×
Ad

ಕೈಗಳಿಲ್ಲದಿದ್ದರೇನಂತೆ ಕಾಲುಗಳಿಲ್ಲವೇ? ಕಾಶ್ಮೀರದ ಸಾಹಸಿ ಕ್ರಿಕೆಟಿಗನ ಕಥೆಯಿದು

Update: 2016-03-05 14:21 IST

ಶ್ರೀನಗರ : ದಕ್ಷಿಣ ಕಾಶ್ಮೀರದ ಬಿಜ್‌ಬೆಹರಾ ಗ್ರಾಮದಈ ಭಿನ್ನ ಸಾಮರ್ಥ್ಯದ ಯುವಕನ ಜೀವನಕಥೆ ಎಂತಹವರನ್ನೂ ಚಕಿತಚಿತ್ತರನ್ನಾಗಿಸಬಹುದು. ಆತನ ಛಲ, ಸಾಹಸ, ಧೈರ್ಯ ಹಾಗೂ ಮನೋಬಲವೇ ಆತನ ಶಕ್ತಿಯಾಗಿದೆ.

ಈ ಯುವಕನ ಹೆಸರೇ ಅಮೀರ್ ಹುಸೈನ್. ಎಂಟು ವರ್ಷದವನಿರುವಾಗ ಮರದ ಮಿಲ್ಲಿನಲ್ಲಿ ನಡೆದ ದುರ್ಘಟನೆಯೊಂದರಲ್ಲಿ ತನ್ನೆರಡೂ ಕೈಗಳನ್ನು ಕಳೆದುಕೊಂಡ ನತದೃಷ್ಟನೀತ. ಮೂರು ವರ್ಷಗಳ ತನಕ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂತು.ಹಳ್ಳಿಯ ಕೆಲವರಂತೂ ಈತ ಇನ್ನುತನ್ನ ಕುಟುಂಬಕ್ಕೆದೊಡ್ಡ ಹೊರೆಯಾಗುತ್ತಾನೆ ಹಾಗೂ ತಿಳಿದುಕೊಂಡು ಬಿಟ್ಟಿದ್ದರು, ಕೆಲವರು ಆತನ ತಂದೆಗೆ ‘ಈ ಪೀಡೆಯನ್ನು ತೊಲಗಿಸುವಂತೆಯೂ’ ಸಲಹೆ ನೀಡಿದ್ದರು. ಆದರೆ ಇಂದು ಎಲ್ಲರನ್ನೂ ಸುಳ್ಳಾಗಿಸಿ ಅಮೀರ್ ತನ್ನ ಕುಟುಂಬದ ಹೆಮ್ಮೆಯ ದ್ಯೋತಕವಾಗಿದ್ದಾನೆ.
ಇಂದು ಆತನ ಎರಡು ಕಾಲುಗಳೇ ಆತನಿಗೆ ಕೈಗಳಿಗಿಂತಲೂಮಿಗಿಲಾಗಿವೆ. ಆತ ಈಜಾಡಲು ಕಲಿತಿದ್ದಾನೆ ಹಾಗೂ ಕ್ರಿಕೆಟ್ ಆಟದಲ್ಲಿ ನಿಪುಣನಾಗಿದ್ದಾನೆ. ಇಂದು ಆತಜಮ್ಮು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕನೂ ಹೌದು.
ಬಾತುಕೋಳಿಯಂತೆ ಈಜಾಡುವುದನ್ನು ಮೊದಲು ಅಭ್ಯಾಸ ಮಾಡಿದ ಅಮೀರ್ ನಂತರ ಕ್ರಿಕೆಟ್ ಆಟ ಕಲಿಯಲು ಶುರುವಿಟ್ಟುಕೊಂಡ. ಬ್ಯಾಟನ್ನು ತನ್ನ ಗಲ್ಲ ಹಾಗೂ ಭುಜದ ನಡುವೆ ಇರಿಸಿ ಅಮೀರ್ ಚೆಂಡನ್ನು ಬಾರಿಸುವುದನ್ನು ನೋಡುವುದೇ ಒಂದು ಅಚ್ಚರಿ. ತನ್ನ ಬಲಗಾಲಿನ ಬೆರಳುಗಳ ಸಹಾಯದಿಂದಊಟ ಮಾಡುವ ಅಮೀರ್ ಇವೇ ಬೆರಳುಗಳನ್ನು ಉಪಯೋಗಿಸಿ ಬರೆಯುತ್ತಾರೆ ಹಾಗೂ ಇನ್-ಸ್ವಿಂಗ್ ಹಾಗೂ ಔಟ್-ಸ್ವಿಂಗ್‌ಗಳನ್ನೂ ಎಸೆಯುತ್ತಾರೆ. ಅಮೀರ್ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಗ ಅವರ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರೊಬ್ಬರು ಅಮೀರ್ ಅವರನ್ನು ಪ್ಯಾರಾ ಕ್ರಿಕೆಟ್‌ಗೆ ಪರಿಚಯಿಸಿದ್ದರು.
‘‘ನಾನು ಯಾವುದಕ್ಕೂ ಪ್ರಯೋಜನವಿಲ್ಲದವನು ಎಂಬ ಜನರ ಭಾವನೆಯೇ ನನಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಮೂಡಿಸಿತು,’’ಎನ್ನುತ್ತಾರೆ ಅಮೀರ್. ಅವರ ತಂದೆ ಬಶೀರ್ ಅಹಮದ್ ತಮ್ಮ ಮಗನಿಗೆ ಯಾವತ್ತೂ ಬೆನ್ನೆಲುಬಾಗಿ ನಿಂತಿದ್ದಾರೆ.
ತನ್ನಂತಹ ಅಂಗವಿಕಲರಿಗೆ ಸಾಕಷ್ಟು ನೆರವು ನೀಡುತ್ತಿಲ್ಲವೆಂಬುದು ಅಮೀರ್‌ಗಿರುವ ಒಂದೇ ಕೊರಗು. ಕ್ರೀಡಾ ಅಥವಾ ಅಂಗವಿಕರಖೋಟಾದಡಿಯಲ್ಲಿ ತನಗೆ ನೌಕರಿಯೊಂದು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಈ ಸಾಹಸಿ ಯುವಕ.

courtesy : hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News