ಕನ್ಹಯ್ಯ ‘ಹೀರೊ’ ಅಲ್ಲ ನೀತಿಭ್ರಷ್ಟ: ರೂಡಿ

Update: 2016-03-06 18:50 GMT

ಕೋಲ್ಕತಾ: ಜೆಎನ್‌ಯು ಸಂಘದ ನಾಯಕ ಕನ್ಹಯ್ಯ ಕುಮಾರ್ ಒಬ್ಬ ‘ಹೀರೊ’ ಅಲ್ಲ. ಆತನೊಬ್ಬ ನೀತಿಭ್ರಷ್ಟನೆಂದು ಕೇಂದ್ರ ಸಚಿವ ರಾಜೀವ್‌ಪ್ರಸಾದ್ ರೂಡಿ ಹೇಳಿದ್ದಾರೆ. ಎಡ ಪಕ್ಷಗಳು ವಿಶ್ವವಿದ್ಯಾನಿಲಯ, ಮಾಧ್ಯಮ ಹಾಗೂ ಎನ್‌ಜಿಒಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅವರು ಒತ್ತಿ ಹೇಳಿದ್ದಾರೆ.
ವಿಶ್ವದ ಹೆಚ್ಚಿನ ಭಾಗಗಳಲ್ಲಿ ಎಡಪಕ್ಷಗಳು ವಿಘಟನೆಯಾಗಿವೆ. ಅವುಗಳಿಗೆ ರಾಜಕೀಯ ದೃಶ್ಯದಲ್ಲಿ ಸ್ಥವೇ ಇಲ್ಲವಾಗಿದೆ. ಆದುದರಿಂದ ಅವು ಮಾಧ್ಯಮ, ವಿಶ್ವವಿದ್ಯಾನಿಲಯ ಹಾಗೂ ಎನ್‌ಜಿಒಗಳತ್ತ ಸಾಗುತ್ತಿವೆಯೆಂದು ರೂಡಿ ಪತ್ರಕರ್ತರಿಗಿಲ್ಲಿ ತಿಳಿಸಿದರು.
ಇವುಗಳ ಮೂಲಕ ಅವು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿವೆಯೆಂದು ಅವರು ಹೇಳಿದರು.
ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕನ್ಹಯ್ಯಿನನ್ನು ಬಳಸಿಕೊಳ್ಳುವ ಯೋಜನೆ ಎಡಪಕ್ಷಗಳಲ್ಲಿದೆ. ಆತ ಹೀರೊ ಆಗಿದ್ದಾನೆಯೇ? ಎಂಬ ಪ್ರಶ್ನೆಗೆ ಕನ್ಹಯ್ಯೆ ನೀತಿ ಭ್ರಷ್ಟನೆಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಉತ್ತರಿಸಿದರು.
ರಾಷ್ಟ್ರೀಯ ವಾದದಲ್ಲಿ ನಂಬಿಕೆಯಿರುವ ಹಾಗೂ ಸರಿಯಾಗಿ ಯೋಚಿಸುವ ಯಾವನೇ ವ್ಯಕ್ತಿ ಕನ್ಹಯ್ಯಿನ ಕೃತ್ಯ ಹಾಗೂ ಭಾಷಣಗಳನ್ನು ಸಹಿಸಲಾರನೆಂದು ಅವರು ಹೇಳಿದರು.
ಕೇಂದ್ರದ ಎನ್‌ಡಿಎ ಸರಕಾರವು ದೇಶದ್ರೋಹ ಕಾನೂನಿಗೆ ಯಾವುದಾದರೂ ಬದಲಾವಣೆ ತರಲು ಚಿಂತಿಸಿದೆಯೇ ಎಂಬ ಪ್ರಶ್ನೆಗೆ, ಈಗಾಗಲೇ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ. ಅವುಗಳ ವ್ಯಾಖ್ಯಾನ ನ್ಯಾಯಾಂಗದ ಬಳಿಯಿದೆ ಎಂದು ರೂಡಿ ಉತ್ತರಿಸಿದರು.
ಜೆಎನ್‌ಯು ವಿವಾದವನ್ನುಲೇಖಿಸಿದ ಅವರು, ದೇಶ ವಿರೋಧಿ ಕೃತ್ಯಗಳೊಂದಿಗೆ ಅಸಹಿಷ್ಣುತೆಯ ಪ್ರಶ್ನೆಯನ್ನು ಮಿಶ್ರ ಮಾಡಬಾರದು ಹಾಗೂ ದೇಶದ್ರೋಹದ ಕೃತ್ಯಗಳೊಂದಿಗೆ ಯಾವುದೇ ರಾಜಿ ಮಾಡಬಾರದೆಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News