ಪುಸ್ತಕ ಪ್ರೇಮಿಯೊಬ್ಬರ ‘ಭ್ರಮರ ಮತ್ತು ಕೀಟ’

Update: 2016-03-04 18:06 GMT

ಕೆಲವು ಅತ್ಯುತ್ತಮ ಕೃತಿಗಳು ತೆರೆದು ತೋರಿಸುವ ಲೋಕ ಎಷ್ಟು ಅಪೂರ್ವ ವಾದದ್ದು, ಅದರಲ್ಲೂ ಹತ್ತಾರು ಕೃತಿಗಳನ್ನು ಚರ್ಚೆಗೆ ಒಳಪಡಿಸಿದ್ದ ಕೃತಿಯಂತೂ ಬೇರೊಂದು ರೀತಿಯ ಅನುಭವವನ್ನು ನೀಡಬಲ್ಲುದು. ಇದಕ್ಕೆ ಮಾದರಿಯೆಂಬಂತೆ ಎಚ್. ದಂಡಪ್ಪ ಅವರ ‘ಭ್ರಮರ ಮತ್ತು ಕೀಟ’ ಇಪ್ಪತ್ಮೂರು ಲೇಖನಗಳನ್ನು ತನ್ನ ಉದರದೊಳಗೆ ತುಂಬಿಕೊಂಡಿರುವ ಗ್ರಂಥ. ನಾನಾ ವಿಷಯಗಳನ್ನೊಳಗೊಂಡ ಭಂಡಾರ. ಸುಮಾರು ಮುನ್ನೂರ ಇಪ್ಪತ್ಮೂರು ಪುಟಗಳಲ್ಲಿ ಎಂತೆಂಥದೋ ವಿಷಯಗಳನ್ನು ಸಂಕಥನಗೊಳಿಸಿರುವಂಥದ್ದು. ಆದ್ದರಿಂದಲೇ ಒಂದು ವಿಧದ ಆಪ್ತತೆ ಸ್ವಾಭಾವಿಕವಾಗಿಯೇ ನಮ್ಮಾಳಗೆ ಆವರಿಸಿಕೊಳ್ಳುತ್ತದೆ. ಈ ಸೃಷ್ಟಿ ಕ್ರಿಯೆಯ ಹಿಂದೆ ಗಟ್ಟಿಯಾದ ಆತ್ಮವಿಲ್ಲದಿದ್ದರೆ, ತಾದಾತ್ಮತೆಯನ್ನು ಧ್ವನಿಸುತ್ತಿರಲಿಲ್ಲ. ಇಂಥ ಸಂಸರ್ಗವನ್ನು ತುಂಬಿಕೊಂಡಿರುವ ದಂಡಪ್ಪ ಅವರ ಚಿತ್ರಣ ಮುಂದೆ ನಿಂತ ತಕ್ಷಣ ಪುಸ್ತಕ ಪ್ರೇಮಿಯೊಬ್ಬನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾಳಜಿಗಳು ವ್ಯಾಪ್ತಿಗೊಂಡಿರುವುದು ಧುತ್ತನೆ ಮುಖಾಮುಖಿಯಾಗುವುದು. ಕಳೆದ ಮೂರುವರೆ ದಶಕಗಳಿಂದ ತಮ್ಮ ಒಟ್ಟು ಚಿಂತೆನೆಯ ಕ್ರಮಬದ್ಧತೆಗೆ ಕಿಂಚಿತ್ತೂ ಊನವಾಗದಂತೆ ಅಧ್ಯಯನ ಶೀಲತೆಯನ್ನು ಉಳಿಸಿಕೊಂಡಿರುವಂಥವರು. ಈ ದೀರ್ಘಕಾಲಘಟ್ಟದಲ್ಲಿ ಅತ್ಯಂತ ಸಂಯಮ ಶೀಲತೆಯಿಂದ ಬೆಳೆದಿರುವ ಮನಸ್ಸೊಂದು ‘ಭ್ರಮರ ಮತ್ತು ಕೀಟ’ದಲ್ಲಿ ದಟ್ಟಗೊಂಡಿರುವುದನ್ನು ಕಾಣಬಹುದು. ಇದು ರಾತ್ರೋರಾತ್ರಿ ದಂಡಪ್ಪನವರಂಥ ಗಂಭೀರ ಸಾಹಿತ್ಯದ ವಿದ್ಯಾರ್ಥಿಗೆ ಸಂದಾಯವಾದದ್ದಲ್ಲ. ಅದರ ಹಿಂದೆ ಅಗಾಧವಾದ ಶ್ರಮ ಮತ್ತು ಅದಕ್ಕೆ ಪೂರಕವಾದ ಏಕಾಗ್ರತೆ ದತ್ತವಾಗಿದೆ. ಆದ್ದರಿಂದಲೇ ಅಂದಿನಿಂದ ಇಂದಿನವರೆಗೆ ನಮ್ಮಿಬ್ಬರ ನಡುವೆ ಇರುವುದು ‘ಸಾಹಿತ್ಯಿಕ ಮತ್ತು ಸಾಂಸ್ಕೃತಿಕ’ ಸಂವಾದ. ಸಿಕ್ಕಿದಾಗಲೆಲ್ಲಾ ತೆರೆದು ಕೊಳ್ಳುವುದು ಯಾವುದೋ ಒಂದು ಕೃತಿ. ಅದರ ಬೆನ್ನಲ್ಲೇ ಸಂಚಲನಗೊಂಡಿರುವಂಥ ವಗ್ವಾದ. ಗಂಭೀರ ಅಧ್ಯಯನವನ್ನು ನಂಬಿದವರಾದ್ದರಿಂದ ಯಾವುದರ ಬಗ್ಗೆಯೂ ಹಗುರವಾದ ತೀರ್ಮಾನಗಳಿಗೆ ಬರುವಂಥವರಲ್ಲ. ಹಾಗೆಯೇ ನಮ್ಮ ಸಾಹಿತ್ಯಿಕ ಹಾಗೂ ಸಾಮಾಜಿಕ ಸಂದರ್ಭದಲ್ಲಿ ನಾನಾ ವಿಧವಾದ ಚಿಂತನಾ ಕ್ರಮಗಳು ನೆಲೆಯೂರುತ್ತಿದ್ದ ಸಮಯದಲ್ಲಿ ಸಾರಸಗಟಾಗಿ ಅಪ್ಪಿಕೊಳ್ಳಲು ಹೋದವರಲ್ಲ. ಎಷ್ಟಾದರೂ ಬೆಂಗಳೂರು ವಿಶ್ವವಿದ್ಯಾನಿಲಯದ ‘ಶಿಸ್ತುಬದ್ಧ’ ಸ್ಕೂಲ್ ಆಫ್ ಥಾಟ್‌ನ ಕನ್ನಡ ಅಧ್ಯಯನ ಸಂಸ್ಥೆಯಿಂದ ಬಂದವರಲ್ಲವೇ? ಪ್ರತಿ ರವಿವಾರ ಮನೆಗೆ ಬಂದಾಗಲೆಲ್ಲಾ ತಕ್ಷಣ ಅವರು ಕೇಳುತ್ತಿದ್ದುದು ‘‘ಶೂದ್ರ ಅವರೆ, ಯಾವುದಾದರೂ ಹೊಸ ಪುಸ್ತಕ ಬಂದಿದೆಯಾ? ಶೂದ್ರಕ್ಕೆ ಅದನ್ನು ಪರಿಚಯ ಮಾಡಿಕೊಡಲಾ?’’

 ಎಂದು ಹೇಳುತ್ತಲೇ ತಮ್ಮ ಎದೆಗೆ ಮಗುವಿನಂತೆ ಅಂಟಿಕೊಡಿದ್ದ ಪುಸ್ತಕಗಳನ್ನು ತೋರಿಸಿ ‘‘ ನೀವು ಓದಲೇಬೇಕು ಸರ್’’ ಎಂದು ಹೇಳುತ್ತಿದ್ದವರು. ಒಮ್ಮಿಮ್ಮೆ ಇವರು ಬರುವ ಸಮಯಕ್ಕೆ ಪ್ರೊ.ಕ.ವೆಂ. ರಾಜಗೋಪಾಲ ಅವರಂಥ ಹಿರಿಯ ಕವಿಗಳು ಹಾಗೂ ಪುಸ್ತಕ ಪ್ರೇಮಿ ಸಿಕ್ಕಿದರಂತೂ ಸಂವಾದವು ಮುಗಿಯುವುದಿಲ್ಲ ಎಂಬ ಹಂತಕ್ಕೆ ತಲುಪುತ್ತಿತ್ತು. ಯಾಕೆಂದರೆ, ಅವರು ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಅಧ್ಯಯನ, ಅರಿವು ಮತ್ತು ಪುಸ್ತಕ ಪ್ರೇಮ ಕುರಿತು ಅಗಾಧವಾದ ಕಳಕಳಿಯನ್ನು ಹೊಂದಿದ್ದವರು. ಇಂಥ ಅಸ್ಮಿತೆಗಳ ನಡುವೆಯೇ ಬೆಳೆದ ದಂಡಪ್ಪ ಅವರಂಥ ಪ್ರತಿಭಾವಂತ ಸಾಹಿತ್ಯದ ವಿದ್ಯಾರ್ಥಿ ಚಿನ್ನದ ಪದಕದೊಡನೆ ಕನ್ನಡ ಎಂ.ಎ.ಯನ್ನು ಪಡೆದವರು. ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಕಾಲೇಜಿನಲ್ಲಿಯ ಅಧ್ಯಾಪನ ವೃತ್ತಿಯನ್ನು ಬಿಟ್ಟು ಇದ್ದಕ್ಕಿದ್ದಂತೆ ವಾಣಿಜ್ಯ ತೆರಿಗೆ ಇಲಾಖೆಗೆ ಅಧಿಕಾರಿಯಾಗಿ ಹೋಗಿದ್ದು ಅಚ್ಚರಿಯನ್ನು ಮೂಡಿಸಿತ್ತು.

