ನಿತ್ಯಾಮೆನನ್ ಮತ್ತೆ ಸ್ಯಾಂಡಲ್‌ವುಡ್ ಗೆ
ಬಹುಭಾಷಾ ನಟಿ ನಿತ್ಯಾಮೆನನ್, ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೂ ಚಿರಪರಿಚಿತಳು. ನಾಗಶೇಖರ್ ನಿರ್ದೇಶನದ ‘ಮೈನಾ’ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ, ನಿತ್ಯಾಮೆನನ್ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ನಿತ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ ಕೊಡುತ್ತಿದ್ದಾರೆ. ಸುದೀಪ್ ನಾಯಕನಾಗಿ ನಟಿಸುತ್ತಿರುವ ‘ಕೋಟಿಗೊಬ್ಬ 2’ಗೆ ಈಕೆ ನಾಯಕಿ. ತಮಿಳಿನಲ್ಲೂ ಈ ಚಿತ್ರವು ‘ಮುಡಿಂಜ ಇವನಾ ಪುಡಿ’ ಎಂಬ ಹೆಸರಿನೊಂದಿಗೆ ಏಕಕಾಲದಲ್ಲಿ ತಯಾರಾಗುತ್ತಿದೆ.
ನಿತ್ಯಾ ಮೆನನ್ ಮಾತೃಭಾಷೆ ಮಲಯಾಳಂ ಆದರೂ, ಆಕೆಗೆ ಹುಟ್ಟಿನಿಂದಲೇ ಕರ್ನಾಟಕದ ನಂಟಿದೆ. ಹೌದು. ಬೆಂಗಳೂರಿನಲ್ಲಿ ಜನಿಸಿದ ನಿತ್ಯಾ ಮೆನನ್ ಈಗಾಗಲೇ ಐದು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಸೆವನ್ ಓ ಕ್ಲಾಕ್’ ಕನ್ನಡ ಚಿತ್ರದ ಮೂಲಕ ಈಕೆ ಮೊದಲ ಬಾರಿಗೆ ಸಿನೆಮಾರಂಗ ಪ್ರವೇಶಿಸಿದ್ದರು. ಮೈನಾ ಚಿತ್ರದಲ್ಲಿ ಒಂದು ಹಾಡು ಸಹ ಹಾಡಿದ್ದರು.
‘ಕೋಟಿಗೊಬ್ಬ 2’ ಮೂಲಕ ನಿತ್ಯಾ ಇನ್ನೊಂದು ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ.ಈ ಚಿತ್ರಕ್ಕೆ ಅವರು ತಾನೇ ಡಬ್ಬಿಂಗ್ ಮಾಡಲಿದ್ದಾರೆ. ಕೋಟಿಗೊಬ್ಬ 2 ಮೂಲಕ ಕನ್ನಡ ಪ್ರೇಕ್ಷಕರ ಮನಗೆಲ್ಲುವನೆಂಬ ಭರವಸೆ ನಿತ್ಯಾ ಹೊಂದಿದ್ದಾಳೆ.
ಚಿತ್ರದ ಶೂಟಿಂಗ್ ಅಂತಿಮ ಘಟ್ಟದಲ್ಲಿದ್ದು ಸುದೀಪ್ ಅಭಿನಯದ ಕೆಲವು ಸನ್ನಿವೇಶಗಳು ಹಾಗೂ ಮೂರು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ತಮಿಳಿನಲ್ಲಿ ಕಮಲಹಾಸನ್ ಅಭಿನಯದ ದಶಾವತಾರಂ, ರಜನಿ ಅಭಿನಯದ ಲಿಂಗಾ ಸೇರಿದಂತೆ ಹಲವು ಬಿಗ್‌ಬಜೆಟ್ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್.ರವಿಕುಮಾರ್, ಕೋಟಿಗೊಬ್ಬ 2ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಡಿ. ಇಮ್ಮಾನ್ ಸಂಗೀತ ನೀಡಿದ್ದಾರೆ.