಿಗೆಗಳನ್ನು ಮಂಜೂರು ಮಾಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಬುಧವಾರ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.
ಡ್ಯಾನ್ಸ್ ಬಾರ್‌ನಿಂದ ಸಿಸಿಟಿವಿ ಮೂಲಕ ದೃಶ್ಯಗಳು ಸಮೀಪದ ಪೊಲೀಸ್ ಠಾಣೆಗೆ ನೇರ ಪ್ರಸಾರಗೊಳ್ಳಬೇಕು ಎಂಬ ರಾಜ್ಯ ಸರಕಾರದ ಬೇಡಿಕೆಗೆ ನ್ಯಾಯಾಲಯವು ಮಣೆ ಹಾಕಲಿಲ್ಲ. ಸಿಸಿಟಿವಿ ಮೂಲಕ ನೃತ್ಯಗಳು ನಡೆಯುವ ಸ್ಥಳದ ಚಿತ್ರೀಕರಣವು ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿತು. ಡ್ಯಾನ್ಸ್ ಬಾರ್‌ಗಳನ್ನು ತೆರೆಯಲು ಪರವಾನಿಗೆ ನೀಡುವ ಮುನ್ನ ಮಹಾರಾಷ್ಟ್ರ ಪೊಲೀಸರು ತಮ್ಮ ಮೇಲೆ 24 ಹೊಸ ಷರತ್ತುಗಳನ್ನು ಹೇರಿದ ನಂತರ ಡ್ಯಾನ್ಸ್ ಬಾರ್ ಅಸೋಸಿಯೇಷನ್‌ನ ಸದಸ್ಯರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಪೊಲೀಸರು ಹೇರಿರುವ ಹೊಸ ಷರತ್ತುಗಳು ತೀವ್ರ ವಿವಾದಾತ್ಮಕವಾಗಿವೆ ಎಂದು ಅಸೋಸಿಯೇಷನ್ ತನ್ನ ಅರ್ಜಿಯಲ್ಲಿ ಹೇಳಿತ್ತು. ನೃತ್ಯಗಳು ನಡೆಯುವ ಸ್ಥಳ ಮತ್ತು ಗ್ರಾಹಕರು ಕುಳಿತುಕೊಳ್ಳುವ ಸ್ಥಳದ ನಡುವೆ ಮೂರು ಅಡಿ ಎತ್ತರದ ಗೋಡೆಯಿರಬೇಕು ಮತ್ತು ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳನ್ನು ಡ್ಯಾನ್ಸ್ ಬಾರ್‌ಗಳಲ್ಲಿ ಉದ್ಯೋಗಿಗಳಾಗಿ ನೇಮಿಸಿಕೊಳ್ಳುವಂತಿಲ್ಲ ಎಂದೂ ಪೊಲೀಸರು ಸೂಚಿಸಿದ್ದರು.
ಈ ಪೈಕಿ ಕೆಲವೊಂದು ಷರತ್ತುಗಳನ್ನು ಪರಿಷ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು ಮೂರು ದಿನಗಳಲ್ಲಿ ಅವುಗಳನ್ನು ಪಾಲಿಸುವಂತೆ ಬಾರ್‌ಗಳಿಗೆ ನಿರ್ದೇಶ ನೀಡಿತು.
ನಂತರದ ಹತ್ತು ದಿನಗಳಲ್ಲಿ ಮಹಾರಾಷ್ಟ್ರ ಸರಕಾರವು ಡ್ಯಾನ್ಸ್ ಬಾರ್‌ಗಳಿಗೆ ಪರವಾನಿಗೆ ನೀಡಬೇಕು. ಮಹಾರಾಷ್ಟ್ರ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಕಾರ್ಯಾಚರಿಸಬೇಕು ಮತ್ತು ಪರವಾನಿಗೆಗಳನ್ನು ನಿಲ್ಲಿಸಲು ಯಾವುದೇ ಹೆಚ್ಚುವರಿ ಷರತ್ತನ್ನು ಹೇರುವಂತಿಲ್ಲ ಎಂದು ಸ್ಪಷ್ಟಪಡಿಸಿತು.
ಡ್ಯಾನ್ಸ್ ಬಾರ್‌ಗಳನ್ನು ನಿಷೇಧಿಸಿ ಮಹಾರಾಷ್ಟ್ರ ವಿಧಾನಸಭೆಯು ಅಂಗೀಕರಿಸಿದ್ದ ಕಾನೂನಿಗೆ ಸರ್ವೋಚ್ಚ ನ್ಯಾಯಾಲಯವು ಕಳೆದ ಅಕ್ಟೋಬರ್‌ನಲ್ಲಿ ತಡೆಯಾಜ್ಞೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ 150ಕ್ಕೂ ಅಧಿಕ ಡ್ಯಾನ್ಸ್‌ಬಾರ್‌ಗಳು ಪುನರಾರಂಭಗೊಳ್ಳಲು ತಯಾರಿ ನಡೆಸಿದ್ದವು.