ಇಂಥ ದಂಡಪ್ಪ ಅಲ್ಲಿದ್ದರೂ ಸಾಹಿತ್ಯದ ಅಧ್ಯಯನ ಮತ್ತು ಬರವಣಿಗೆಯಿಂದ ದೂರ ಸರಿಯಲಿಲ್ಲ. ನೂರಾರು ವಿದ್ಯಾರ್ಥಿಗಳ ಮುಂದೆ ಗಂಭೀರ ಅಧ್ಯಾಪಕರಾಗಬಹುದಾದಂಥವರು. ಹಿಂದೆ ಪ್ರಸ್ತಾಪಿಸಿದಂತೆ ಆಗಾಗ ತೂಕವಾದದ್ದನ್ನೇ ಬರೆಯುತ್ತ ಹೋದರು. ಅದರ ಮೊತ್ತವೇ ಈ ‘ಭ್ರಮರ ಮತ್ತು ಕೀಟ’ ಎಂಬ ಅಪೂರ್ವ ಕೃತಿಯು ನಮ್ಮ ಮುಂದಿರುವುದು. ಇದಕ್ಕಿಂತ ಮೊದಲು ಸಿದ್ದಲಿಂಗಯ್ಯನವರ ಒಟ್ಟು ಸಾಹಿತ್ಯ ಕುರಿತಂತೆ ಬಂದ ಲೇಖನಗಳನ್ನು ಒಂದುಗೂಡಿಸಿ ‘ಬಡವರ ನಗುವಿನ ಶಕ್ತಿ’ ಎಂದು ಅಚ್ಚುಕಟ್ಟಾಗಿ ತಂದರು. ಜೊತೆಗೆ ಕಾ.ತ.ಚಿಕ್ಕಣ್ಣನವರ ಕಥೆಗಳ ಸಮೃದ್ಧ ಜೀವನದ ಕುರಿತಂತೆ ‘ನೀರೊಳಗಣ ಬೆಳಕು’ ಕೃತಿಯು ಬಂತು. ಎರಡು ವರ್ಷಗಳ ಹಿಂದೆ ‘ನುಡಿ’ ಪ್ರಕಾಶನದಿಮದ ‘ಸಿದ್ದಲಿಂಗಯ್ಯ ವಾಚಿಕೆ’ ಬಂತು. ಇದೊಂದು ಉತ್ತಮ ಕೃತಿ.
  ನಮ್ಮ ನಡುವೆ ‘ದಲಿತ ಬಂಡಾಯ’ ದಂಥ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಳವಳಿಗಳು ತೀವ್ರವಾಗಿದ್ದ ಕಾಲಘಟ್ಟದಲ್ಲಿ ಅದರಲ್ಲಿಯೆ ಕರಗಿಹೋಗದೆ ಗ್ರಹಿಕೆಗಳನ್ನು ಜೀವಂತವಾಗಿಟ್ಟುಕೊಂಡು ಬರೆದವರು. ನವೋದಯ ಮತ್ತು ನವ್ಯದಂಥ ಬಹು ವಿಶಾಲವಾದ ಕ್ಯಾನವಾಸನ್ನು ಹೊಂದಿದ್ದ ಚಿಂತನಾ ಕ್ರಮವನ್ನು ಗಂಭೀರವಾಗಿ ನೋಡಿ ಬರೆದವರು. ಆದ್ದರಿಂದಲೇ ಕುವೆಂಪು, ಕೆ.ಎಸ್.ನ., ಜಿ.ಎಸ್.ಎಸ್ ಅಂಥವರನ್ನು ಚರ್ಚಿಸುವಾಗ ಎಲ್ಲಿಯೂ ವಾಚ್ಯವಾಗಿದೆ, ಅವರ ಗಟ್ಟಿತನದ ಸೊಬಗನ್ನು ನಮಗೆ ಕಾಣಿಸುವುದು. ಈ ಎಲ್ಲ ನೆಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಮ್ಮ ನಡುವಿನ ಗಂಭೀರ ವಿಮರ್ಶಿಕೆ ಎಸ್.ಆರ್. ವಿಜಯ ಶಂಕರ ಅವರ ಅರ್ಥಪೂರ್ಣ ಮುನ್ನುಡಿ ಇದೆ. ದಂಡಪ್ಪ ಅವರ ಮನೋಭಾವಿಕೆಯನ್ನು ವ್ಯಾಖ್ಯಾನಿಸಿರುವಂಥ ಮುನ್ನುಡಿ ‘ಭ್ರಮರ ಮತ್ತು ಕೀಟ’ ಕೃತಿಯ ಓದಿಗೆ ಪೀಠಿಕಾ ರೂಪದಲ್ಲಿರುವಂಥದ್ದು. ಕೆಲವು ಉತ್ತಮ ಕೃತಿಗಳನ್ನು ಓದುವುದಕ್ಕೆ ಒಂದು ವಿಮರ್ಶಾ ಲೇಖನವೊಂದು ಹೇಗೆ ಪ್ರೇ ರಕವಾಗಬಲ್ಲುದು ಎಂಬುದಕ್ಕೆ ಇಲ್ಲಿಯ ಲೇಖನಗಳು ಸಾಕ್ಷಿಯಾಗಿವೆ. ಇದನ್ನು ವಿಜಯ ಶಂಕರ್ ಅವರು ಸೂಕ್ಷ್ಮವಾಗಿ ವಿಶ್ಲೇಷಿಸಿರುವುದು ಸಕಾರಣವಾಗಿದೆ. ಇದಕ್ಕೆ ಪೂರಕವಾಗಿ ಕೆಲವು ಸಾಲುಗಳು ಹೀಗಿವೆ. ‘‘ಬಿಡಿ ಬರಹಗಳಾಗಿ ವಿಮರ್ಶೆ ಹರಡಿದಾಗ ತಾತ್ವಿಕತೆ ಹಾಗೂ ವಿಮರ್ಶಾ ಸಿದ್ಧಾಂತಗಳು ಅನೇಕ ಲೇಖನಗಳಲ್ಲಿ ಹರಡಿ ಕೂತಿರುತ್ತವೆ. ಅವು ಒಂದೇಕಡೆ ಸಂಗ್ರಹವಾಗಿ ಇರುವುದಿಲ್ಲ.

