×
Ad

ಹೈಸ್ಕೂಲ್ ಪರೀಕ್ಷೆ ಬರೆಯದೆ ಸಪ್ತಪದಿ ತುಳಿಯಲು ನಿರಾಕರಿಸಿದ ವಧು!

Update: 2016-03-07 11:50 IST

ಮಹೋಬಾ, ಮಾರ್ಚ್.7: ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಧುವೊಬ್ಬಳು ಶಿಕ್ಷಣಕ್ಕೆ ತನ್ನನ್ನು ಸಮರ್ಪಿಸಿಕೊಂಡ ಅನನ್ಯ ಉದಾಹರಣೆ ವರದಿಯಾಗಿದೆ. ಇಲ್ಲಿನ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ತಾನು ಪರೀಕ್ಷೆಯನ್ನು ಬರೆಯದೆ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದು ಕೊನೆಗೆ ಅವಳು ತನ್ನ ಹಟವನ್ನು ಸಾಧಿಸಿದ್ದಾಳೆ. ಮದುವೆಯ ಕನಸು ಕಾಣುವ ಯುವತಿಯರಿಗಿಂತ ಭಿನ್ನವಾಗಿ ಶಿಕ್ಷಣಕ್ಕೆ ಸಮರ್ಪಣಾ ಭಾವನೆಯನ್ನು ಅವಳು ವ್ಯಕ್ತಪಡಿಸಿದ್ದಾಳೆ. ಕರ್ಬಾಯಿ ವಿಕಾಸ್‌ಖಂಡ್‌ನ ಶ್ರೀನಗರದ ರಾಜೂ ಸೇನರ ಹದಿನೆಂಟು ವರ್ಷ ಪ್ರಾಯದ ಪುತ್ರಿ ಕೋಮಲ್‌ಳ ವಿವಾಹವನ್ನು ರಾಜೀವ್ ಸೇನ ಎಂಬಾತನೊಂದಿಗೆ ನಡೆಸಲು ನಿರ್ಧರಿಸಲಾಗಿತ್ತು,. ಕಳೆದ ಮಾರ್ಚ್ ನಾಲ್ಕರಂದು ಮದುವೆ ದಿಬ್ಬಣವೂ ಬಂದಿತ್ತು.

ರಾತ್ರೆಯಲ್ಲಿ ಮದುವೆಯ ವಿಧಿವಿಧಾನಗಳೆಲ್ಲವೂ ನಡೆದು ಮರುದಿನ ಬೆಳಗ್ಗೆ ವರ ಮತ್ತು ವಧುವಿನ ಸಪ್ತಪದಿ ತುಳಿಯಲು ಸಿದ್ಧತೆ ನಡೆಸುವಾಗ ಕೋಮಲ್ ತನ್ನ ಹೈಸ್ಕೂಲ್ ಪರೀಕ್ಷೆಯ ಕೊನೆಯ ಪ್ರಶ್ನೆ ಪತ್ರಿಕೆಗೆ ಬರೆಯಲು ಸಿದ್ಧತೆ ನಡೆಸುತ್ತಿದ್ದಳು. ಪರೀಕ್ಷೆ ಬರೆಯದೆ ತಾನು ಸಪ್ತಪದಿ ತುಳಿಯಲಾರೆ ಎಂದು ಹಟ ತೊಟ್ಟದ್ದಲ್ಲದೆ ಯಾರು ಎಷ್ಟೇ ಸಮಾಧಾನಿಸಿದರೂ ಅವಳುಕೇಳಲು ಸಿದ್ಧಳಿರಲಿಲ್ಲ. ಅಂತಿಮವಾಗಿ ಅವಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಪರೀಕ್ಷೆ ಬರೆದ ನಂತರ ಅವಳು ವರನೊಂದಿಗೆ ಸಪ್ತಪದಿಯನ್ನು ತುಳಿದಳು. ಭಾರೀ ಹಿಂದುಳಿದಿರುವ ಬುಂದೇಲ್‌ಖಂಡದ ಸುಮಾರು 25ಸಾವಿರ ಜನಸಂಖ್ಯೆಯ ಶ್ರೀನಗರ ಗ್ರಾಮದಲ್ಲಿ ನಡೆದ ಈ ಶಿಕ್ಷಣಕ್ಕೆ ಅದಮ್ಯ ಪ್ರೀತಿಯ ಘಟನೆ ಕಣ್ಣು ತೆರೆಸುವಂತಿದೆ. ಕೋಮಲ್‌ಳ ಪತಿ ರಾಜೀವ್ ಪತ್ನಿಯ ಕಲಿಕೆಯ ಪ್ರೇಮವನ್ನು ಶ್ಲಾಘಿಸಿದ್ದಲ್ಲದೆ ಶಿಕ್ಷಣ ಮುಂದುವರಿಸಲು ನೆರವಾಗುವುದಾಗಿ ತಿಳಿಸಿದ್ದಾನೆ.ನವೋದಯ ಮಹಾ ವಿದ್ಯಾಲಯದ ಪ್ರಾಚಾರ್ಯ ವಿಶ್ವನಾಥ್ ಸಿಂಗ್‌ರು ಈ ಕುರಿತು ಪ್ರತಿಕ್ರಿಯಿಸುತ್ತಾ ಶೆ. 56ರಷ್ಟು ಮಾತ್ರ ಸಾಕ್ಷರತೆ ಇರುವ ಸಣ್ಣ ಗ್ರಾಮದ ಈ ಘಟನೆ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಗಬಹುದು ಮತ್ತು ಜನರಲ್ಲಿ ಶಿಕ್ಷಣದ ಕುರಿತು ಅಭಿರುಚಿಯನ್ನು ಹೆಚ್ಚಿಸಬಹುದೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News