×
Ad

ಮಹಿಳಾ ಕೇಂದ್ರಿತ ಥ್ರಿಲ್ಲರ್ ಶ್ರೀದೇವಿ ಜತೆ ನವಾಝುದ್ದೀನ್

Update: 2016-03-07 16:58 IST

ಇಂಗ್ಲೀಷ್ ವಿಂಗ್ಲಿಷ್ ಚಿತ್ರದ ಮೂಲಕ ಭರ್ಜರಿ ರೀ ಎಂಟ್ರಿಮಾಡಿದ್ದ ಖ್ಯಾತ ತಾರೆ ಶ್ರೀದೇವಿ ಈ ಬಾರಿಮಹಿಳಾ ಕೇಂದ್ರಿತ ಥ್ರಿಲ್ಲರ್‌ನೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. ಪತಿ ಬೋನಿ ಕಪೂರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತಾಯಿಯಾಗಿ ಕಾಣಿಸಿಕೊಳ್ಳುವ ಶ್ರೀದೇವಿ ಜತೆಗೆ ನವಾಝುದ್ದೀನ್ ಸಿದ್ದೀಕಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಬಹಿರಂಗವಾಗಿದೆ.

ಈ ಚಿತ್ರದ ಒಪ್ಪಂದಕ್ಕೆ ಹತ್ತು ದಿನ ಹಿಂದೆ ಸಹಿ ಮಾಡಿದ್ದು, ಆ ರೋಮಾಂಚಕ ಚಿತ್ರಕಥೆಯಿಂದ ಖುಷಿಯಾಗಿದೆಎಂದು ನವಾಝ್ ಹೇಳಿದ್ದಾರೆ. ವಿಶೇಷ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಅವರು, ಶ್ರೀದೇವಿ ಜತೆ ಪರದೆ ಹಂಚಿಕೊಳ್ಳುವುದು ಅದ್ಭುತ ಅನುಭವ ಎಂದಿದ್ದಾರೆ. ನನ್ನ ಬಹುತೇಕ ದೃಶ್ಯಗಳು ಶ್ರೀದೇವಿ ಜತೆ ಇದೆ. ನನ್ನ ಪ್ರಕಾರ, ಆಕೆ ದೇಶದ ಅತ್ಯುತ್ತಮ ನಟಿ. ಆಕೆಯ ಹಲವು ಚಿತ್ರಗಳನ್ನು ನೋಡಿದ್ದೇನೆ. ಸದ್ಮಾ ಹಾಗೂ ಚಾಂದಿನಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಇದುವರೆಗೂ ಅವರನ್ನು ಭೇಟಿಯಾಗಿಲ್ಲ. ಸದ್ಯದಲ್ಲೇ ಆಗುತ್ತೇನೆ ಎಂದು 41 ವರ್ಷದ ನಟ ಹೇಳಿಕೊಂಡಿದ್ದಾರೆ.

ರಾಹುಲ್ ಧೋಲಕಿಯಾ ಅವರ ರಯೀಸ್ ಚಿತ್ರದಲ್ಲಿ ಶಾರುಕ್ ಖಾನ್ ಹಾಗೂ ಸಂಜಯ ಘೋಷ್ ಅವರ ’ಇಟಿ 3 ಎನ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗು ವಿದ್ಯಾಬಾಲನ್ ಜತೆಗೆ ಕಾಣಿಸಿಕೊಳ್ಳಲಿರುವ ನವಾಝ್, ಹೊಸ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು 20 ದಿನಗಳ ವೇಳಾಪಟ್ಟಿ. ನನ್ನದೇ ಪ್ರಮುಖ ಪಾತ್ರ. ಪಾತ್ರ ಅರ್ಥ ಮಾಡಿಕೊಳ್ಳಲು ನಿರ್ದೇಶಕ ರವಿ ಉದ್ಯಾವರ್ ಜತೆ ಕೆಲ ಸಮಯ ಕಳೆಯಲಿದ್ದೇನೆ ಎಂದು ಖಚಿತಪಡಿಸಿದರು.

ಎಪ್ರಿಲ್ ಮಧ್ಯಭಾಗದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ಇದಾದ ಬಳಿಕ ಸುಹೈಲ್‌ಖಾನ್ ಅವರ ಚಿತ್ರದಲ್ಲಿ ಅಮಿ ಜಾಕ್ಸನ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಅವರದ್ದು ಗಾಲ್ಫರ್ ಪಾತ್ರ. ನಾನು ಗಾಲ್ಫ್ ಆಡುವುದು ಇಷ್ಟಪಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಎಡೆಬಿಡದ ವೇಳಾಪಟ್ಟಿಯಿಂದ ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ಮತ್ತೆ ಅಭ್ಯಾಸ ಆರಂಭಿಸುತ್ತೇನೆ ಎನ್ನುತ್ತಿದ್ದಾರೆ ಸಿದ್ದೀಕಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News