ದಂಡಪ್ಪ ಅವರೂ ತಮ್ಮ ವಿಮರ್ಶೆಗಳಲ್ಲಿ ಸಿದ್ಧಾಂತ ಪ್ರತಿಪಾದನೆಗೆ ಇಳಿಯದೇ ಪಠ್ಯಗಳ ಮೂಲಕವೇ ಪ್ರವೇಶಿಸುವುದರಿಂದ ಕೃತಿಗಳ ಜೊತೆಗಿನ ಸಹಮತದಲ್ಲಿ ಅವರ ವಿಮರ್ಶಾ ವಿಚಾರಗಳು ವಿವರಿಸಲ್ಪಡುತ್ತದೆ. ಅದನ್ನು ಗ್ರಹಿಸಲು ಓದುಗ ತನ್ನ ಪ್ರಯತ್ನವನ್ನು ಪಡಬೇಕಾಗುತ್ತವೆ. ದಂಡಪ್ಪನವರ ವಿಮರ್ಶಾ ಲೇಖನವೊಂದನ್ನು ಓದಿ ಅಲ್ಲಿಗೆ ಮುಗಿಸದೆ ಅವರು ಇತರ ಲೇಖನಗಳನ್ನು ಬರೆದಾಗ ಯಾವ ವಿಮರ್ಶಾ ವಿಚಾರಗಳನ್ನು ಪುನಃ ಕೈಗೆತ್ತಿಕೊಳ್ಳುತ್ತಾರೆ ಎಂಬುವುದನ್ನು ಗಮನಿಸಬೇಕಾಗುತ್ತದೆ. ಈ ಸಂಕಲನದಲ್ಲಿರುವ ಕಾದಂಬರಿ ಕಥೆಗಳ ಕುರಿತಾದ ಬರಹಗಳಲ್ಲಿ ಅಂತಹ ವಿಚಾರ ಹಾಗೂ ವಿಧಾನ ಸಾತತ್ಯಗಳನ್ನು ಸುಲಭವಾಗಿ ಗುರುತಿಸಬಹುದು. ಅವರ ಕಾವ್ಯ ಗ್ರಹಿಕೆಯು ಅದೇ ರೀತಿ ಮುಂದುವರಿಯುತ್ತದೆ.’’ ಈ ದೃಷ್ಟಿಯಿಂದ ಮುನ್ನುಡಿ ಗುಣಾತ್ಮಕವಾಗಿಯೆ ಇದೆ.
   ಹಾಗೆ ನೋಡಿದರೆ: ಯಾವ ಓದುಗನು ಒಂದು ಅತ್ಯುತ್ತಮ ಕೃತಿಯನ್ನು ವಿಮರ್ಶೆಗಳ ಮೂಲಕವೇ ಓದಲು ಹೋಗುವುದಿಲ್ಲ. ಆದರೆ ಅದು ಯಾವುದೇ ವಿಧವಾದ ಪೂರ್ವಗ್ರಹಿತವಾಗದಿದ್ದಾಗ; ಕೃತಿಯ ಮರು ಓದಿಗೆ ಪ್ರೇರಕವಾಗಬಹುದು. ಈ ನೆಲೆಯಲ್ಲಿ ಇಲ್ಲಿಯ ಗಂಭೀರ ಲೇಖನಗಳು ಅಸ್ತಿತ್ವವನ್ನು ಪಡೆದುಕೊಂಡಿವೆ. ಈ ಕೃತಿಯ ಬೆನ್ನುಡಿಯಲ್ಲಿ ಗಂಭೀರ ವಿಮರ್ಶಕ ಹಾಗೂ ಚಿಂತಕ ಡಾ. ಬಸವರಾಜ್ ಕಲ್ಬುಡಿಯವರ ಕೆಲವು ಸಾಲುಗಳು ‘ ಭ್ರಮರ ಮತ್ತು ಕೀಟ’ಕ್ಕೆ ಸಾಕ್ಷಿಭೂತವಾಗಿವೆ: ‘‘ಆಧುನಿಕ ಕನ್ನಡ ಸಾಹಿತ್ಯ ಪ್ರಪಂಚದ ವಸ್ತಾರವಾದ ಹರಡನ್ನು ದಂಡಪ್ಪನವರು, ಒಂದು ವಿಶಾಲ ಭಿತ್ತಿಯಲ್ಲಿ ಹಿಡಿಯ ಬಲ್ಲವರಾಗಿದ್ದಾರೆ. ಹೀಗಾಗಿ ಇವರ ಅನ್ವಯಿಕೆ ವಿಮರ್ಶೆಯ ಅಧ್ಯಯನವು, ಪ್ರಾಯೋಗಿಕ ವಿಮರ್ಶೆಯ ಇತಿಮಿತಿಗಳನ್ನು ದಾಟಿ, ತೌಲನಿಕ ನೆಲೆಯ ಹುಡುಕಾಟದಲ್ಲಿ ತನ್ನ ಬಾಹುಗಳನ್ನು ಚಾಚಿ, ಸೃಜನಶೀಲತೆಯ ವೈವಿಧ್ಯತೆಯನ್ನು ಚಾರಿತ್ರಿಕವಾಗಿಯೂ ಹುಡುಕಬಲ್ಲುದಾಗಿದೆ.’’ ಇಂಥ ನೋಟದ ಚೌಕಟ್ಟಿನಲ್ಲಿ ಯಾವುದೇ ವಿಧವಾದ ಗೊಂದಲವಿಲ್ಲದೆ; ನಮ್ಮ ಗ್ರಹಿಕೆಗಳು ಜೀವಂತವಾಗಿರಲು ಸಾಧ್ಯ. ಕೊನೆಗೂ ವಿಮರ್ಶೆಯೆಂಬುದು ಒಳ ನೋಟಗಳನ್ನು ಬೆಳೆಸುವಂತದ್ದೇ ಆಗಿರಬೇಕಾಗುತ್ತದೆ. ಪ್ರತಿಯೊಬ್ಬ ದೊಡ್ಡ ಲೇಖಕನು ಸಾಮಾಜಿಕ ಸ್ಥಿತ್ಯಂತರಗಳನ್ನು ಅನುಭವದ ನೆಲೆಯಲ್ಲಿಯೆ ಗ್ರಹಿಸುತ್ತ ಹೋಗುವನು. ಇದಕ್ಕೆ ಪ್ರತಿಫಲವಾಗಿ ಜೀವಂತ ಕೃತಿಯನ್ನು ಜೀವ ಪಡೆಯುತ್ತದೆ. ಈ ದೃಷ್ಟಿಯಿಂದ ಸಮಾಜ ವಿರೋಧಿಯಾಗಿರಲು ಸಾಧ್ಯವಿಲ್ಲ. ಆದ್ದರಿಂದ ಆಧುನಿಕ ಸಂದರ್ಭದ ಪರಿಕಲ್ಪನೆಯಾದ ‘ ಸಮಾಜವಾದ’ವನ್ನು ಮುಂದಿಟ್ಟುಕೊಂಡು ಮಾತಾಡುವುದು ಅಥವಾ ಬರೆಯುವುದು ಎಷ್ಟು ಸೂಕ್ತ ಅನ್ನಿಸುತ್ತದೆ. ಹಾಗೆ ನೋಡಿದರೆ, ಯಾವ ದೊಡ್ಡ ಲೇಖಕನು ಜೀವ ವಿರೋಧಿಯಾಗಿರಲು ಸಾಧ್ಯವಿಲ್ಲ. ಕೆಲವು ಬಾರಿ ಚಿಂತನೆಯ ಮಿತಿಗಳ ಕಾರಣಕ್ಕಾಗಿ ಎಡಬಿಡಂಗಿ ತನವು ಪ್ರವೇಶಿಸಿಬಿಡಬಹುದು. ಆದರೆ ಕುವೆಂಪು ಅಂಥವರನ್ನು ಚರ್ಚಿಸುವಾಗ, ‘‘ಸಮಾಜವಾದ ಕುವೆಂಪು ಕಾವ್ಯದಲ್ಲಿ ದಟ್ಟವಾಗಿ ಒಡಮೂಡುತ್ತದೆ. ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರಗಳನ್ನು ಹಾಗೂ ಸರ್ವತೋಮುಖ ಬೆಳವಣಿಗೆಯ ಆವಶ್ಯಕತೆಯನ್ನು ಮಾನ್ಯ ಮಾಡುವ ವಿಚಾರಗಳು ಮತ್ತು ಆಶಯಗಳು ಇವರ ಕಾವ್ಯದಲ್ಲಿವೆ. ಮನುಷ್ಯನ ಬಗ್ಗೆ ಗೌರವ ಮತ್ತು ಪ್ರೀತಿಯ ಮೇಲೆ ಆಧಾರಿತವಾಗಿರುವ ಮಾನವೀಯ ಸ್ವಾಭಾವದ ಸಾಮಾಜಿಕ ಸಂಬಂಧಗಳನ್ನು ಕಂಡರಿಸಿರುವ ಬಗ್ಗೆ ಅನನ್ಯವಾದದ್ದು. ಕುವೆಂಪು ಅವರದ್ದು ಬಡವನ ಪರವಾದ ವಾದ. ಆಧುನಿಕ ಯುಗದ ಒಂದು ಬಹಳ ಮುಖ್ಯವಾದ ತತ್ವ ಬಡವನ ಪರವಾದ ವಾದ. ಮಾರ್ಕ್ಸ್‌ವಾದ, ಸಮಾಜವಾದ ಇಪ್ಪತ್ತನೆ ಶತಮಾನದ ಪ್ರಮುಖ ತತ್ವಗಳು. ಈ ತತ್ವಗಳನ್ನು ಕಲ್ಕಿ, ಗೊಬ್ಬರ, ನೇಗಿಲಯೋಗಿ ಮುಂತಾದ ಕವಿತೆಗಳಲ್ಲಿ ಕಾಣಬಹುದು.’’ ಎಂಬ ವ್ಯಾಖ್ಯಾನಗಳು ಆವಶ್ಯಕವಿದೆಯೊ ಅನ್ನಿಸುತ್ತದೆ. ಯಾಕೆಂದರೆ: ಸಮಾಜವಾದ ಮತ್ತು ಸಮತಾವಾದವನ್ನು ಎಲ್ಲದಕ್ಕೂ ಅನ್ವಯಿಸುತ್ತ ಹೋದರೆ ಕ್ಲೀಷೆಯಾಗಿಬಿಡುವ ಸಾಧ್ಯತೆಗಳಿರುತ್ತವೆ. ಜೊತೆಗೆ ಒಂದು ಗಂಭೀರ ಓದಿಗೆ ಧಕ್ಕೆ ಬರುತ್ತದೆ ಅನ್ನಿಸುತ್ತದೆ. ಇಂಥ ವಾದಕ್ಕೆ ಅಂತರವನ್ನು ಕಾಪಾಡಿಕೊಂಡು