ಹಳ್ಳಿಗರು ಕುಡಿಯುವ ನೀರು ತೆಗೆಯದಂತೆ ಕೋವಿಧಾರಿಗಳನ್ನು ಕಾವಲಿರಿಸಿದ ಮಧ್ಯಪ್ರದೇಶದ ಮುನ್ಸಿಪಾಲಿಟಿ!
ಮಧ್ಯಪ್ರದೇಶ,ಮಾರ್ಚ್.5: ಜಗತ್ತು ಇನ್ನು ಮುಂದೆ ನೀರು, ಗಾಳಿಗಾಗಿ ಯುದ್ಧ ಮಾಡಲಿದೆ ಎಂಬ ಬಗ್ಗೆ ಸಂದೇಹ ಬೇಕಿಲ್ಲ. ಅದರ ಆರಂಭದ ಸೂಚನೆಗಳೇ ಈಗ ಕಾಣಿಸುತ್ತಿವೆ. ಜನರು ನೀರು ತೆಗೆಯದಿರಲಿ ಎಂದು ಮಧ್ಯಪ್ರದೇಶದ ತಿಕಂಗರ್‌ನಲ್ಲಿ ಜಮುನಿಯಾ ನದಿಗೆ ಮುನ್ಸಿಪಾಲಿಟಿ ಅಧಿಕಾರಿಗಳು ಕೋವಿಧಾರಿ ಕಾವಲುಗಾರರನ್ನು ನೇಮಿಸಿದ್ದಾರೆ!
ಬಾರಿಗಡ್ ಅಣೆಕಟ್ಟಿನಿಂದ ಕುಡಿವ ನೀರು ಉತ್ತರ ಪ್ರದೇಶದ ಬರ ಪೀಡಿತ ಕ್ಷೇತ್ರದ ಜನರು ಕದಿಯಬಾರದೆಂದು ಈ ಮೊದಲೆಲ್ಲೂ ಕಾಣದಿದ್ದ ಇಂತಹ ಕೆಲಸಕ್ಕೆ ಮುನ್ಸಿಪಾಲಿಟಿ ಇಳಿದಿದೆ. ಕಠಿಣ ಬರ ಪೀಡಿತ ನಗರವಾದ ಬುಂದೇಲ್ ಖಂಡ್ ಸಮೀಪದಲ್ಲಿ ಈ ಮಧ್ಯಪ್ರದೇಶದ ನಗರ ಇದೆ. ರಾತ್ರಿಯಲ್ಲಿ ಅಣೆಕಟ್ಟಿನಿಂದ ನೀರು ತೆಗೆಯಲು ಬರುವುದನ್ನು ನಿಲ್ಲಿಸಲಿಕ್ಕಾಗಿ ಕೋವಿಧಾರಿ ಕಾವಲು ಭಟರನ್ನು ನೇಮಿಸಲಾಗಿದೆ.
ಮಧ್ಯಪ್ರದೇಶ ನಗರಸಭೆಯ ಕ್ರಮ ಅಮಾನವೀಯವಾದುದೆಂದು ಮಾನವಹಕ್ಕು ಕಾರ್ಯಕರ್ತರು ಹೇಳಿದ್ದಾರೆ. ಬರ ಪ್ರದೇಶದ ಏಕೈಕ ಕುಡಿವ ನೀರಿನ ಆಶ್ರಯ ಜಮುನಿಯ ನದಿ ಆಗಿರುವುದರಿಂದ ಅವರು ತಗಾದೆ ಎತ್ತಿದ್ದಾರೆ. ಕಠಿಣ ಬರ ವಿರುವ ಈ ಗ್ರಾಮ ನಿವಾಸಿಗಳನ್ನು ಕುಡಿಯುವ ನೀರಿಗಾಗಿ ಯುದ್ಧ ಮಾಡಬೇಕಾದ ಪರಿಸ್ಥಿತಿಗೆ ದೂಡಿಹಾಕಲಾಗಿದೆ.