×
Ad

ರಾಜಸ್ಥಾನದಲ್ಲಿ ಕಳೆದೆರಡು ವರ್ಷಗಳಲ್ಲಿ 729 ನಿಷ್ಕ್ರಿಯ ಮದರಸಾಗಳ ಲೈಸನ್ಸ್ ರದ್ದು

Update: 2016-03-04 17:33 IST

ಜೈಪುರ್ : ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜಸ್ಥಾನ ಸರಕಾರವು ನಿಷ್ಕ್ರಿಯಗೊಂಡಿರುವ ಒಟ್ಟು 729 ಮದರಸಾಗಳ ನೋಂದಣಿಯನ್ನು ರದ್ದುಗೊಳಿಸಿದೆಯೆಂದು ರಾಜ್ಯದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಅರುಣ್ ಚೌಧುರಿ ಇಂದು ವಿಧಾನಸಭೆಗೆ ಮಾಹಿತಿ ನೀಡಿದರು.

ನೋಂದಣಿಗೊಂಡಿದ್ದರೂ ಅಸ್ತಿತ್ವದಲ್ಲಿಲ್ಲದ ಮದರಸಾಗಳ ನೋಂದಣಿಯನ್ನೂ ರದ್ದುಪಡಿಸಲಾಗಿದೆಯೆಂದು ಅವರು ಕಾಂಗ್ರೆಸ್ ಶಾಸಕ ರಮೇಶ್ ಮೀನಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ಒಂದು ಪ್ರಕರಣದಲ್ಲಿ ಮದರಸಾವೊಂದರ ಮಾಲಿಕರೇ ನೋಂದಣಿಯನ್ನು ರದ್ದುಗೊಳಿಸಿದ್ದಾರೆಂದು ಸಚಿವರು ಹೇಳಿದರು.

ಕೆಲವು ಮದರಸಾ ಮಾಲಿಕರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದ ಬಿಜೆಪಿ ಶಾಸಕಿ ಅನಿತಾ ಸಿಂಗ್‌ಅಂಥವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದಾಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಸ್ಥಳೀಯಾಡಳಿತದ ಜವಾಬ್ದಾರಿಯಾದರೂ ತಾನು ಇದರ ಬಗ್ಗೆ ಗಮನ ಹರಿಸುವುದಾಗಿ ಸಚಿವರು ತಿಳಿಸಿದರು.

ರಾಜ್ಯದಲ್ಲಿ ಅನಧಿಕೃತ ಮದರಸಾಗಳಿಲ್ಲವೆಂದು ಹೇಳಿದ ಸಚಿವರು, ನೋಂದಣಿಗೊಂಡ ಮದರಸಾಗಳು ಸರಕಾರದಿಂದ ಸಬ್ಸಿಡಿ ಪಡೆಯುತ್ತಿವೆಯೆಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News