ಬಂದಿರುವ ದಂಡಪ್ಪನವರಂಥ ಗಂಭೀರ ವಿಮರ್ಶಕರು ಮೇಲೆ ಪ್ರಸ್ತಾಪಿಸಿದ ವಾದ ಸರಣಿಯನ್ನು ಒಬ್ಬ ಮಹತ್ವ ಪೂರ್ಣ ಲೇಖಕನಿಗೆ ‘ಅಪ್ಲೈ’ ಮಾಡಿದಾಗ, ಅರಿವಿಗೆ ತೊಡಕಾಗಿ ಕಾಣಿಸುತ್ತಿರುತ್ತದೆ. ನಮ್ಮ ದಲಿತ ಬಂಡಾಯದ ಬಹುಪಾಲು ಲೇಖಕರು ಅನುಭವದ ಶ್ರೀಮಂತಿಕೆಯ ಮೂಲಕ ಸಾಹಿತ್ಯದ ಸೃಷ್ಟಿಕ್ರಿಯೆಯನ್ನು ಅವಲೋಕಿಸಿಕೊಳ್ಳಲು ಹೋಗಲಿಲ್ಲ. ಕೊನೆಗೂ ಭಾಷೆಯು ಧ್ವನಿಪೂರ್ಣವಾಗುವುದು: ಧ್ಯಾನಸ್ಥ ಮನಸ್ಥಿತಿಯಿಂದ ಕುವೆಂಪು, ಕಾರಂತರು, ಬೇಂದ್ರೆ, ಜಿ.ಎಸ್.ಎಸ್, ಪು.ತಿ.ನ, ಕೆ.ಎಸ್.ನ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ದೇವನೂರು ಮುಂತಾದವರು ಹೀಗೆ ನಮಗೆ ದತ್ತವಾಗಿರುವಂಥವರು. ಜಗತ್ತಿನ ಎಲ್ಲ ಶ್ರೇಷ್ಠ ಕೃತಿಗಳನ್ನು ಈ ಚೌಕಟ್ಟಿನಲ್ಲಿಯೇ ನೋಡಬೇಕು ಅನ್ನಿಸುತ್ತದೆ. ಆಗ ನಮ್ಮ ಚಿಂತನೆಯ ವ್ಯಾಪ್ತತೆಗೆ ಧಕ್ಕೆ ಬರುವುದಿಲ್ಲ ಎಂದು ಭಾವಿಸುವೆ.
 
ದಂಡಪ್ಪನವರ ಓದು ಮತ್ತು ಚಿಂತನೆಯ ಬೇಸು ಗಾಢವಾಗಿರುವುದರಿಂದ ಇದನ್ನು ಹೇಳಬೇಕಾಯಿತು ಅನ್ನಿಸಿದೆ. ಯಾಕೆಂದರೆ ಅವರು ರಾಘವೇಂದ್ರ ಖಾಸನೀಸ ಅಂಥವರನ್ನು ಹಾಗೂ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ವನ್ನು ಕುರಿತು ಚರ್ಚಿಸುವಾಗ; ನೇರ ಕೃತಿಯ ಚೈತನ್ಯಕ್ಕೆ ಪ್ರವೇಶ ಮಾಡುತ್ತಾರೆ. ಆಗ ಉದಾಹರಿಸುವ ಸಾಲುಗಳಿವು: ನವ್ಯದ ಒಂದು ಲಕ್ಷಣ ಅಂತರಂಗದ ತೊಳಲಾಟ. ಈ ಅಂತರಂಗದ ತೊಳಲಾಟವನ್ನು ತನ್ನದೇ ಆದ ಶೈಲಿಯಲ್ಲಿ ಹಿಡಿದಿಟ್ಟಿರುವ ಖಾಸನೀಸರು ವೇಶ್ಯೆಯರ ಮಾನಸಿಕ ಸ್ಥಿತಿಗತಿಗಳ ಸ್ವರೂಪವನ್ನು ಅನಾವರಣಗೊಳಿಸಿ ಓದುಗರ ಹೃದಯ ಮಿಡಿಯುವಂತೆ ಮಾಡಿಬಿಡುತ್ತಾರೆ. ಅವಳಲ್ಲಿ ಹಣವಿದೆ, ಒಂದು ಬಗೆಯ ಸುಖ ಇದೆ, ಆದರೂ ಅವಳು ಯಾವುದಕ್ಕೋ ಕಾತರಿಸುತ್ತಾಳೆ.’’ ಎಂಬಲ್ಲಿಯೂ ‘ಸ್ವಪ್ನ ಸಾರಸ್ವತ’ ಕಾದಂಬರಿಯ ಸಂದರ್ಭದಲ್ಲಿ ಹೀಗೆ ಪ್ರತಿಕ್ರಿಯಿಸುತ್ತಾರೆ: ‘‘ಈ ಕಾದಂಬರಿಯಲ್ಲಿ ಗಮನಿಸಬೇಕಾದ ಅಂಶವೆಂದರೆ ಪುರಾಣ, ಐತಿಹ್ಯ, ಆಧುನಿಕತೆ, ಸಂಪ್ರದಾಯ ಮುಂತಾದವುಗಳನ್ನು ಗ್ರಹಿಕೆ ಮತ್ತು ಅಭಿವ್ಯಕ್ತಿ ನೆಲೆಗಳನ್ನು ಸಮತೂಕದಲ್ಲಿ ಬೆರೆಸುತ್ತ ಬರವಣಿಗೆಯನ್ನು ಕಲಾತ್ಮಕವಾಗಿಸಿರುವುದು. ನಿಜವಾದ ಕಥನ ಸೃಷ್ಟಿಯಾಗುವುದೇ ಸಮಕಾಲೀನತೆ, ಆಧುನಿಕತೆ ಚರಿತ್ರೆ, ಇತಿಹಾಸ ಪುರಾಣಗಳು ಹದವಾಗಿ ಬೆರೆತ ಬರವಣಿಗೆಯಲ್ಲಿ ಎಂಬುದು ಸ್ಪಷ್ಟ. ಇದಕ್ಕೆ ಉದಾಹರಣೆಯೆಂದರೆ ‘ನಾಗ್ಡೊ ಬೇತಾಳ’’ ಎಂದು ಸಮತೂಕದ ಅಭಿಪ್ರಾಯಕ್ಕೆ ಬರುವರು. ಈ ವಿಧವಾದ ಸಮತೋಲನವನ್ನು ಕೃತಿಯ ಉದ್ದಕ್ಕೂ ಕಾಯ್ದುಕೊಂಡು ಬಂದಿದ್ದಾರೆ. ಮೂರುವರೆ ದಶಕಗಳಲ್ಲಿ ಬರೆದ ಲೇಖನಗಳಾಗಿರುವುದರಿಂದ; ಕೆಲವು ಕಡೆ ಅತ್ಯಂತ ಸರಳ ಪ್ರಮಾಣದಲ್ಲಿ ನೋಟದ ಸಾತತ್ಯವು ಚಲಿಸಿದ್ದರೂ; ಒಟ್ಟು ಚಿಂತನಾ ಕ್ರಮವು ವಿರುದ್ಧಾರ್ಥವನ್ನು ಪಡೆಯುವುದಿಲ್ಲ. ಎಲ್ಲವನ್ನೂ ಆಪ್ತತೆಯಿಂದಲೇ ನೋಡಲು ಸಾಧ್ಯವಾಗುತ್ತದೆ. ‘ಕವಿ ರವೀಂದ್ರ: ಒಂದು ಅವಲೋಕನ ಮತ್ತು ಅಮೃತಪ್ರೀತಂ ಅವರ ‘ರಸೀದಿ ತಿಕೀಟು’ ಎಂಥ ಒಳನೋಟಗಳಿಂದ ಕೂಡಿದ ಲೇಖನಗಳು ಅನ್ನಿಸಿತು. ಪರಿಚಯಿಸಿರುವ ನೋಟದಲ್ಲಿ ಅದಮ್ಯತೆ ಗಾಢವಾಗಿ ದಟ್ಟಗೊಂಡಿರುವುದನ್ನು ಕಾಣಬಹುದು. ‘‘ಭಾರತೀಯ ಸಾಹಿತ್ಯ ಸಮೀಕ್ಷೆ ಮಾಡುವ ಎಲ್ಲಾ ವಿದ್ವಾಂಸರು ಭಾರತೀಯ ಭಾಷೆಯ ಪ್ರಮುಖ ಲೇಖಕರ ಮೇಲೆ ರವೀಂದ್ರರ ಪ್ರಭಾವವನ್ನು ಗುರುತಿಸಿದ್ದಾರೆ. ಕೆಲವರಿಗೆ ರವೀಂದ್ರರ ರಹಸ್ಯೋನ್ಮುಖ ಸೌಂದರ್ಯ ದೃಷ್ಟಿ ಪ್ರಭಾವ ಬೀರಿದ್ದರೆ ಮತ್ತೆ ಕೆಲವರಿಗೆ ರವೀಂದ್ರರ ಕಾವ್ಯದ ಅರ್ಥಛಾಯೆಗಳು ಪ್ರಯೋಗ ವಕ್ರತೆಗಳು ಪ್ರಭಾವ ಬೀರಿವೆ. ಮತ್ತೆ ಕೆಲವರು ರವೀಂದ್ರರು ಬಳಸಿದ್ದ ರಮ್ಯಾದ್ಭುತ ಪ್ರತೀಕ ವಿಧಾನಗಳನ್ನು ಮೆಚ್ಚಿ ಅದರಿಂದ ಪ್ರಭಾವಿತರಾಗಿದ್ದಾರೆ. ‘‘ಇದೊಂದು ಅದ್ಭುತ ನೋಟವೇ ಆಗಿದೆ. ರವೀಂದ್ರರನ್ನು ಗ್ರಹಿಸುವುದಕ್ಕೆ ಮಾರ್ಗಸೂಚಿಯಾಗಿದೆ. ಹಾಗೆಯೇ ಅಮೃತ ಪ್ರೀತಂ ಅವರ ‘ರಸೀದಿ ತಿಕೀಟು’ ಪರಿಚಯಿಸುತ್ತ ಸೂಕ್ಷ್ಮ ಒಳನೋಟಗಳನ್ನು ವಿಸ್ತರಿಸುತ್ತಾರೆ. ಯಾಕೆಂದರೆ ಅಮೃತ ಪ್ರೀತಂ ಅವರು ಬರವಣಿಗೆ ಮತ್ತು ಬದುಕಿನಲ್ಲಿ ದಿಟ್ಟತೆಯನ್ನು ತೋರಿಸಿದ ಅಪರೂಪದ ಲೇಖಕ.


ಇದಕ್ಕೆ ದಂಡಪ್ಪ ಅವರು ತಮ್ಮ ಒಳನೋಟವನ್ನು ದಾಖಲಿಸುವುದು ಹೀಗೆ: ‘‘ಆತ್ಮಕಥೆಯನ್ನು ಬರೆಯುವುದು ಸುಲಭವೇನಲ್ಲ. ಇದನ್ನು ಬರೆಯುವವನು ತನ್ನ ಬೇಕು ಬೇಡಗಳಿಂದ ಪ್ರಭಾವಿತನಾಗದೆ, ವಿಶೇಷ ಭಾವೋದ್ರೇಕಕ್ಕೆ ಒಳಗಾಗದೆ ತನ್ನ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ನಿರೂಪಿಸುವ ಸಂಯಮ ರೂಢಿಸಿಕೊಳ್ಳಬೇಕು... ‘ರಸೀದಿ ತಿಕೇಟು’ ಆತ್ಮಕಥೆಯಲ್ಲಿ ಅಮೃತಾ ಅವರು ತಮ್ಮ ಬದುಕಿನ ಏರಿಳಿತಗಳನ್ನು, ಬದುಕಿನಲ್ಲಿ ಕಂಡ ಕಹಿ ಅನುಭವಗಳನ್ನು ದಾಖಲಿಸಿದ್ದಾರೆ. ಇಲ್ಲಿ ಅವರ ನಿರಂಕುಶಮತಿಯ ದಿಟ್ಟತನವಿದೆ. ಬದುಕಬೇಕೆಂಬ ಛಲವಿದೆ. ಪಂಜಾಬಿನ ಲೇಖಕರೆಲ್ಲಾ ಅವರ ವಿರುದ್ಧವಿದ್ದಾಗಲೂ ತನ್ನತನವನ್ನು ಉಳಿಸಿಕೊಂಡ ಮನೋಸ್ಥೈರ್ಯದ ವಿವರಗಳಿವೆ.’’ ಎಂದು ವಿಶ್ಲೇಷಣೆಗೊಳಪಡಿಸುವಾಗ; ದಂಡಪ್ಪ ಅವರ ವಿಚಾರಧಾರೆಯ ಪಕ್ವತೆ ಎದ್ದು ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ: ಅಭಿರುಚಿ ಮತ್ತು ಒಳನೋಟಗಳು ಸಮನ್ವಯತೆಯನ್ನು ಕಾಯ್ದುಕೊಂಡು ಹೋಗುವುದು. ನನ್ನ ಅರಿವು ಮತ್ತು ಓದಿಗೆ ಅನುಗುಣವಾಗಿ ಇಲ್ಲಿಯ ಎಲ್ಲ ಲೇಖನಗಳು ಒಂದಲ್ಲ ಒಂದು ವಿಧದಲ್ಲಿ; ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಒತ್ತಾಯಮಾಡುತ್ತವೆ. ಯಾಕೆಂದರೆ, ಒಟ್ಟು ಬರವಣಿಗೆಯಲ್ಲಿ ದಟ್ಟತೆ ಇರುವುದರಿಂದ. ಇದಕ್ಕೆ ಮುಖ್ಯ ಕಾರಣ: ಅವರ ಪ್ರಾಮಾಣಿಕ ಓದು. ಜೊತೆಗೆ ಸಮಕಾಲೀನ ಆಗುಹೋಗುಗಳನ್ನು ಕುರಿತಂತೆ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿರುವುದು. ಬಹಳಷ್ಟು ಬಾರಿ ಇದು ಕಷ್ಟದ ಕೆಲಸ. ಯಾಕೆಂದರೆ, ಎಂತೆಂಥದೋ ವಾಗ್ವಾದಗಳು ಮತ್ತು ಸಂವಾದಗಳು ನಡೆಯುತ್ತಿರುವುದರಿಂದ ಪ್ರತಿಕ್ಷಣವೂ ತಮ್ಮ ಚಿಂತನೆಗಳನ್ನು ಪರೀಕ್ಷಿಸಿಕೊಳ್ಳುತ್ತಲೇ ಮುಂದೆ ಸಾಗಬೇಕಾಗುತ್ತದೆ. ಆ ದ್ರಷ್ಟಾರತೆ ದಂಡಪ್ಪ ಅವರಲ್ಲಿ ಇದೆ. ಅದನ್ನು ಸಂವರ್ಧನೆಗೊಳಿಸಿಕೊಳ್ಳುತ್ತಲೇ ದೀರ್ಘಪ್ರಮಾಣದ ಕೃತಿಯೂ ಅವರಿಂದ ಬರಲು ಸಾಧ್ಯವಿದೆ. ಶ್ರೀಮಂತ ಓದಿಗೆ ಸದಾ ತಹತಹಿಸುವಂಥವರು; ತೃಪ್ತತೆಯ ಹುಡುಕಾಟದಲ್ಲಿಯೇ ಇರುತ್ತಾರೆ. ಈ ಕೃತಿಯು ಬೆಂಗಳೂರಿನ ‘ಸಿರಿವರ ಪ್ರಕಾಶನ’ದಿಂದ ಹೊರಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News